
ಮಂಗಳೂರು: ಧರ್ಮಸ್ಥಳ ಪ್ರಕರಣ ; ಹೆಣ ಹೂತಿದ್ದೇನೆಂದ ವ್ಯಕ್ತಿಗೆ ಸುದೀರ್ಘ 9 ಗಂಟೆ ಎಸ್ಐಟಿ ಡ್ರಿಲ್ ! ಮಂಗಳೂರಿನಲ್ಲೇ ವಿಚಾರಣೆ ನಡೆಸಿದ ಅಧಿಕಾರಿಗಳು.

ಮಂಗಳೂರು : ಧರ್ಮಸ್ಥಳದಲ್ಲಿ ನೂರಾರು ಹೆಣಗಳನ್ನು ಹೂತಿದ್ದೇನೆಂದು ಹೇಳಿಕೆ ನೀಡಿ ಸಂಚಲನ ಮೂಡಿಸಿದ್ದ ವ್ಯಕ್ತಿಯನ್ನು ಎಸ್ಐಟಿ ತಂಡದ ಅಧಿಕಾರಿಗಳು ಮಂಗಳೂರಿನಲ್ಲಿ ಸುದೀರ್ಘ 9 ಗಂಟೆ ಕಾಲ ವಿಚಾರಣೆಗೆ ಒಳಪಡಿಸಿದ್ದಾರೆ.
ನಗರದ ಮಲ್ಲಿಕಟ್ಟೆಯ ಐಬಿಯಲ್ಲಿ ಎಸ್ಐಟಿ ತಂಡದ ಡಿಐಜಿ ಎಂ.ಎನ್ ಅನುಚೇತ್ ಮತ್ತು ಎಸ್ಪಿ ಜಿತೇಂದ್ರ ದಯಾಮ ಅವರು ವಿಚಾರಣೆ ನಡೆಸಿದ್ದಾರೆ. ಶನಿವಾರ ಬೆಳಗ್ಗೆ 10.30ರ ವೇಳೆಗೆ ತನ್ನ ವಕೀಲರ ಜೊತೆಗೆ ಟ್ಯಾಕ್ಸಿ ಕಾರಿನಲ್ಲಿ ಮುಸುಕು ಹಾಕ್ಕೊಂಡಿದ್ದ ವ್ಯಕ್ತಿ ವಿಚಾರಣೆಗೆ ಬಂದಿದ್ದು, ಮುಸುಕು ಹಾಕ್ಕೊಂಡೇ ಐಬಿ ಬಂಗಲೆಯ ಒಳಗಡೆ ತೆರಳಿದ್ದಾರೆ.
ಕಟ್ಟಡದ ಹೊರಗಡೆ ಕಾದಿದ್ದ ಮಾಧ್ಯಮದವರನ್ನು ಅದಕ್ಕೂ ಮೊದಲೇ ಪೊಲೀಸರು ಐಬಿ ಬಂಗಲೆಯ ಗೇಟ್ ಹೊರಭಾಗಕ್ಕೆ ಕಳುಹಿಸಿದ್ದರು. ಹೀಗಾಗಿ ಮುಸುಕುಧಾರಿ ವ್ಯಕ್ತಿ ಕಾರಿನಲ್ಲಿ ಹೊರಗಿನಿಂದ ಒಳಗಡೆ ಹೋಗುವುದಷ್ಟೇ ಅಲ್ಲಿದ್ದ ಪತ್ರಕರ್ತರ ಕ್ಯಾಮರಾ ಕಣ್ಣಿಗೆ ಸೆರೆಯಾಗಿತ್ತು. ಆನಂತರ, ವಿಚಾರಣೆ ಮುಗಿಸಿ ಹೊರಬರುತ್ತಾರೆಂದು ಕಾದರೂ ಹೊರಗಡೆ ಬರಲಿಲ್ಲ. ಐಬಿ ಬಂಗಲೆಯ ಒಳಗೆ ಹೊರಗಿನಿಂದಲೇ ಊಟ
ತಿಂಡಿ ತರಿಸಿಕೊಂಡಿದ್ದಾರೆ.
ಸಂಜೆ 7.30ರ ವೇಳೆಗೆ ಮುಸುಕುಧಾರಿ ವ್ಯಕ್ತಿ ಮತ್ತು ಆತನ ಜೊತೆಗಿದ್ದ ವಕೀಲರು ವಿಚಾರಣೆ ಮುಗಿಸಿ ಹಿಂದಕ್ಕೆ ತೆರಳಿದ್ದಾರೆ. ಅಂದಾಜು ಸುದೀರ್ಘ 9 ಗಂಟೆ ಕಾಲ ವಿಚಾರಣೆ ನಡೆಸಿದ್ದು, ಹೆಣಗಳನ್ನು ಹೂತು ಹಾಕಿದ್ದು, ಅದಕ್ಕೆ ಕಾರಣವಾದ ಅಂಶಗಳು, ಯಾವಾಗೆಲ್ಲ ಹೆಣಗಳನ್ನು ಹೂಳಲಾಗಿತ್ತು, ಅದು ಯಾರದ್ದಿತ್ತು ಇತ್ಯಾದಿ ವಿಚಾರಗಳ ಕುರಿತು ವಿಚಾರಣೆ ವೇಳೆ ಮಾಹಿತಿಗಳನ್ನು ಸಂಗ್ರಹಿಸಿರುವ ಸಾಧ್ಯತೆಯಿದೆ. ಆದರೆ ಈ ಬಗ್ಗೆ ಜೊತೆಗಿದ್ದ ವಕೀಲರಾಗಲೀ, ಪೊಲೀಸ್ ಅಧಿಕಾರಿಗಳಾಗಲೀ ಮಾಹಿತಿ ಬಿಟ್ಟುಕೊಟ್ಟಿಲ್ಲ. ಶುಕ್ರವಾರ ರಾತ್ರಿ ಧರ್ಮಸ್ಥಳ ಠಾಣೆಗೆ ತೆರಳಿದ್ದ ಎಸ್ಪಿ ಜಿತೇಂದ್ರ ದಯಾಮ ಅವರು ಪ್ರಕರಣ ಕುರಿತ ಫೈಲ್ ಗಳನ್ನು ಪಡೆದಿದ್ದು, ರಾತ್ರಿಯೇ ಅಲ್ಲಿಂದ ತೆರಳಿದ್ದರು. ಈ ನಡುವೆ, ಎಸ್ಐಟಿ ತಂಡಕ್ಕೆ ಬೆಳ್ತಂಗಡಿ ಪೊಲೀಸ್ ಠಾಣೆ ಪಕ್ಕದಲ್ಲಿ ಕಚೇರಿ ತೆರೆದಿದ್ದು ಅದಿನ್ನೂ ಆರಂಭವಾಗಿಲ್ಲ.