ಬೆಳ್ತಂಗಡಿ: ಧರ್ಮಸ್ಥಳ ; ನೇತ್ರಾವತಿ ಸ್ನಾನಘಟ್ಟ ಬಳಿಯ ಕಾಡಿನಲ್ಲಿ ಸಮಾಧಿ ಅಗೆತ ಆರಂಭ, ನಿಗೂಢ ಸತ್ಯದ ಬೆನ್ನತ್ತಿದ ಎಸ್ಐಟಿ ತಂಡ, ಸಾರ್ವಜನಿಕರಲ್ಲಿ ಭಾರೀ ಕುತೂಹಲ..!!

ಬೆಳ್ತಂಗಡಿ: ಧರ್ಮಸ್ಥಳ ; ನೇತ್ರಾವತಿ ಸ್ನಾನಘಟ್ಟ ಬಳಿಯ ಕಾಡಿನಲ್ಲಿ ಸಮಾಧಿ ಅಗೆತ ಆರಂಭ, ನಿಗೂಢ ಸತ್ಯದ ಬೆನ್ನತ್ತಿದ ಎಸ್ಐಟಿ ತಂಡ, ಸಾರ್ವಜನಿಕರಲ್ಲಿ ಭಾರೀ ಕುತೂಹಲ..!!


ಬೆಳ್ತಂಗಡಿ, ಜುಲೈ 29 : ಧರ್ಮಸ್ಥಳದಲ್ಲಿ ಹೆಣ ಹೂತ ಪ್ರಕರಣ ನಿರ್ಣಾಯಕ ಹಂತಕ್ಕೆ ಬಂದಿದ್ದು ದೂರುದಾರ ವ್ಯಕ್ತಿ ತೋರಿಸಿದ ಸಮಾಧಿ ಸ್ಥಳಗಳಲ್ಲಿ ಪೊಲೀಸರು ಅಗೆಯುವ ಕೆಲಸ ಆರಂಭಿಸಿದ್ದಾರೆ. ಎಸ್ಐಟಿ ಅಧಿಕಾರಿಗಳ ಸೂಚನೆಯಂತೆ, ಅಗೆಯುವ ಕೆಲಸಕ್ಕಾಗಿ 13 ಮಂದಿ ಕಾರ್ಮಿಕರನ್ನು ಧರ್ಮಸ್ಥಳ ಪಂಚಾಯತ್ ನಿಯೋಜಿಸಿದೆ. ಇಂದು ಬೆಳಗ್ಗೆ ಪೊಲೀಸರ ಜೊತೆಗೆ ಕಾರ್ಮಿಕರು ಹಾರೆ, ಕತ್ತಿಗಳನ್ನು ಹಿಡಿದು ಸ್ಥಳಕ್ಕೆ ಬಂದಿದ್ದಾರೆ. 

ನಿನ್ನೆಯಷ್ಟೇ ದೂರುದಾರ ವ್ಯಕ್ತಿ ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದ ಬಳಿಯ ಕಾಡಿನಲ್ಲಿ ಹೆಣ ಹೂಳಲಾಗಿದೆ ಎಂದಿರುವ 13 ಸ್ಥಳಗಳನ್ನು ಗುರುತಿಸಿದ್ದು ಅಲ್ಲಿಗೆ ಮಾರ್ಕ್ ಹಾಕಿದ್ದ ಅಧಿಕಾರಿಗಳು ರಾತ್ರಿ ವೇಳೆ ಕಾವಲಿಗೆ ಎಎನ್ಎಫ್ ಪೊಲೀಸರನ್ನು ನಿಯೋಜಿಸಿದ್ದರು. ಇಂದು ಆ ಸ್ಥಳಗಳನ್ನು ಅಗೆಯಲು ಆರಂಭಿಸಿದ್ದು ಈ ವೇಳೆ ನಿಯಮದಂತೆ ಪುತ್ತೂರು ವಿಭಾಗಾಧಿಕಾರಿ ಸ್ಟೆಲ್ಲಾ ಮೇರಿಸ್, ಬೆಳ್ತಂಗಡಿ ತಹಸೀಲ್ದಾರ್ ಪೃಥ್ವಿ ಸಾನಿಕಂ ಸ್ಥಳಕ್ಕೆ ಆಗಮಿಸಿದ್ದಾರೆ. ಅಲ್ಲದೆ, ಎಫ್ಎಸ್ಎಲ್ ತಜ್ಞರು, ಮಂಗಳೂರಿನ ಕೆಎಂಸಿ ವೈದ್ಯರು ಕೂಡ ಆಗಮಿಸಿದ್ದಾರೆ. 

ಮಾರ್ಕ್ ಹಾಕಿರುವ ಜಾಗದಲ್ಲಿ ಅಗೆದು ಅಲ್ಲಿ ಮಾನವ ಅವಶೇಷಗಳ ಮಾದರಿಯನ್ನು ಪತ್ತೆ ಮಾಡಲಿದ್ದಾರೆ. ಸದ್ಯಕ್ಕೆ ಆರು ಅಡಿಗಳಷ್ಟು ಆಳಕ್ಕೆ ಅಗೆಯಲು ಪೊಲೀಸರು ನಿರ್ಧರಿಸಿದ್ದಾರೆ. ದೂರುದಾರ ವ್ಯಕ್ತಿಯೇ ಹೆಣ ಹೂತಿದ್ದಾನೆ ಎಂದಿರುವುದರಿಂದ ಮತ್ತಷ್ಟು ಆಳ ಅಗತ್ಯವಿದೆಯೇ ಎನ್ನುವ ಬಗ್ಗೆ ಆತನ ಹೇಳಿಕೆ ಆಧರಿಸಿ ನಿರ್ಧಾರ ಆಗಲಿದೆ. 

ಎಸ್ಐಟಿ ತಂಡದ ಎಸ್ಪಿ ಜಿತೇಂದ್ರ ದಯಾಮ ನೇತೃತ್ವದಲ್ಲಿ ಸ್ಥಳ ತನಿಖೆ ಸಾಗಿದೆ.‌ ಸದ್ಯಕ್ಕೆ ಗುರುತು ಹಾಕಿರುವ 13 ಸ್ಥಳಗಳು ಅರಣ್ಯ ವ್ಯಾಪ್ತಿಗೆ ಸೇರಿದ್ದು ಅರಣ್ಯ ಇಲಾಖೆ ಅಧಿಕಾರಿಗಳು, ಕಂದಾಯ ವಿಭಾಗದ ಅಧಿಕಾರಿಗಳೂ ಸ್ಥಳದಲ್ಲಿದ್ದಾರೆ. ಸಮಾಧಿ ಅಗೆದ ಸ್ಥಳದಲ್ಲಿ ಯಾವುದೇ ಎಲುಬು, ಇನ್ನಿತರ ಅವಶೇಷ ಸಿಕ್ಕಿದರೂ ಅದನ್ನು ಪೊಲೀಸರು ವಶಕ್ಕೆ ಪಡೆಯಲಿದ್ದಾರೆ. 

ಅಗೆಯುವ ಸ್ಥಳಗಳು ದಟ್ಟ ಕಾಡಿನ ಒಳಗಿರುವುದರಿಂದ ಆ ಜಾಗಕ್ಕೆ ಮಾಧ್ಯಮ ಮತ್ತು ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ದೂರುದಾರ ವ್ಯಕ್ತಿ ಮತ್ತು ಅವರ ವಕೀಲರು ಜೊತೆಗಿದ್ದಾರೆ. ಸೂಚಿತ ಸಮಾಧಿ ಪ್ರದೇಶದಲ್ಲಿ ಏನು ಸಿಗುತ್ತದೆ ಎನ್ನುವ ವಿಚಾರ ಸಾರ್ವಜನಿಕರಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ

Ads on article

Advertise in articles 1

advertising articles 2

Advertise under the article