
ಉಳ್ಳಾಲ: ಎರಡು ಅಲ್ಪಸಂಖ್ಯಾತ ಹೆಣ್ಮಕ್ಕಳ ವಸತಿಯುತ ಶಿಕ್ಷಣ ಸಂಸ್ಥೆ ಮಂಜೂರು ; ಕಾಲುವೆ ಅತಿಕ್ರಮಣ ಪತ್ತೆಗೆ ಡ್ರೋಣ್ ಸರ್ವೆ, ತೆರವು ಮಾಡದಿದ್ದರೆ ಪ್ರತಿ ಮಳೆಗೂ ಮುಳುಗಡೆ.

ಮಂಗಳೂರು, ಜುಲೈ 21 : ಸಿಎಂ ಸಿದ್ದರಾಮಯ್ಯ ಬಜೆಟ್ ನಲ್ಲಿ ಘೋಷಿಸಿದಂತೆ ಉಳ್ಳಾಲ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಹೆಣ್ಮಕ್ಕಳಿಗಾಗಿ ಎರಡು ಪ್ರತ್ಯೇಕ ವಸತಿಯುತ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲಾಗುವುದು. ವಕ್ಫ್ ಮತ್ತು ಅಲ್ಪಸಂಖ್ಯಾತ ಇಲಾಖೆಯಿಂದ ಹೆಣ್ಮಕ್ಕಳ ಶಿಕ್ಷಣದ ಉದ್ದೇಶಕ್ಕಾಗಿ ಸಂಸ್ಥೆ ತರಲಾಗುವುದು. ಅಲ್ಪಸಂಖ್ಯಾತ ಇಲಾಖೆಯ ಒಂದು ಸಂಸ್ಥೆಗೆ ಸಚಿವ ಸಂಪುಟದಲ್ಲಿ ಅನುಮತಿ ಸಿಕ್ಕಿದ್ದು, 17 ಕೋಟಿ ಬಿಡುಗಡೆ ಆಗಿದೆ. ವಕ್ಫ್ ಇಲಾಖೆಯ ಶಿಕ್ಷಣ ಸಂಸ್ಥೆಗೂ ಅನುಮತಿ ಸಿಕ್ಕಿದ್ದು, ಹಣಕಾಸು ಇಲಾಖೆ ಹಂತಲ್ಲಿದೆ. ಸದ್ಯದಲ್ಲೇ ಮಂಜೂರಾತಿ ಸಿಗಲಿದೆ ಎಂದು ಉಳ್ಳಾಲ ಕ್ಷೇತ್ರದ ಶಾಸಕ, ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಹೇಳಿದ್ದಾರೆ.
ಸುದ್ದಿಗೋಷ್ಟಿ ನಡೆಸಿದ ಖಾದರ್, ಹೆಣ್ಮಕ್ಕಳಿಗಾಗಿ ಹಾಸ್ಟೆಲ್ ಸಹಿತ ಶಿಕ್ಷಣ ನೀಡಬೇಕೆಂಬ ಅಪೇಕ್ಷೆಯಂತೆ ಎರಡು ಪ್ರತ್ಯೇಕ ಸಂಸ್ಥೆಗಳನ್ನು ತರುತ್ತಿದ್ದೇವೆ. ಅಲ್ಪಸಂಖ್ಯಾತ ಇಲಾಖೆಯಿಂದ ವಿಟ್ಲ, ಮೆಲ್ಕಾರ್ ಭಾಗದವರಿಗೆ ಅನುಕೂಲ ಆಗುವಂತೆ ಕೋಣಾಜೆ ಅಥವಾ ಪಜೀರಿನಲ್ಲಿ ಸ್ಥಾಪಿಸಲಾಗುವುದು. ಇದು ಪ್ರಾಥಮಿಕದಿಂದ ಪದವಿ ಹಂತದ ವರೆಗೂ ಶಿಕ್ಷಣ ನೀಡಬಲ್ಲ ವಸತಿಯುತ ಶಿಕ್ಷಣ ಸಂಸ್ಥೆ ಆಗಿರುತ್ತದೆ. ಇನ್ನೊಂದು ಉಳ್ಳಾಲ ನಗರ ಭಾಗದಲ್ಲಿ ಪಿಯು ಮತ್ತು ಅದರಿಂದ ಮೇಲ್ಪಟ್ಟ ಶಿಕ್ಷಣಕ್ಕಾಗಿ ವಕ್ಫ್ ಇಲಾಖೆಯಿಂದ ಹೆಣ್ಮಕ್ಕಳ ಶಿಕ್ಷಣ ಸಂಸ್ಥೆ ತರಲಾಗುವುದು. ಎರಡು ಕಡೆಯೂ ದೂರದ ಮಕ್ಕಳಿಗೆ ಮತ್ತು ಸ್ಥಳೀಯ ಮಕ್ಕಳಿಗೂ ಅವಕಾಶ ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಎರಡು ಕಡೆಯೂ 70 ಶೇಕಡಾ ಅಲ್ಪಸಂಖ್ಯಾತರು ಮತ್ತು ಇತರರಿಗೆ 30 ಶೇಕಡಾ ಅನುಪಾತದಂತೆ ಸೇರ್ಪಡೆಗೆ ಅವಕಾಶ ಇದೆ. ಉಳ್ಳಾಲ ಕ್ಷೇತ್ರದ ಪ್ರತಿ ಗ್ರಾಮದಲ್ಲಿಯೂ ಎಲ್ಕೆಜಿಯಿಂದಲೇ ಇಂಗ್ಲಿಷ್ ಮೀಡಿಯಂ ಶಿಕ್ಷಣ ದೊರಕಿಸಲು ವ್ಯವಸ್ಥೆ ಮಾಡಿದ್ದೇವೆ. ಎಲ್ಲ ಗ್ರಾಮದಲ್ಲೂ ಹೈಸ್ಕೂಲ್ ವರೆಗಿನ ಶಿಕ್ಷಣ ಇದೆ. ಕೆಲವೊಂದು ಕಡೆ ಆಯಾ ಸಂಸ್ಥೆಯವರೇ ಎಲ್ಕೆಜಿ ನಡೆಸುತ್ತಿದ್ದಾರೆ. ಅದನ್ನೀಗ ಸರಕಾರದಿಂದಲೇ ನಡೆಸುವಂತೆ ಶಿಕ್ಷಣ ಇಲಾಖೆಯಿಂದ ಆದೇಶ ತರಿಸಲಾಗಿದೆ. ಈಗಾಗಲೇ ಎಂಟು ಸರಕಾರಿ ಶಾಲೆಗಳಲ್ಲಿ ಎಲ್ಕೆಜಿ- ಯುಕೆಜಿ ಇದೆ. ಎಲ್ಲ ಸರಕಾರಿ ಶಾಲೆಗಳಲ್ಲೂ ಇಂಗ್ಲಿಷ್ ಮೀಡಿಯಂ ತರಲಾಗುವುದು ಎಂದರು.
ಅತಿಕ್ರಮಣ ಪತ್ತೆಗೆ ಡ್ರೋಣ್ ಸರ್ವೆ
ಉಳ್ಳಾಲ ಭಾಗದಲ್ಲಿ ಪ್ರತಿ ಮಳೆಗೂ ಮುಳುಗುವ ಸ್ಥಿತಿಯಾಗಿದೆ. ಇದೇ ರೀತಿಯಾದರೆ ಸಣ್ಣ ಮಳೆಗೂ ಮುಳುಗುವ ಬೆಂಗಳೂರಿನ ಸ್ಥಿತಿ ಇಲ್ಲಿಗೂ ಬರಲಿದೆ. ರಾಜಕಾಲುವ ಅತಿಕ್ರಮಿಸಿದ್ದನ್ನು ತೆರವು ಮಾಡುವ ಕಾರ್ಯ ಆಗಬೇಕಿದೆ. ಇದಕ್ಕಾಗಿ ಡ್ರೋಣ್ ಮೂಲಕ ಸರ್ವೆ ನಡೆಸಿ, ಗುರುತು ಹಾಕಲಾಗುವುದು. ಅತಿಕ್ರಮಣ ಮಾಡಿದವರು ಅಧಿಕಾರಿಗಳಿಗೆ ಕೆಲಸ ಕೊಡದೆ ತಾವಾಗಿಯೇ ತೆರವು ಮಾಡಿದರೆ ಉತ್ತಮ ಎಂದು ಹೇಳಿದ ಖಾದರ್, ಉಳ್ಳಾಲ ರೈಲ್ವೇ ಕ್ರಾಸಿಂಗ್ ಬಹುದಿನದ ಬೇಡಿಕೆಯನ್ನು ರೈಲ್ವೇ ಇಲಾಖೆ ಒಪ್ಪಿದ್ದು ಎರಡು ಕೋಟಿ ವೆಚ್ಚದಲ್ಲಿ ಅಂಡರ್ ಪಾಸ್ ಮಾಡಲಿದೆ ಎಂದು ಹೇಳಿದರು.