ಹೈದ್ರಾಬಾದ್: ಸಿಗಾಚಿ ಇಂಡಸ್ಟ್ರೀಸ್ ಫಾರ್ಮಾ ಫ್ಯಾಕ್ಟರಿ ಬ್ಲಾಸ್ಟ್ ; 40ಕ್ಕೂ ಹೆಚ್ಚು ಕಾರ್ಮಿಕರು ಸಾವು, ಛಿದ್ರಗೊಂಡು ಸುಟ್ಟುಹೋದ ಶವಗಳು, ಮೃತರ ಕುಟುಂಬಕ್ಕೆ ತಲಾ ಒಂದು ಕೋಟಿ ಪರಿಹಾರ ಘೋಷಣೆ..!!
ಹೈದರಾಬಾದ್, ಜುಲೈ 1 : ತೆಲಂಗಾಣ ರಾಜಧಾನಿ ಹೈದರಾಬಾದ್ ಬಳಿಯ ಪಾಶಮೈಲಾರಂ ಎಂಬಲ್ಲಿನ ಫಾರ್ಮಾ ಫ್ಯಾಕ್ಟರಿ ಸಿಗಾಚಿ ಇಂಡಸ್ಟ್ರೀಸ್ ನಲ್ಲಿ ಭಾರೀ ಅವಘಡ ಸಂಭವಿಸಿದ್ದು, ಬೆಂಕಿ ಹತ್ತಿಕೊಂಡು ಉಂಟಾದ ಸ್ಫೋಟ ಘಟನೆಯಲ್ಲಿ 40ಕ್ಕೂ ಹೆಚ್ಚು ಮಂದಿ ಕಾರ್ಮಿಕರು ಸಾವಿಗೀಡಾಗಿದ್ದಾರೆ. 36 ಮಂದಿಯ ಶವಗಳು ಪತ್ತೆಯಾಗಿದ್ದು, ಅಷ್ಟೇ ಮಂದಿ ಗಾಯಕ್ಕೀಡಾಗಿದ್ದಾರೆ. 80 ಮಂದಿಯ ಪೈಕಿ ಉಳಿದ ಕಾರ್ಮಿಕರು ಇನ್ನೂ ಪತ್ತೆಯಾಗಿಲ್ಲ.
ಸೋಮವಾರ ಬೆಳಗ್ಗೆ 9.30ರ ವೇಳೆಗೆ ಒಮ್ಮಿಂದೊಮ್ಮೆಲೇ ಭಾರೀ ಸ್ಫೋಟ ಸಂಭವಿಸಿದ್ದು ಸ್ಫೋಟದ ತೀವ್ರತೆಗೆ ಕಟ್ಟಡಗಳು ಒಡೆದು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಅಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಶವಗಳೂ ಉರಿದು ಹೋಗಿದ್ದಲ್ಲದೆ, ಛಿದ್ರಗೊಂಡು ಬಿದ್ದಿವೆ. 15 ಕಾರ್ಮಿಕರ ದೇಹಗಳು ಗುರುತು ಸಿಗದಷ್ಟು ಛಿದ್ರಗೊಂಡಿವೆ. 25ಕ್ಕೂ ಹೆಚ್ಚು ಮಂದಿ ತೀವ್ರ ಗಾಯಗೊಂಡಿದ್ದಾರೆ. ಕಾರ್ಮಿಕರಲ್ಲಿ ಹೆಚ್ಚಿನವರು ಬಿಹಾರ, ಪಶ್ಚಿಮ ಬಂಗಾಳ ಮೂಲದವರು ಎಂದು ರಕ್ಷಣಾ ನಿರತ ಎನ್ ಡಿಆರ್ ಎಫ್ ತಂಡದವರು ತಿಳಿಸಿದ್ದಾರೆ. ಎಂಟು ಗಂಟೆಯಂತೆ ಮೂರು ಶಿಫ್ಟ್ ಗಳಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಬೆಳಗ್ಗಿನ 8ರಿಂದ ಸಂಜೆ 6ರ ವರೆಗಿನ ಶಿಫ್ಟ್ ನಲ್ಲಿ 80 ಕಾರ್ಮಿಕರು ಕೆಲಸದಲ್ಲಿದ್ದರು. ಇವರಲ್ಲದೆ, ಅಲ್ಲಿಗೆ ಬಂದಿದ್ದ ಹೊರಗಿನವರೂ ಸೇರಿ ಹೆಚ್ಚಿನವರು ಕರಟಿ ಹೋಗಿದ್ದಾರೆ. ಬದುಕುಳಿದವರೂ ತೀವ್ರ ಸುಟ್ಟ ಗಾಯಕ್ಕೀಡಾಗಿದ್ದಾರೆ.
ಸ್ಫೋಟದ ಪರಿಣಾಮ ಕುಸಿದ ಮೂರು ಅಂತಸ್ತಿನ ಕಟ್ಟಡದ ಅವಶೇಷಗಳಲ್ಲಿ ಮೃತದೇಹಗಳಿಗಾಗಿ ರಕ್ಷಣಾ ಕಾರ್ಯಕರ್ತರು ಹುಡುಕಾಟ ಮುಂದುವರೆಸಿದ್ದಾರೆ. ಉತ್ಪಾದನಾ ಫ್ಯಾಕ್ಟರಿಯೇ ಸ್ಫೋಟಗೊಂಡು ಛಿದ್ರವಾಗಿದ್ದು, ಅವಶೇಷಗಳಡಿಯಲ್ಲಿ ಹೆಚ್ಚಿನ ಶವಗಳು ಪತ್ತೆಯಾಗಿವೆ. ಸ್ಥಳಕ್ಕೆ ತೆಲಂಗಾಣ ಸಿಎಂ ರೇವಂತ ರೆಡ್ಡಿ ಭೇಟಿ ನೀಡಿದ್ದು, ಮೃತರ ಕುಟುಂಬಗಳಿಗೆ ತಲಾ ಒಂದು ಕೋಟಿ ಮತ್ತು ಗಾಯಗೊಂಡವರಿಗೆ ತಲಾ 10 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ.
ಓಸ್ಮಾನಿಯಾ ಜನರಲ್ ಹಾಸ್ಟಿಟಲ್ ವೈದ್ಯರು ಡಿಎನ್ಎ ಟೆಸ್ಟ್ ಮಾಡಿ ಮೃತರ ಗುರುತು ಪತ್ತೆಗೆ ತಪಾಸಣೆ ನಡೆಸುತ್ತಿದ್ದಾರೆ. ಈವರೆಗೆ ಕೇವಲ ನಾಲ್ಕು ಮಂದಿಯ ಗುರುತು ಅಷ್ಟೇ ಸಿಕ್ಕಿದೆ ಎಂದು ಮೂಲಗಳು ತಿಳಿಸಿವೆ. ಫಾರ್ಮಾ ಫ್ಯಾಕ್ಟರಿಯಿದ್ದ ಕಟ್ಟಡ, ಯಂತ್ರಗಳೆಲ್ಲ ಸ್ಫೋಟಕ್ಕೆ ಛಿದ್ರವಾಗಿದ್ದು, ಸ್ಥಳಕ್ಕೆ ಬಂದ ಸಿಎಂ ರೇವಂತ್ ರೆಡ್ಡಿ ರಾಜ್ಯ ಈ ರೀತಿಯ ದುರಂತವನ್ನು ಹಿಂದೆಂದೂ ಕಂಡಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಘಟನೆ ಬಗ್ಗೆ ಜಿಲ್ಲಾ ಪೊಲೀಸರು ಎಫ್ಐಆರ್ ದಾಖಲಿಸಿದ್ದು, ಅವಘಡಕ್ಕೇನು ಕಾರಣ ಎಂದು ತನಿಖೆ ನಡೆಸುತ್ತಿದ್ದಾರೆ. ಮುಂದೆ ಈ ರೀತಿಯ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.
ಹೈದರಾಬಾದ್‌ನಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಸಂಗರೆಡ್ಡಿ ಜಿಲ್ಲೆಯ ಪಶಮೈಲಾರಂ ಕೈಗಾರಿಕಾ ಪ್ರದೇಶದಲ್ಲಿ ಸೋಮವಾರ ಬೆಳಗ್ಗೆ ಸ್ಪ್ರೇ ಡ್ರೈಯರ್‌ಗೆ ಬೆಂಕಿ ತಗುಲಿ ಸ್ಫೋಟಗೊಂಡಿದ್ದು ಇದರ ಕಿಡಿ ಹೊತ್ತಿಕೊಂಡು ಸಿಗಾಚಿ ಇಂಡಸ್ಟ್ರೀಸ್ ಲಿಮಿಟೆಡ್‌ನ ಔಷಧ ಕಾರ್ಖಾನೆಯಲ್ಲಿ ಭಾರೀ ಸ್ಫೋಟ ಸಂಭವಿಸಿತ್ತು