
ಬೆಂಗಳೂರು :ಕೋಲಾರದಲ್ಲಿ ಮಹಿಳೆಯಲ್ಲಿ ವಿಶ್ವದಲ್ಲಿ ಬೇರೆಲ್ಲೂ ಇಲ್ಲದ ಅಪರೂಪದ ರಕ್ತ ಪತ್ತೆ ; ಹತ್ತು ತಿಂಗಳ ಸಂಶೋಧನೆ ಬಳಿಕ 'ಒ ಪಾಸಿಟಿವ್ ಸಿಆರ್ ಐಬಿ' ಹೆಸರು ಘೋಷಣೆ

ಬೆಂಗಳೂರು, ಜುಲೈ 31 : ಕೋಲಾರ ಜಿಲ್ಲೆಯ ಮಹಿಳೆಯೊಬ್ಬರಲ್ಲಿ ವಿಶ್ವದಲ್ಲಿ ಈವರೆಗೆ ಬೇರೆ ಯಾವ ಮನುಷ್ಯರಲ್ಲು ಪತ್ತೆಯಾಗದ ಅಪರೂಪದ ರಕ್ತದ ಗುಂಪು ಪತ್ತೆಯಾಗಿದ್ದು, ಹತ್ತು ತಿಂಗಳ ಸಂಶೋಧನೆಯ ಬಳಿಕ ರಕ್ತಕ್ಕೆ ''ಒ ಪಾಸಿಟಿವ್ ಸಿಆರ್ ಐಬಿ'' ಎಂದು ಹೆಸರು ಕೊಡಲಾಗಿದೆ.
ಹೃದಯ ಶಸ್ತ್ರಚಿಕಿತ್ಸೆಗಾಗಿ ಬಂದಿದ್ದ 38 ವರ್ಷದ ಮಹಿಳೆಯೊಬ್ಬರು ಕೋಲಾರದ ಜಾಲಪ್ಪ ಆಸ್ಪತ್ರೆಗೆ ದಾಖಲಾಗಿದ್ದರು. ಶಸ್ತ್ರಚಿಕಿತ್ಸೆಗೆ ಮೊದಲು ಅವರ ರಕ್ತದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ವೈದ್ಯರು ಅಚ್ಚರಿಗೆ ಒಳಗಾಗಿದ್ದರು. ಯಾವುದೇ ರಕ್ತದ ಗುಂಪಿನೊಂದಿಗೆ ಹೋಲಿಕೆಯಾಗದ ಹಿನ್ನಲೆಯಲ್ಲಿ ರಕ್ತದ ಮಾದರಿಯನ್ನು ಬೆಂಗಳೂರಿನ ರೋಟರಿ ಟಟಿಕೆ ಬ್ಲಡ್ ಸೆಂಟರ್ ಗೆ ಕಳಿಸಿದ್ದರು.
ಅತ್ಯಾಧುನಿಕ ಸೆರೋಲಾಜಿಕಲ್ ತಂತ್ರಜ್ಞಾನ ಮೂಲಕ ರಕ್ತವನ್ನು ಪರೀಕ್ಷೆಗೆ ಒಳಪಡಿಸಿದ್ದು ಪ್ಯಾನ್ರಿಯಾಕ್ಟಿವ್ ಪ್ರಯೋಗಾಲಯದಲ್ಲಿ ಪರೀಕ್ಷಿಸಿದರೂ ಬೇರಾವ ರಕ್ತದ ಗುಂಪಿಗೂ ಹೊಂದಾಣಿಕೆಯಾಗಿಲ್ಲ. ಇದು ಅಪರೂಪದ ಅಥವಾ ಇನ್ನೂ ತಿಳಿದಿಲ್ಲದ ರಕ್ತದ ಪ್ರಕಾರವೆಂದು ವೈದ್ಯರು ಗುರುತಿಸಿದ್ದಾರೆ.
ಮಹಿಳೆಯ ಮತ್ತು ಆಕೆಯ ಕುಟುಂಬದ ಎಲ್ಲ ರಕ್ತದ ಮಾದರಿಗಳನ್ನು ಯುಕೆಯ ಬ್ರಿಸ್ಟಲ್‌ನಲ್ಲಿರುವ ಅಂತಾರಾಷ್ಟ್ರೀಯ ರಕ್ತ ಗುಂಪು ಉಲ್ಲೇಖ ಪ್ರಯೋಗಾಲಯಕ್ಕೆ (ಐಬಿಜಿಆರ್‌ಎಲ್) ಕಳುಹಿಸಿದ್ದು, ಹತ್ತು ತಿಂಗಳ ಸುದೀರ್ಘ ಸಂಶೋಧನೆ ಮತ್ತು ಪರೀಕ್ಷೆಗಳ ಬಳಿಕ ಈವರೆಗೆ ಕಂಡುಬರದ ಹೊಸ ರಕ್ತಗುಂಪು ಎಂದು ಪತ್ತೆ ಮಾಡಲಾಗಿದೆ. ಮಹಿಳೆಯ ಶಸ್ತ್ರಚಿಕಿತ್ಸೆ ಪ್ರಕರಣವನ್ನು ಎಚ್ಚರಿಕೆಯಿಂದ ನಿರ್ವಹಿಸಿದ್ದು ವೈದ್ಯರು, ರಕ್ತ ವರ್ಗಾವಣೆ ಅಗತ್ಯವಿಲ್ಲದೆಯೇ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
ಓ ಪಾಸಿಟಿವ್ ಸಿಆರ್ ಐಬಿ ಹೆಸರೇಕೆ ?
ಕ್ರೋಮರ್ (ಸಿಆರ್) ರಕ್ತದ ಗುಂಪಿನ ಭಾಗವಾಗಿದ್ದು ಇದಕ್ಕಾಗಿ 'ಓ ಪಾಸಿಟಿವ್ ಸಿಆರ್ ಐಬಿ'' ಎಂದು ಹೆಸರಿಡಲಾಗಿದೆ. ಸಿಆರ್ ಎನ್ನುವುದು ಕ್ರೋಮರ್ ಎಂಬುದನ್ನು ಪ್ರತಿನಿಧಿಸಿದರೆ, ಐಬಿ ಇಂಡಿಯಾ ಮತ್ತು ಬೆಂಗಳೂರನ್ನು ಸೂಚಿಸಲಿದೆ. 2025ರ ಜೂನ್‌ನಲ್ಲಿ ಇಟಲಿಯ ಮಿಲನ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ರಕ್ತ ವರ್ಗಾವಣೆ ಸೊಸೈಟಿಯ 35ನೇ ಪ್ರಾದೇಶಿಕ ಕಾಂಗ್ರೆಸ್‌ನಲ್ಲಿ ಹೊಸ ರಕ್ತ ಗುಂಪಿಗೆ ಸಿಆರ್ ಐಬಿ ಎಂದು ಘೋಷಿಸಲಾಗಿತ್ತು.