ಮೈಸೂರು: ಪತ್ನಿ ಕೊಲೆಗೈದಿದ್ದಾನೆಂದು ಪತಿಗೆ ಜೈಲು ; ಅನಾಥ ಶವ ಪತ್ತೆ ಪ್ರಕರಣದಲ್ಲಿ ಫಿಕ್ಸ್ ಮಾಡಿದ್ದ ಪೊಲೀಸರು, ಎರಡು ವರ್ಷ ಜೈಲಿಗೆ ಹಾಕಿದ್ದಕ್ಕೆ ಇನ್ಸ್ ಪೆಕ್ಟರ್, ಪಿಎಸ್ಐ ಸೇರಿ ಮೂವರ ತಲೆದಂಡ !

ಮೈಸೂರು: ಪತ್ನಿ ಕೊಲೆಗೈದಿದ್ದಾನೆಂದು ಪತಿಗೆ ಜೈಲು ; ಅನಾಥ ಶವ ಪತ್ತೆ ಪ್ರಕರಣದಲ್ಲಿ ಫಿಕ್ಸ್ ಮಾಡಿದ್ದ ಪೊಲೀಸರು, ಎರಡು ವರ್ಷ ಜೈಲಿಗೆ ಹಾಕಿದ್ದಕ್ಕೆ ಇನ್ಸ್ ಪೆಕ್ಟರ್, ಪಿಎಸ್ಐ ಸೇರಿ ಮೂವರ ತಲೆದಂಡ !


ಮೈಸೂರು, ಜುಲೈ 1 : ಸುಳ್ಳು ಕೊಲೆ ಕೇಸ್​ ಹಾಕಿ ಅಮಾಯಕನನ್ನು ಜೈಲಿಗೆ ಕಳುಹಿಸಿದ ಆರೋಪದಲ್ಲಿ ಇನ್ಸ್​ಪೆಕ್ಟರ್ ಮತ್ತು ಇಬ್ಬರು ಸಬ್​ ಇನ್ಸ್​ಪೆಕ್ಟರ್​ಗಳನ್ನು ಅಮಾನತು ಮಾಡಲಾಗಿದೆ. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಪೊಲೀಸ್​ ಠಾಣೆ ಇನ್ಸ್‌ಪೆಕ್ಟರ್ ಬಿ.ಜಿ ಪ್ರಕಾಶ್, ಇಲವಾಲ ಸಬ್​​ ಇನ್ಸ್​​ಪೆಕ್ಟರ್​​ ಮಹೇಶ್‌ ಕುಮಾರ್ ಹಾಗೂ ಜಯಪುರ ಪೊಲೀಸ್​ ಠಾಣೆಯ ಸಬ್ ಇನ್ಸ್​ಪೆಕ್ಟರ್​ ಪ್ರಕಾಶ್ ಎತ್ತಿನಮನೆ ಅಮಾನತು ಆದವರು. 

ಕೊಲೆ ಪ್ರಕರಣದಲ್ಲಿ ವಿಚಾರಣಾಧಿಕಾರಿಗಳಾಗಿದ್ದ ಇವರು ಆದಿವಾಸಿ ಜನಾಂಗದ ವ್ಯಕ್ತಿ ಸುರೇಶ್ ಎಂಬವರನ್ನು ಸುಳ್ಳು ಚಾರ್ಜ್​​ಶೀಟ್ ಹಾಕಿ ಜೈಲಿಗೆ ಕಳುಹಿಸಿದ್ದರು. 

ಕೊಡಗು ಜಿಲ್ಲೆಯ ಕುಶಾಲನಗರದ ಬಸವನಹಳ್ಳಿ ಬಡಾವಣೆಯ ನಿವಾಸಿ ಸುರೇಶ್​ ಅಲಿಯಾಸ್ ಕುರುಬರ ಸುರೇಶ್ ಎಂಬವರನ್ನು ಪತ್ನಿಯನ್ನು ಕೊಲೆ ಮಾಡಿದ ಆರೋಪದಲ್ಲಿ ಅಂದಿನ ಬೈಲಕುಪ್ಪೆ ಸರ್ಕಲ್ ಇನ್ಸ್​ಪೆಕ್ಟರ್​ ಮತ್ತು ತನಿಖಾಧಿಕಾರಿ ಆಗಿದ್ದ ಬಿ.ಜಿ.ಪ್ರಕಾಶ್ ಸುಳ್ಳು ಪ್ರಕರಣ ಸೃಷ್ಟಿಸಿ, ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ತನಿಖಾ ತಂಡದಲ್ಲಿ ಬೆಟ್ಟದಪುರದ ಪ್ರೊಬೇಷನರಿ ಪಿಎಸ್‌ಐ ಮಹೇಶ್ ಕುಮಾರ್, ಎಸ್‌ಐ ಪ್ರಕಾಶ್ ಯತ್ತಿಮನಿ ಕೂಡ ಇದ್ದರು.

ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ನಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ಅಮಾಯಕನ ಮೇಲೆ ಚಾರ್ಜ್‌ಶೀಟ್ ಹಾಕಿ ಜೈಲಿಗೆ ಕಳುಹಿಸಿದ್ದರು. ಮೈಸೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ 9 ಮಂದಿ ಸಾಕ್ಷಿಗಳ ವಿಚಾರಣೆ ಆಗಿತ್ತು. "ನಾನು ನನ್ನ ಪತ್ನಿಯನ್ನು ಕೊಂದಿಲ್ಲ. ಆಕೆ ಬದುಕಿದ್ದಾಳೆ" ಎಂದು ಸುರೇಶ್ ಪದೇ ಪದೆ ನ್ಯಾಯಾಲಯದಲ್ಲಿ ಹೇಳಿದ್ದರು. ಅಷ್ಟೇ ಅಲ್ಲದೆ ನಮ್ಮ ತಾಯಿ ಬದುಕಿದ್ದಾಳೆ, ಸತ್ತಿಲ್ಲ ಎಂದು ಆಕೆಯ ಮಕ್ಕಳು ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿದಿದ್ದರು. ಆಕೆ ಸತ್ತಿಲ್ಲ ಎಂದು ಅಕ್ಕ ಪಕ್ಕದ ಮನೆಯವರೂ ಸಾಕ್ಷ್ಯ ಹೇಳಿದ್ದರು. ಆನಂತರ ಸತ್ತಿದ್ದಾಳೆ ಎಂದು ತಿಳಿದಿದ್ದ ಮಹಿಳೆಯೂ 2025ರ ಎಪ್ರಿಲ್ 2ರಂದು ಕೋರ್ಟಿಗೆ ಹಾಜರಾಗಿ ಪತಿ ಪರವಾಗಿ ಹೇಳಿಕೆ ನೀಡಿದ್ದಳು. ಇದರಿಂದಾಗಿ ಮೈಸೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಸುಳ್ಳು ಚಾರ್ಜ್​​ಶೀಟ್​ ಹಾಕಿರುವುದಾಗಿ ತಿಳಿದು ತನಿಖಾಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಿತ್ತು. 

2020 ಅಕ್ಟೋಬರ್​ 30 ರಂದು ಸುರೇಶ್​ ಪತ್ನಿ ಕೊಲೆಯಾಗಿದ್ದಾಳೆ ಎಂದು ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೋರ್ಟ್ ವಿಚಾರಣೆ ಬಳಿಕ ಪತ್ನಿಯನ್ನು ಕೊಲೆ ಮಾಡಿದ ಆರೋಪ ಹೊತ್ತು ಎರಡು ವರ್ಷಗಳ ಕಾಲ ಜೈಲಿನಲ್ಲಿದ್ದ ಪತಿ ಸುರೇಶ್ ಬಿಡುಗಡೆ ಆಗಿದ್ದ. ಇದೀಗ ಸುಳ್ಳು ಕೇಸ್ ಹಾಕಿದ್ದ ಮೂವರು ಪೊಲೀಸ್​ ಅಧಿಕಾರಿಗಳನ್ನು ರಾಜ್ಯ  ಸರ್ಕಾರ ಅಮಾನತು ಮಾಡಿದೆ.

2020ರ ನವೆಂಬರ್​ 12 ರಂದು ಬೆಟ್ಟದಪುರದಲ್ಲಿ ಓರ್ವ ಮಹಿಳೆಯ ಮೃತದೇಹ ಸಿಕ್ಕಿತ್ತು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದಾಗ ಬಲವಾದ ಏಟಿನಿಂದ ಮಹಿಳೆ ಮೃತಪಟ್ಟಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖವಾಗಿತ್ತು. ಹೀಗಾಗಿ ಅದು ಕೊಲೆ ಎಂದು ತಿಳಿದು ಪೊಲೀಸರು ಕೇಸು ದಾಖಲಿಸಿದ್ದರು. ಇದೇ ವೇಳೆ, ಕುಶಾಲನಗರದ ಬಸವನಹಳ್ಳಿ ಹೊಸ ಬಡಾವಣೆಯ ಜೇನುಕುರುಬ ಆದಿವಾಸಿ ಸಮುದಾಯಕ್ಕೆ ಸೇರಿದವರಾದ ಸುರೇಶ್​ ಅಲಿಯಾಸ್ ಕುರುಬರ ಸುರೇಶ್ ಅವರು 2020ರ ನವೆಂಬರ್​​ನಲ್ಲಿ ಪತ್ನಿ ಕಾಣೆಯಾಗಿರುವ ಕುರಿತು ದೂರು ನೀಡಿದ್ದರು. ಪತ್ನಿ ಕಾಣೆಯಾಗಲು ಗಣೇಶ್​ ಎಂಬಾತನೇ ಕಾರಣ ಎಂದು ತಿಳಿಸಿದ್ದರು. ಬಳಿಕ, ಈತನ ಪತ್ನಿ ಮಲ್ಲಿಗೆಯ ತಾಯಿ ಗೌರಿ ಅವರು ಮಗಳು ಕೊಲೆಯಾಗಿದ್ದಾಳೆ ಎಂದು ದೂರು ನೀಡಿದ್ದರು. ಹೀಗಾಗಿ ಪ್ರಕರಣದಲ್ಲಿ ಪೊಲೀಸರು ಸುರೇಶ್​ ಅವರನ್ನೇ ಆರೋಪಿಯಾಗಿಸಿದ್ದರು. ಇದರ ಕಾರಣಕ್ಕೆ ಪೊಲೀಸರು ಈತನನ್ನೇ ಫಿಕ್ಸ್ ಮಾಡಿದ್ದರು. ಆದರೆ ಕೋರ್ಟ್ ವಿಚಾರಣೆ ಸಂದರ್ಭದಲ್ಲಿ ಪತ್ನಿಯೇ ತಾನು ಬದುಕಿದ್ದೇನೆ ಎಂದು ಹೇಳಿಕೆ ನೀಡಿದ್ದು ಪೊಲೀಸರಿಗೆ ಮುಳುವಾಗಿದೆ.

Ads on article

Advertise in articles 1

advertising articles 2

Advertise under the article