ಶಿವಮೊಗ್ಗ :ಹಾಸನ ಬಳಿಕ ಶಿವಮೊಗ್ಗ ಸರದಿ ; ಎರಡು ದಿನದಲ್ಲಿ ವಿದ್ಯಾರ್ಥಿ, ವೈದ್ಯ, ಯುವತಿ ಸೇರಿ ನಾಲ್ವರು ಹೃದಯಾಘಾತಕ್ಕೆ ಬಲಿ !

ಶಿವಮೊಗ್ಗ :ಹಾಸನ ಬಳಿಕ ಶಿವಮೊಗ್ಗ ಸರದಿ ; ಎರಡು ದಿನದಲ್ಲಿ ವಿದ್ಯಾರ್ಥಿ, ವೈದ್ಯ, ಯುವತಿ ಸೇರಿ ನಾಲ್ವರು ಹೃದಯಾಘಾತಕ್ಕೆ ಬಲಿ !

ಶಿವಮೊಗ್ಗ, ಜುಲೈ 1 : ಯುವಕರಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ ಎರಡೇ ದಿನದಲ್ಲಿ ವಿದ್ಯಾರ್ಥಿ ಸೇರಿ ನಾಲ್ವರು ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ.

21 ವರ್ಷದ ಯುವಕ, 23 ವರ್ಷದ ವಿವಾಹಿತೆ ಮತ್ತು ಓರ್ವ ವೈದ್ಯ, ಹಾಗೂ 52 ವರ್ಷದ ಮಹಿಳೆ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಭಾನುವಾರ ಡಿವಿಎಸ್ ಕಾಲೇಜಿನ ಅಂತಿಮ ವರ್ಷದ ಪದವಿ ವಿದ್ಯಾರ್ಥಿ ಶ್ರೀನಿಧಿ (21) ಹೃದಯಾಘಾತದಿಂದ ಸಾವನ್ನಪ್ಪಿದ್ದ. ಬಸವಗಂಗೂರಿನ ನಿವಾಸಿ ಶ್ರೀನಿಧಿಗೆ ಮುಂಜಾನೆಯೇ ಆರೋಗ್ಯದಲ್ಲಿ ದಿಢೀರ್ ಏರುಪೇರು ಕಾಣಿಸಿಕೊಂಡಿತ್ತು. ತಕ್ಷಣವೇ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾನೆ. ಹೃದಯಾಘಾತ ಹಾಗೂ ನ್ಯೂಮೋನಿಯಾದಿಂದ ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. 

ಸೋಮವಾರ ಜಿಲ್ಲೆಯಲ್ಲಿ ಮೂವರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಹೊಳೆಹೊನ್ನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಸಂದೀಪ್ (40) ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಆಯನೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲಾಗಿದ್ದ ಬಾಣಂತಿ‌ ಹರ್ಷಿತಾ (23) ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಹರ್ಷಿತಾ ಹಾಸನ ಜಿಲ್ಲೆಯ ಯುವಕನನ್ನು ಮದುವೆಯಾಗಿದ್ದರು. ಎ.5 ರಂದು ಎರಡನೇ ಹೆರಿಗೆಗೆ ಆಯನೂರು ಬಳಿಯ ದ್ಯಾವಿನಕೆರೆಯಲ್ಲಿರುವ ತವರು ಮನೆಗೆ ಬಂದಿದ್ದರು. ಮೇ 24 ರಂದು ಮೆಗ್ಗಾನ್ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಮಗುವಿಗೆ ಜನ್ಮ ನೀಡಿ 34 ದಿನಗಳ ಅಂತರದಲ್ಲಿ ಎದೆ ನೋವು ಕಾಣಿಸಿಕೊಂಡಿತ್ತು. ಅವರನ್ನು ಆಯನೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಅಲ್ಲಿಂದ ಶಿವಮೊಗ್ಗದ ಮೆಗ್ಗಾನ್‌ಗೆ ದಾಖಲಿಸಲು ಕರೆದೊಯ್ಯುವಾಗ ಮಾರ್ಗಮಧ್ಯೆ ಸಾವಿಗೀಡಾಗಿದ್ದಾರೆ. 

ಇನ್ನೊಂದು ಪ್ರಕರಣದಲ್ಲಿ ಚಿಕ್ಕಮ್ಮನ ಮಗನ ಅಂತ್ಯಕ್ರಿಯೆಗೆ ತೆರಳಿದ್ದ ಮಹಿಳೆ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಭದ್ರಾವತಿ ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ಮಹಿಳೆ ಸಾವಿಗೀಡಾಗಿದ್ದಾರೆ. ಮೃತರನ್ನು ಚೈತ್ರಾ (52) ಎಂದು ಗುರುತಿಸಲಾಗಿದೆ. ಹಾಸನ ಜಿಲ್ಲೆಯ ರೀತಿಯಲ್ಲೇ ಶಿವಮೊಗ್ಗದಲ್ಲೂ ಸರಣಿ ಹೃದಯಾಘಾತಕ್ಕೆ ಜನ ಬಲಿಯಾಗುತ್ತಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ.

Ads on article

Advertise in articles 1

advertising articles 2

Advertise under the article