
ಚಿತ್ರದುರ್ಗ:ತಮ್ಮನಿಗೆ ಎಚ್‌ಐವಿ ಸೋಂಕು ; ಕುಟುಂಬದ ಗೌರವ ಹಾಳಾಗುತ್ತೆ ಎಂದು ಸ್ವಂತ ತಮ್ಮನನ್ನೇ ಕೊಂದ ಅಕ್ಕ - ಭಾವ, ಚಿತ್ರದುರ್ಗದಲ್ಲಿ ಮರ್ಯಾದೆ ಹತ್ಯೆ !

ಚಿತ್ರದುರ್ಗ, ಜುಲೈ 29 : ಸಹೋದರನಿಗೆ ಎಚ್‌ಐವಿ ಸೋಂಕು ತಗುಲಿಗೆ ಎಂದು ಗೊತ್ತಾದ ಕೂಡಲೇ ಆತನ ಸ್ವಂತ ಅಕ್ಕ ಭಾವನೇ ಕುತ್ತಿಗೆ ಹಿಸುಕಿ ಕೊಲೆ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ದುಮ್ಮಿಯಲ್ಲಿ ನಡೆದಿದೆ. ಸೋಂಕಿನ ವಿಚಾರ ಊರಲ್ಲಿ ತಿಳಿದರೆ ಕುಟುಂಬದ ಗೌರವಕ್ಕೆ ಚ್ಯುತಿ ಬರುತ್ತದೆ ಎಂದು ಸಾಯಿಸಿದ್ದೇವೆ ಎಂದು ಆರೋಪಿಗಳು ಹೇಳಿದ್ದಾರೆ.
23 ವರ್ಷದ ಮಲ್ಲಿಕಾರ್ಜುನ ಮೃತರು. ಆತನ ಅಕ್ಕ ನಿಶಾ ಹಾಗೂ ಭಾವ ಮಂಜುನಾಥ್ ಕೊಲೆ ಮಾಡಿದ ಆರೋಪಿಗಳು. ತಂದೆಯ ದೂರಿನ ಮೇರೆಗೆ ನಿಶಾ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಮಂಜುನಾಥ್‌ಗೆ ಹುಡುಕಾಟ ನಡೆಸುತ್ತಿದ್ದಾರೆ.
ಕೊಲೆಯಾದ ಮಲ್ಲಿಕಾರ್ಜುನ್ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಜುಲೈ 23 ರಂದು ಊರಿಗೆ ಬರುವ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಹಿರಿಯೂರು ತಾಲೂಕು ಬಳಿ ಅಪಘಾತಕ್ಕೀಡಾಗಿದ್ದರು. ಕೂಡಲೇ ಅವರನ್ನು ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಮಲ್ಲಿಕಾರ್ಜುನ್‌ಗೆ ಎಚ್‌ಐವಿ ಪಾಸಿಟಿವ್ ಎಂದು ತಿಳಿದುಬಂದಿತು.
ಆಸ್ಪತ್ರೆಗೆ ತೆರಳುವಾಗ ಸತ್ತ ಎಂದ ಸಹೋದರಿ;
ಕುಟುಂಬದವರು ಮಲ್ಲಿಕಾರ್ಜುನ್‌ನನ್ನು ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲು ನಿರ್ಧರಿಸಿದರು. ನಿಶಾ ಮತ್ತು ಮಂಜುನಾಥ್ ಜುಲೈ 25 ರ ಸಂಜೆ ಖಾಸಗಿ ವಾಹನದಲ್ಲಿ ಮಲ್ಲಿಕಾರ್ಜುನ್‌ನನ್ನು ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲು ವ್ಯವಸ್ಥೆ ಮಾಡಿದರು. ಆದರೆ, ಜುಲೈ 26 ರಂದು ಬೆಳಿಗ್ಗೆ ಮಲ್ಲಿಕಾರ್ಜುನ್ ಸತ್ತಿದ್ದಾನೆ ಎಂದು ಹೇಳಿ ವಾಪಸ್ ಬಂದಿದ್ದಾರೆ. ದಾರಿಯಲ್ಲಿ ಮಲ್ಲಿಕಾರ್ಜುನ್ ಮೃತಪಟ್ಟಿದ್ದಾನೆ ಎಂದು ಕುಟುಂಬಸ್ಥರಿಗೆಲ್ಲಾ ಕಿವಿಗೆ ಹೂವ ಇಟ್ಟಿದ್ದಾರೆ.
ಅಂತ್ಯಕ್ರಿಯೆ ಸಂದರ್ಭದಲ್ಲಿ ಸತ್ಯ ಬಯಲು:
ಮಲ್ಲಿಕಾರ್ಜುನ ತಂದೆ ನಾಗರಾಜ್ ಮಗನ ಸಾವಿನ ಬಗ್ಗೆ ಅನುಮಾನಿಸಿದ್ದಾರೆ. ಮುಂದುವರೆದು ಅಂತ್ಯಕ್ರಿಯೆ ಸಂದರ್ಭದಲ್ಲಿ ಮಲ್ಲಿಕಾರ್ಜುನ್ ಕುತ್ತಿಗೆಗೆ ಗಾಯಗಳಾಗಿರುವುದನ್ನು ಗಮನಿದ್ದಾರೆ. ಆ ಬಗ್ಗೆ ಮಗಳನ್ನು ಪ್ರಶ್ನೆ ಮಾಡಿದ್ದಾರೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಹೊಳಲ್ಕೆರೆ ಪೊಲೀಸ್ ಅಧಿಕಾರಿ ಎಂ.ಬಿ. ಚಿಕ್ಕಣ್ಣವರ್ ಈ ಬಗ್ಗೆ ಮಾತನಾಡಿ, "ನಾವು ಮೃತನ ತಂದೆಯ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಿದ್ದೇವೆ. ವಿಚಾರಣೆಯ ಸಮಯದಲ್ಲಿ ನಿಶಾ ಮಲ್ಲಿಕಾರ್ಜುನ್‌ನನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾಳೆ. ನಾವು ಈಗ ಪರರಿಯಾಗಿರುವ ಮಂಜುನಾಥ್‌ಗಾಗಿ ಹುಡುಕುತ್ತಿದ್ದೇವೆ ಮತ್ತು ತನಿಖೆ ನಡೆಯುತ್ತಿದೆ" ಎಂದು ಹೇಳಿದ್ದಾರೆ.
ನಾಗರಾಜ್ ತಮ್ಮ ಮಗಳು ಮತ್ತು ಅಳಿಯ ಮೋಸಗಾರರು ಎಂದು ಹೇಳಿದ್ದು, ಆಸ್ತಿ ವಿಚಾರಕ್ಕೆ ಕೊಂದಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಪ್ರಕರಣದ ತನಿಖೆ ಮುಂದುವರೆದಿದೆ. ಸತ್ಯಾಂಶ ಹೊರಬರಬೇಕಿದೆ.