
ಮಂಗಳೂರು :ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ವಿಡಿಯೋ ಮಾಡಿ ಬ್ಲಾಕ್ಮೇಲ್ ; ಆರೋಪಿ ಯುವಕನಿಗೆ ಪೋಕ್ಸೋ ಕೋರ್ಟಿನಲ್ಲಿ 20 ವರ್ಷಗಳ ಶಿಕ್ಷೆ ಘೋಷಣೆ..!!

ಮಂಗಳೂರು, ಜುಲೈ 31 : ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಅತ್ಯಾಚಾರಗೈದು ವಿಡಿಯೋ ಮಾಡಿ ಬ್ಲಾಕ್ಮೇಲ್ ಮಾಡುತ್ತಿದ್ದ ಪ್ರಕರಣದಲ್ಲಿ ಆರೋಪಿತ ಯುವಕನಿಗೆ ಮಂಗಳೂರಿನ ಪೋಕ್ಸೋ ವಿಶೇಷ ನ್ಯಾಯಾಲಯ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಮಂಗಳೂರು ನಗರದ ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಯಲ್ಲಿ ಅಪ್ರಾಪ್ತ 16 ವರ್ಷದ ಬಾಲಕಿಯನ್ನು ಸಜಿಪ ನಡು ಗ್ರಾಮದ ಆರೋಪಿ ಮನ್ಸೂರ್ @ ಮೊಹಮ್ಮದ್ ಮನ್ಸೂರ್ @ ಜಾಬೀರ್ ಎಂಬಾತ ಅತ್ಯಾಚಾರಗೈದ ಬಗ್ಗೆ ಪ್ರಕರಣ ದಾಖಲಾಗಿತ್ತು. 2023ರ ಮೇ 30ರಂದು ಅಪ್ರಾಪ್ತ ನೊಂದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಬೆದರಿಸಿ ವಿಡಿಯೋ ಮಾಡಿರುತ್ತಾನೆಂದು ನೊಂದ ಬಾಲಕಿ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಅ.ಕ್ರ 128/2023 ಕಲಂ: 363, 376(2)(ಎನ್), 376(3), 506 ಐಪಿಸಿ & ಕಲಂ: 6 ಪೋಕ್ಸೋ ಕಾಯಿದೆ ರೀತ್ಯ 2023 ರ ಡಿ.23ರಂದು ಪ್ರಕರಣ ದಾಖಲಾಗಿತ್ತು.
ಆರೋಪಿ ಮನ್ಸೂರ್ ಪ್ರಕರಣ ದಾಖಲಾದ ಬೆನ್ನಲ್ಲೇ ಎಂಟು ತಿಂಗಳ ಕಾಲ ತಲೆಮರೆಸಿದ್ದು, 2024ರ ಜುಲೈ 2 ರಂದು ಪೊಲೀಸರು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಪ್ರಕರಣದಲ್ಲಿ ತನಿಖೆ ಕೈಗೊಂಡ ಮಹಿಳಾ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ಗುರುರಾಜ್ ಭಾಗಶಃ ತನಿಖೆಯನ್ನು ಪೂರೈಸಿದ್ದು, ಪ್ರಕರಣದಲ್ಲಿ ಮುಂದಿನ ತನಿಖೆಯನ್ನು ರಾಜೆಂದ್ರ ಬಿ. ಅವರು ಕೈಗೊಂಡಿದ್ದರು. ಪೂರಕ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ನಿಗದಿತ ಸಮಯದ ಒಳಗಾಗಿ ತನಿಖೆಯನ್ನು ಪೂರೈಸಿ ಆರೋಪಿ ವಿರುದ್ಧ ದೋಷರೋಪಣಾ ಪತ್ರ ಸಲ್ಲಿಸಲಾಗಿತ್ತು.
ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್.ಟಿ.ಎಸ್.ಸಿ-2 (ಪೋಕ್ಸೋ ) ನ್ಯಾಯಾಲಯ ಪ್ರಕರಣದ ವಿಚಾರಣೆ ನಡೆಸಿದ್ದು, ಸರಕಾರಿ ಅಭಿಯೋಜಕರು ಬದ್ರಿನಾಥ ಮತ್ತು ವಿಶೇಷ ಸರಕಾರಿ ಅಭಿಯೋಜಕರು ಶ್ರೀಮತಿ ಸಹನಾದೇವಿ ಬೋಳೂರು ಸರಕಾರದ ಪರವಾಗಿ ವಾದ ಮಂಡಿಸಿದ್ದರು. ಜುಲೈ 30ರಂದು ನ್ಯಾಯಾಧೀಶ ಮಾನು ಕೆ.ಎಸ್ ಆರೋಪಿತನಿಗೆ ಬಾಲಕಿಯ ಅತ್ಯಾಚಾರದ ಆರೋಪದ ಅಡಿಯಲ್ಲಿ 20 ವರ್ಷಗಳ ಕಾರಾಗೃಹ ಶಿಕ್ಷೆ ಮತ್ತು ರೂಪಾಯಿ 50,000/- ದಂಡ ವಿಧಿಸಿದ್ದಾರೆ. ಮತ್ತು ಬೆದರಿಕೆ ನೀಡಿರುವುದಕ್ಕಾಗಿ ಪ್ರಕರಣದಲ್ಲಿ ಆರೋಪಿತನಿಗೆ 5,000/ ದಂಡ ಮತ್ತು 1 ವರ್ಷ ಶಿಕ್ಷೆಯನ್ನು ವಿಧಿಸಿದ್ದಾರೆ.