
ರಾಯಚೂರು: ಚರಂಡಿ ಬ್ಲಾಕ್ ; ಕಟ್ಟಡದ ಮೇಲೆ ವಾಲಿದ ಮತ್ತೊಂದು ಬಹುಮಹಡಿ ಕಟ್ಟಡ, ಸ್ಥಳೀಯರಲ್ಲಿ ಆತಂಕ.

ರಾಯಚೂರು, ಜುಲೈ 27 : ನಾಲ್ಕು ಅಂತಸ್ತಿನ ಕಟ್ಟಡವೊಂದು ಪಕ್ಕದಲ್ಲಿದ್ದ ಇನ್ನೊಂದು ಕಟ್ಟಡದ ಮೇಲೆ ವಾಲಿದ ಘಟನೆ. ನಗರದ ವಾರ್ಡ್ ನಂ. 8ರ ನವರಂಗ್ ದರ್ವಾಜಾ ರಸ್ತೆಯ ಕೋಟ್ ತಲಾರ್ ಪ್ರದೇಶದಲ್ಲಿ ನಡೆದಿದೆ.
ಬಡಾವಣೆ ನಿವಾಸಿ ಮೊಹ್ಮದ್ ದಸ್ತಗಿರಿ ಎನ್ನುವರಿಗೆ ಸೇರಿದ ನಾಲ್ಕು ಅಂತಸ್ತಿನ ಮನೆ ಇದಾಗಿದೆ. ಕಟ್ಟಡದಲ್ಲಿ ಮೂರು ಕುಟುಂಬಗಳು ವಾಸಿಸುತ್ತಿವೆ. ಕೆಳ ಮಹಡಿಯಲ್ಲಿ ವಾಣಿಜ್ಯ ಮಳಿಗೆಯಿದ್ದು, ಮುಂಜಾಗ್ರತಾ ಕ್ರಮವಾಗಿ ಎಲ್ಲರನ್ನೂ ಖಾಲಿ ಮಾಡಿಸಲಾಗಿದೆ.
ಈ ಕುರಿತು ಕಟ್ಟಡ ಮಾಲೀಕ ಮೊಹ್ಮದ್ ದಸ್ತಗಿರಿ ಮಾತನಾಡಿ, 'ಇದು ನವರಂಗ್ ದರ್ವಾಜಾ ರಸ್ತೆ, ಮುನ್ಸಿಪಾಲಿಟಿಯವರು ಚರಂಡಿಯನ್ನು ಕ್ಲೀನ್ ಮಾಡುವುದಿಲ್ಲ, ಎಲ್ಲೆಡೆಯ ನೀರು ಇಲ್ಲಿಗೆ ಬಂದು ಚರಂಡಿ ಬ್ಲಾಕ್ ಆಗಿದೆ. ಹಾಗಾಗಿ, ನೀರು ನಮ್ಮ ಮನೆಯ ಬಿಲ್ಡಿಂಗ್ ಬುನಾದಿಯೊಳಗೆ ಬಂದು ನಿಂತಿದೆ' ಎಂದು ದೂರಿದ್ದಾರೆ.
ಘಟನೆಯಿಂದ ಕೆಲಕಾಲ ಅಕ್ಕಪಕ್ಕದ ನಿವಾಸಿಗಳಲ್ಲಿ ಆತಂಕ ಎದುರಾಗಿತ್ತು. ಸ್ಥಳಕ್ಕೆ ಮಹಾನಗರ ಪಾಲಿಕೆ ಪ್ರಭಾರ ಅಧ್ಯಕ್ಷ ಸಾಜೀದ್ ಸಮೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚರಂಡಿಗಳನ್ನೂ ಕೂಡಲೇ ಸ್ವಚ್ಛಗೊಳಿಸುವುದಾಗಿ ಭರವಸೆಯನ್ನೂ ನೀಡಿದ್ದಾರೆ