
ಬೆಂಗಳೂರು: ಕೇರಳ ನರ್ಸ್ ನಿಮಿಷ ಪ್ರಿಯಾಗೆ ಗಲ್ಲು ಶಿಕ್ಷೆ ರದ್ದು ; ಕಾಂತಪುರಂ ಎಪಿ ಅಬೂಬಕ್ಕರ್ ಮುಸ್ಲಿಯಾರ್ ಪ್ರಕಟಣೆ, ದೃಢಪಡಿಸದ ಭಾರತ ವಿದೇಶಾಂಗ ಇಲಾಖೆ.

ಬೆಂಗಳೂರು, ಜುಲೈ 29 : ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ನಿಮಿಷ ಪ್ರಿಯಾಗೆ ಯೆಮನ್ ಸರ್ಕಾರ ಅಧಿಕೃತವಾಗಿ ಶಿಕ್ಷೆಯನ್ನು ರದ್ದುಪಡಿಸಿದೆ ಎಂದು ಭಾರತೀಯ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎಪಿ ಅಬೂಬಕ್ಕರ್ ಮುಸ್ಲಿಯಾರ್ ಅವರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ಉನ್ನತ ಮಟ್ಟದ ರಾಜತಾಂತ್ರಿಕ ಮಧ್ಯಸ್ಥಿಕೆ ಮತ್ತು ಯೆಮೆನ್ ರಾಜಧಾನಿ ಸನಾದಲ್ಲಿ ನಡೆದ ಮಾತುಕತೆಯ ನಂತರ ಈ ಘೋಷಣೆ ಹೊರಬಿದ್ದಿದೆ. ಈ ಹಿಂದೆ ತಾತ್ಕಾಲಿಕವಾಗಿ ಅಮಾನತುಗೊಳಿಸಿದ್ದ ಮರಣದಂಡನೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಲು ನಿರ್ಧರಿಸಲಾಗಿದೆ ಎಂದು ಮುಸ್ಲಿಯಾರ್ ಪರವಾಗಿ ಹೇಳಿಕೆ ದೃಢಪಡಿಸಿದೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಭಾರತೀಯ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎಪಿ ಅಬೂಬಕ್ಕರ್ ಮುಸ್ಲಿಯಾರ್, ಜು.16ಕ್ಕೆ ಗಲ್ಲು ಶಿಕ್ಷೆಗೆ ನಿಗದಿಯಾಗಿದ್ದ ನಿಮಿಷಾ ಪ್ರಿಯಾ ಶಿಕ್ಷೆಯನ್ನು ರದ್ದುಗೊಳಿಸಲಾಗಿದೆ. ಸನಾದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ. ಆದಾಗ್ಯೂ, ಯೆಮೆನ್ ಸರ್ಕಾರದಿಂದ ಈ ಕುರಿತು ಅಧಿಕೃತ ದೃಢೀಕರಣ ಇನ್ನೂ ಬಂದಿಲ್ಲ ಎಂದು ಕಚೇರಿ ಸ್ಪಷ್ಟಪಡಿಸಿದೆ. ಭಾರತದ ವಿದೇಶಾಂಗ ಸಚಿವಾಲಯವು ಈ ಬೆಳವಣಿಗೆಯನ್ನು ಖಚಿತಪಡಿಸಿಲ್ಲ.
ನಿಮಿಷಾ ಅವರ ಗಲ್ಲು ಶಿಕ್ಷೆಯನ್ನು ಜುಲೈ 16ರಂದು ನಿಗದಿಪಡಿಸಲಾಗಿತ್ತು. ಆದರೆ ಕೇರಳದ ಸುನ್ನಿ ಧರ್ಮಗುರು ಎಪಿ ಮುಸ್ಲಿಯಾರ್ ಅವರು ನಿಮಿಷಾಗೆ ಕ್ಷಮಾದಾನ ನೀಡುವಂತೆ ಯೆಮನ್ ಸರ್ಕಾರಕ್ಕೆ ಒತ್ತಾಯಿಸಿದ್ದರಿಂದ ಒಂದು ದಿನ ಇರುವಾಗ ತಡೆ ಹಿಡಿಯಲಾಗಿತ್ತು.