ಫರಂಗಿಪೇಟೆ : ದಿಗಂತ್ ನಾಪತ್ತೆ ಬಗ್ಗೆ ಸಿಗದ ಸುಳಿವು ; ಸ್ಥಳೀಯರಲ್ಲಿ ನಾನಾ ರೀತಿಯ ಅನುಮಾನ, ಹೈಕೋರ್ಟಿನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಹಾಕಿದ ಪೋಷಕರು, ಮಾರ್ಚ್ 12ರಂದು ವರದಿ ಸಲ್ಲಿಕೆಗೆ ಗಡುವು.

ಮಂಗಳೂರು : ಫರಂಗಿಪೇಟೆ ಪಿಯುಸಿ ವಿದ್ಯಾರ್ಥಿ ದಿಗಂತ್ ನಾಪತ್ತೆಯಾಗಿ ಹತ್ತು ದಿನ ಕಳೆದರೂ, ಪೊಲೀಸರಿಗೆ ಸುಳಿವು ಹಿಡಿಯುವುದಕ್ಕೂ ಸಾಧ್ಯವಾಗದ ಹಿನ್ನೆಲೆಯಲ್ಲಿ ಪೋಷಕರು ಹೈಕೋರ್ಟ್ ಮೊರೆ ಹೋಗಿದ್ದು, ಮಗನನ್ನು ಪತ್ತೆ ಮಾಡಿಕೊಡುವಂತೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾರೆ.
ಜಸ್ಟಿಸ್ ಕಾಮೇಶ್ವರ ರಾವ್ ಮತ್ತು ನದಾಫ್ ಅವರಿದ್ದ ಹೈಕೋರ್ಟ್ ದ್ವಿಸದಸ್ಯ ಪೀಠದಲ್ಲಿ ಅರ್ಜಿಯ ವಿಚಾರಣೆ ನಡೆದಿದ್ದು, ಮಾರ್ಚ್ 12ರ ಒಳಗೆ ಈವರೆಗಿನ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ದ.ಕ. ಪೊಲೀಸ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಿದೆ. ಅರ್ಜಿಯ ಮುಂದಿನ ವಿಚಾರಣೆಯನ್ನು ಮಾರ್ಚ್ 13ಕ್ಕೆ ಮುಂದೂಡಲಾಗಿದೆ. ಬಂಟ್ವಾಳ ತಾಲೂಕಿನ ಫರಂಗಿಪೇಟೆ ಬಳಿಯ ಕಿದೆಬೆಟ್ಟು ಪದ್ಮನಾಭ ಎಂಬವರ ಪುತ್ರ ದಿಗಂತ್, ಫೆಬ್ರವರಿ 25ರ ಸಂಜೆಯಿಂದ ನಾಪತ್ತೆಯಾಗಿದ್ದ. ಫರಂಗಿಪೇಟೆ ಆಂಜನೇಯ ವ್ಯಾಯಾಮ ಶಾಲೆಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದ ದಿಗಂತ್, ದೇವಸ್ಥಾನಕ್ಕೂ ಹೋಗದೆ ಮನೆಗೂ ಬಾರದೆ ನಾಪತ್ತೆಯಾಗಿದ್ದ.
ಹುಡುಕಾಟ ಸಂದರ್ಭದಲ್ಲಿ ಫರಂಗಿಪೇಟೆಯ ರೈಲ್ವೇ ಹಳಿಯಲ್ಲಿ ದಿಗಂತ್ ಚಪ್ಪಲಿ ಹಾಗೂ ಮೊಬೈಲ್ ಪತ್ತೆಯಾಗಿತ್ತು. ಒಂದು ಚಪ್ಪಲಿಯಲ್ಲಿ ರಕ್ತದ ಕಲೆ ಕಂಡುಬಂದಿತ್ತು. ಪೊಲೀಸರು ಹುಡುಕಾಟಕ್ಕಿಳಿದು ಏಳು ತಂಡಗಳನ್ನು ತನಿಖೆಗೆ ಒಳಪಡಿಸಿದ್ದರೂ ದಿಗಂತ್ ಸಿಕ್ಕಿಲ್ಲ. ಇದರ ನಡುವೆ, ದಿಗಂತ್ ಬಗ್ಗೆ ಹಲವಾರು ಅನುಮಾನ, ವದಂತಿ ಹರಡಿದ್ದು ಹುಡುಗನನ್ನು ಮಂಗಳಮುಖಿಯರು ಅಪಹರಿಸಿದ್ದಾರೆಯೇ ಎಂಬ ಸಂಶಯವೂ ಸ್ಥಳೀಯರಲ್ಲಿದೆ. ಈ ಆಯಾನದಲ್ಲೂ ಪೊಲೀಸರು ತನಿಖೆ ನಡೆಸಿದ್ದಾರೆ. ಆದರೆ ಯಾವುದೇ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ.
ನಾಪತ್ತೆಯಾದ ಸಂದರ್ಭದಲ್ಲಿ ಪೊಲೀಸರು ದೂರು ಸ್ವೀಕರಿಸಿ ತಕ್ಷಣವೇ ಕ್ರಮ ಕೈಗೊಳ್ಳದ ಕಾರಣ ಪ್ರಕರಣ ಇಷ್ಟೊಂದು ಜಟಿಲವಾಗಿದೆ. ಆರಂಭದಲ್ಲಿ ಪೊಲೀಸರು ನಿರ್ಲಕ್ಷ್ಯ ವಹಿಸಿದರು. ಆರಂಭದಲ್ಲೇ ಸರಿಯಾದ ತನಿಖೆ ನಡೆಸದ ಕಾರಣ ಪತ್ತೆಗೆ ಅವಕಾಶ ಇದ್ದ ಅಮೂಲ್ಯ ಸಮಯವನ್ನು ಹಾಳು ಮಾಡಿದ್ದಾರೆ. ಮಾರ್ಚ್ 1 ರಂದು ಫರಂಗಿಪೇಟೆ ಬಂದ್ ಮಾಡಿದ ಬಳಿಕ ಏಳು ತನಿಖಾ ತಂಡಗಳನ್ನು ರಚಿಸಿ ತನಿಖೆಯನ್ನು ಆರಂಭಿಸಿದ್ದಾಗಿ ಹೇಬಿಯಸ್ ಕಾರ್ಪಸ್ ಅರ್ಜಿಯಲ್ಲಿ ಉಲ್ಲೇಖ ಮಾಡಲಾಗಿದೆ.
ಹೈಕೋರ್ಟ್ ನ್ಯಾಯಾಧೀಶರ ಮುಂದೆ ನಾಪತ್ತೆ ಪ್ರಕರಣದ ಬಗ್ಗೆ ಪೊಲೀಸರು ವರದಿ ನೀಡಲೇಬೇಕಾಗುತ್ತದೆ. ಪತ್ತೆಯಾಗದಿದ್ದರೆ ಇಷ್ಟು ದಿನಗಳ ಒಳಗಡೆ ಪತ್ತೆಹಚ್ಚುವ ಭರವಸೆಯನ್ನೂ ನೀಡಬೇಕಾಗುತ್ತದೆ. ಇದರಿಂದ ಪೊಲೀಸರ ಮೇಲೆ ಮತ್ತಷ್ಟು ಒತ್ತಡ ಬಿದ್ದಂತಾಗುತ್ತದೆ.