ಬೆಂಗಳೂರು :ಮದುವೆ ಬೆನ್ನಲ್ಲೇ ಚಿನ್ನ ಸ್ಮಗ್ಲಿಂಗ್ ಚಟಕ್ಕೆ ಬಿದ್ದ ಸುಂದರಿ ; ಸೊಂಟದಲ್ಲೇ 14 ಕೆಜಿ ಬಂಗಾರ ಹೊತ್ತು ತಂದು ಸಿಕ್ಕಿಬಿದ್ಲು ! ನಟನೆ ಬಿಟ್ಟು ದುಬೈ - ಬೆಂಗಳೂರು ಮಧ್ಯೆ ಐಜಿಪಿ ಮಗಳ ಸ್ಮಗ್ಲಿಂಗ್ ಡ್ಯೂಟಿ!!

ಬೆಂಗಳೂರು :ಮದುವೆ ಬೆನ್ನಲ್ಲೇ ಚಿನ್ನ ಸ್ಮಗ್ಲಿಂಗ್ ಚಟಕ್ಕೆ ಬಿದ್ದ ಸುಂದರಿ ; ಸೊಂಟದಲ್ಲೇ 14 ಕೆಜಿ ಬಂಗಾರ ಹೊತ್ತು ತಂದು ಸಿಕ್ಕಿಬಿದ್ಲು ! ನಟನೆ ಬಿಟ್ಟು ದುಬೈ - ಬೆಂಗಳೂರು ಮಧ್ಯೆ ಐಜಿಪಿ ಮಗಳ ಸ್ಮಗ್ಲಿಂಗ್ ಡ್ಯೂಟಿ!!


ಬೆಂಗಳೂರು : ಅರಬ್‌ ದೇಶಗಳಿಂದ ವಾಮಮಾರ್ಗದಲ್ಲಿ ಚಿನ್ನ ಕಳ್ಳಸಾಗಣೆ ಮಾಡಿದ ಜಾಲದಲ್ಲಿ ಕನ್ನಡದ ಮಾಣಿಕ್ಯ ಸಿನಿಮಾ ನಟಿ ರನ್ಯಾ ರಾವ್‌ ಸಿಲುಕಿದ್ದು ಕಂದಾಯ ಗುಪ್ತಚರ ದಳದ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ. ಅಂತಾರಾಷ್ಟ್ರೀಯ ಚಿನ್ನ ಸ್ಮಗ್ಲಿಂಗ್‌ ಜಾಲದಲ್ಲಿ ಸೆಲೆಬ್ರೆಟಿಗಳ ಪಾತ್ರವೂ ಬಟಾ ಬಯಲಾಗಿದ್ದು ರಾಜ್ಯದ ಇತಿಹಾಸದಲ್ಲೇ ಅತಿದೊಡ್ಡ ಆಪರೇಷನ್ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ದುಬೈನಿಂದ ಕೋಟ್ಯಾಂತರ ರೂ. ಬೆಲೆಬಾಳುವ 14.8 ಕೆ.ಜಿ. ಚಿನ್ನಾಭರಣ ಅಕ್ರಮವಾಗಿ ತಂದಿದ್ದ ರನ್ಯಾ ರಾವ್‌ ಳನ್ನ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ತಡರಾತ್ರಿ ವಶಕ್ಕೆ ಪಡೆಯಲಾಗಿತ್ತು. ನಟಿ ರನ್ಯಾ ಅವರ ಅಕ್ರಮ ಚಿನ್ನ ಸಾಗಾಟ ಜಾಲಕ್ಕೆ ಪೊಲೀಸರು ಹಾಗೂ ಉದ್ಯಮಿಗಳು ಸಹಕಾರ ನೀಡಿರುವ ಶಂಕೆ ವ್ಯಕ್ತವಾಗಿದೆ. ನಟಿ ರನ್ಯಾರನ್ನು ಎಚ್‌ಆರ್‌ಬಿಆರ್‌ ಲೇಔಟ್‌ನಲ್ಲಿರುವ ಡಿಆರ್‌ಐ ಕೇಂದ್ರ ಕಚೇರಿಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ನಟಿ ಜತೆಗಿನ ನಂಟು ಹೊಂದಿರುವ ಸ್ಮಗ್ಲಿಂಗ್‌ ದಂಧೆಯ ಸಹ ಆರೋಪಿಗಳ ಕುರಿತು ಹೆಚ್ಚಿನ ತನಿಖೆ ನಡೆಸಲಾಗಿದೆ.

ದುಬೈಗೆ ನಿರಂತರವಾಗಿ ಪ್ರವಾಸ ಮಾಡುತ್ತಿದ್ದ ರನ್ಯಾ, ವಾಪಸ್‌ ಬರುವಾಗ ಭಾರಿ ಪ್ರಮಾಣದ ಚಿನ್ನಾಭರಣ ಧರಿಸಿಕೊಂಡು ಅಕ್ರಮವಾಗಿ ತರುತ್ತಿದ್ದರು. ಕಸ್ಟಮ್ಸ್‌ ಹಾಗೂ ಭದ್ರತಾ ಸಿಬ್ಬಂದಿ ಪರಿಶೀಲನೆ ನಡೆಸದಂತೆ ತನ್ನ ಮಲತಂದೆ ಐಜಿಪಿ ರಾಮಚಂದ್ರ ರಾವ್ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದರು. ಅಷ್ಟೇ, ಅಲ್ಲದೆ ಅನಧಿಕೃತವಾಗಿ ಪೊಲೀಸ್‌ ಎಸ್ಕಾರ್ಟ್‌ನಲ್ಲಿಯೇ ಮನೆಗೆ ತೆರಳುತ್ತಿದ್ದರು ಎಂಬ ಮಾಹಿತಿಯಿದೆ. 


15 ದಿನ ಅಂತರದಲ್ಲಿ ನಾಲ್ಕು ಟ್ರಿಪ್‌ 

ನಟಿ ರನ್ಯಾ ರಾವ್‌ ಕಳೆದ ಹದಿನೈದು ದಿನಗಳಲ್ಲಿ ದುಬೈಗೆ ನಾಲ್ಕು ಬಾರಿ ಹೋಗಿ ಬಂದಿದ್ದರು. ವಾಪಸ್‌ ಬರುವ ವೇಳೆ ಹೆಚ್ಚಿನ ಪ್ರಮಾಣದ ಚಿನ್ನ ತರುತ್ತಿದ್ದ ಮಾಹಿತಿ ಡಿಆರ್‌ಐಗೆ ಸಿಕ್ಕಿತ್ತು. ಈ ನಿಟ್ಟಿನಲ್ಲಿ ವಿಶೇಷ ತಂಡವೊಂದು ರನ್ಯಾ ದುಬೈ ಪ್ರವಾಸದ ಮಾಹಿತಿಯನ್ನು ಕೆದಕಿ ಅಕ್ರಮವಾಗಿ ಚಿನ್ನ ತರುತ್ತಿದ್ದ ಜಾಲದ ಬಗ್ಗೆ ಮಾಹಿತಿ ಸಂಗ್ರಹಿಸಿತ್ತು. ಇತ್ತೀಚೆಗೆ ದುಬೈಗೆ ತೆರಳಿದ್ದ ರನ್ಯಾ ಸೋಮವಾರ ರಾತ್ರಿ ವಿಮಾನ ಇಳಿಯುತ್ತಿದ್ದಂತೆ ವಶಕ್ಕೆ ಪಡೆಯಲಾಗಿತ್ತು. ರನ್ಯಾ ಕತ್ತು, ಕಿವಿ ಹಾಗೂ ಕೈಗಳಲ್ಲಿ ಧರಿಸಿದ್ದ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ. ಜತೆಗೆ, ದೇಹದ ಒಳಭಾಗದ ಉಡುಪುಗಳಲ್ಲಿಯೂ ಚಿನ್ನದ ಗಟ್ಟಿಗಳನ್ನು ಬಚ್ಚಿಟ್ಟುಕೊಂಡಿರುವುದು ತಪಾಸಣೆ ವೇಳೆ ಕಂಡುಬಂದಿದ್ದು, ಅದನ್ನು ವಶಕ್ಕೆ ಪಡೆಯಲಾಗಿದೆ. ರನ್ಯಾ ಬಳಿ ಒಟ್ಟು 14.8 ಕೆ.ಜಿ. ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ಮೂಲಗಳು ಹೇಳಿವೆ.

ಮಾಡೆಲ್‌ ಹಾಗೂ ನಟಿಯಾಗಿ ಗುರುತಿಸಿಕೊಂಡಿರುವ ರನ್ಯಾ, ಸುದೀಪ್‌ ನಟನೆಯ 'ಮಾಣಿಕ್ಯ' ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಬಳಿಕ ತಮಿಳಿನ ವಾಘಾ, ಕನ್ನಡದ ಪಟಾಕಿ ಚಿತ್ರದಲ್ಲಿ ನಟಿಸಿದ್ದರು.

40 ಗ್ರಾಂ ತರಲು ಮಾತ್ರ ಅವಕಾಶ 

ದುಬೈನಿಂದ ಭಾರತಕ್ಕೆ ಬರುವ ಪುರುಷ ಪ್ರಯಾಣಿಕರು ಕಸ್ಟಮ್ಸ್‌ ಶುಲ್ಕವಿಲ್ಲದೆ ಕೇವಲ 20 ಗ್ರಾಂ ಚಿನ್ನಾಭರಣ (ಗರಿಷ್ಠ ಬೆಲೆ 50 ಸಾವಿರ ರೂ.) ತರಲು ಮಾತ್ರ ಅವಕಾಶವಿದೆ. ಮಹಿಳಾ ಪ್ರಯಾಣಿಕರು ಗರಿಷ್ಠ ಬೆಲೆ 1 ಲಕ್ಷ ರೂ. ಮೀರದಂತೆ 40 ಗ್ರಾಂ ಚಿನ್ನ ತರಲು ಅವಕಾಶವಿದೆ. ಒಂದು ವೇಳೆ ಪುರುಷ ಪ್ರಯಾಣಿಕರು 20 ಗ್ರಾಂಗಿಂತ ಹೆಚ್ಚು ಹಾಗೂ 50 ಗ್ರಾಂನೊಳಗೆ ಚಿನ್ನ ತಂದರೆ ಶೇ.3ರಷ್ಟು ಕಸ್ಟಮ್ಸ್‌ ಶುಲ್ಕ ಪಾವತಿಸಬೇಕು. 50 ಗ್ರಾಂಗಿಂತ ಹೆಚ್ಚಿನ ಚಿನ್ನಕ್ಕೆ ಶೇ 6, 100 ಗ್ರಾಂಗಿಂತ ಹೆಚ್ಚಿನ ಚಿನ್ನ ತಂದರೆ ಶೇ 10ರಷ್ಟು ಕಸ್ಟಮ್ಸ್‌ ಶುಲ್ಕ ಭರಿಸಬೇಕು. ಮಹಿಳಾ ಪ್ರಯಾಣಿಕರು 100 ಗ್ರಾಂ ಚಿನ್ನಕ್ಕೆ ಶೇ.3ರಷ್ಟು, 100 ಗ್ರಾಂಗಿಂತ ಹೆಚ್ಚು ತಂದರೆ ಶೇ. 6ಷ್ಟು ಶುಲ್ಕ ಭರಿಸಬೇಕು. 200 ಗ್ರಾಂಗಿಂತ ಹೆಚ್ಚು ಚಿನ್ನ ತಂದರೆ ಶೇ.10ರಷ್ಟು ಶುಲ್ಕ ಪಾವತಿಸಬೇಕು. ಅಷ್ಟೇ ಅಲ್ಲದೆ, ಚಿನ್ನಕ್ಕೆ ಸಂಬಂಧಿಸಿದ ಪೂರಕ ದಾಖಲೆಗಳು, ಖರೀದಿ ಹಾಗೂ ಪರಿಶುದ್ಧತೆ ದಾಖಲೆಗಳನ್ನು ಕಸ್ಟಮ್ಸ್‌ಗೆ ನೀಡಬೇಕು.

ವೃತ್ತಿಜೀವನದಲ್ಲಿ ಒಂದೇ ಒಂದು ಬ್ಲಾಕ್ ಮಾರ್ಕ್ ಇರಲಿಲ್ಲ 

ನಟಿ ರನ್ಯಾ ರಾವ್ ಬಂಧನ ವಿಚಾರಕ್ಕೆ ಸಂಬಂಧಿಸಿ ಕರ್ನಾಟಕ ಹಿರಿಯ ಐಪಿಎಸ್ ಅಧಿಕಾರಿ ಡಾ. ಕೆ. ರಾಮಚಂದ್ರ ರಾವ್ ಆಘಾತ ವ್ಯಕ್ತಪಡಿಸಿದ್ದಾರೆ. 'ತಮ್ಮ ಮಗಳು ಮಾಡಿದ್ದಾರೆ ಎನ್ನಲಾದ ಕೃತ್ಯದ ಬಗ್ಗೆ ತನಗೆ ಯಾವುದೇ ಪೂರ್ವ ಜ್ಞಾನವಿರಲಿಲ್ಲ ಮತ್ತು ಮಾಧ್ಯಮ ವರದಿಗಳ ಮೂಲಕ ಬಂಧನದ ಬಗ್ಗೆ ತಿಳಿದುಕೊಂಡೆ ಎಂದು ಹೇಳಿದ್ದಾರೆ. 'ಆರಂಭದಲ್ಲಿ ನಿಜಕ್ಕೂ ಈ ಸುದ್ದಿ ನನಗೆ ಆಘಾತ ಉಂಟು ಮಾಡಿತು. ವಿಷಯ ತಿಳಿಯುತ್ತಲೇ ದಿಗ್ಭ್ರಮೆಗೊಂಡೆ. ನಾನು ಹೆಚ್ಚೇನೂ ಹೇಳಲು ಬಯಸುವುದಿಲ್ಲ ಎಂದಿದ್ದಾರೆ.

ಇದೇ ವೇಳೆ ನಟಿ ರನ್ಯಾ ಅವರೊಂದಿಗಿನ ಸಂಬಂಧವನ್ನು ಸ್ಪಷ್ಟಪಡಿಸಿದ ರಾಮಚಂದ್ರ ರಾವ್, "ಪ್ರಸ್ತುತ ಆಕೆ ನಮ್ಮೊಂದಿಗೆ ವಾಸಿಸುತ್ತಿಲ್ಲ. ಆಕೆ ಪತಿಯೊಂದಿಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಕೆಲವು ಕೌಟುಂಬಿಕ ಸಮಸ್ಯೆಗಳಿಂದಾಗಿ ಉಭಯ ಕುಟುಂಬಗಳ ನಡುವೆ ಸಂಪರ್ಕವಿಲ್ಲ ಎಂದು ಹೇಳಿದ್ದಾರೆ.

ಅಂದಹಾಗೆ ನಟಿ ರನ್ಯಾ ರಾವ್ ಐಪಿಎಸ್ ಅಧಿಕಾರಿ ಡಾ. ಕೆ. ರಾಮಚಂದ್ರ ರಾವ್ ಅವರ 2ನೇ ಹೆಂಡತಿಯ ಮಗಳು. ಮೊದಲ ಪತ್ನಿ ನಿಧನರಾದ ನಂತರ ರಾವ್ ಅವರು ಮರು ಮದುವೆಯಾಗಿದ್ದರು. ಎರಡನೇ ಹೆಂಡತಿಗೆ ಅವರ ಹಿಂದಿನ ಮದುವೆಯಿಂದ ಇಬ್ಬರು ಹೆಣ್ಣು ಮಕ್ಕಳಿದ್ದರು, ಅವರಲ್ಲಿ ರನ್ಯಾ ಕೂಡ ಒಬ್ಬರು ಎನ್ನಲಾಗಿದೆ.

ಮದುವೆಯಾಗಿ ಮೂರೇ ತಿಂಗಳಿಗೆ ಸ್ಮಗ್ಲಿಂಗ್ 

ನಟಿ ರನ್ಯಾ ಮೂರು ತಿಂಗಳ ಹಿಂದೆಯಷ್ಟೇ ರಾಜ್ಯದ ಹೆಸರಾಂತ ರಾಜಕೀಯ ಕುಟುಂಬದ ಸಂಬಂಧಿಕರ ಜೊತೆ ತಾಜ್‌ ವೆಸ್ಟೆಂಡ್ ನಲ್ಲಿ ಮದುವೆ ಮಾಡಿಕೊಂಡಿದ್ದರು. ಗಂಡ ಹೆಸರಾಂತ ಆರ್ಕಿಟೆಕ್ಟ್ ಆಗಿದ್ದಾನೆ. ಮೂರು ತಿಂಗಳ ಹಿಂದೆಯಷ್ಟೇ ಹೊಸ ಲಾವೆಲ್ಲಾ ಫ್ಲ್ಯಾಟ್‌ಗೆ ಶಿಫ್ಟ್ ಆಗಿದ್ದರು. ಹೀಗೆ ಹನಿಮೂನ್ ಸಂಭ್ರಮದಲ್ಲಿ ಇರಬೇಕಾದ ರನ್ಯಾ ಚಿನ್ನದ ಸ್ಮಗ್ಲಿಂಗ್‌ ಇಳಿದು ಲಾಕ್ ಆಗಿದ್ದಾಳೆ. ಒಮ್ಮೆ ಚಿನ್ನ ಸಾಗಿಸಿದ್ರೆ ಈಕೆಗೆ 50 ಲಕ್ಷ ಕಮಿಷನ್ ಸಿಗುತ್ತಿತ್ತು ಅನ್ನೋದು ತನಿಖೆಯಲ್ಲಿ ಗೊತ್ತಾಗಿದೆ. ಈಕೆಯ ಜೊತೆಗೆ ಹಲವು ಪ್ರಭಾವಿಗಳು, ದೊಡ್ಡ ದೊಡ್ಡ ತಂಡವೇ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. 

ಬಟ್ಟೆಯಲ್ಲೇ ಅಡಗಿತ್ತು ಮುಕ್ಕಾಲು ಭಾಗ ಗೋಲ್ಡ್..! 

ಕೆಜಿಗಟ್ಟಲೇ ಚಿನ್ನವನ್ನ ಸಾಗಿಸಲು ಹೋಗಿ ಸಿಕ್ಕಿ ಬಿದ್ದ ರನ್ಯಾ ರಾವ್ ಐಡಿಯಾ ಕಂಡು ಡಿಐಆರ್ ಅಧಿಕಾರಿಗಳೇ ಶಾಕ್ ಆಗಿದ್ದಾರೆ. ರನ್ಯಾ ಅಕ್ರಮವಾಗಿ ತಂದಿದ್ದ 14.8 ಕೆ.ಜಿ ಚಿನ್ನದ ಪೈಕಿ ಆಕೆ ತೊಟ್ಟಿದ್ದ ಬಟ್ಟೆಯಲ್ಲೇ ಮುಕ್ಕಾಲು ಭಾಗ ಇತ್ತು ಎನ್ನಲಾಗಿದೆ. ಉಳಿದದ್ದು ಬ್ಯಾಗ್ನಲ್ಲಿ ಪತ್ತೆ ಆಗಿದೆ. ಎಲ್ಲವೂ ಗಟ್ಟಿ ಬಾರ್ ಅಂದ್ರೆ ಬಿಸ್ಕೆಟ್ ಗಿಂತ ಉದ್ದ ಹಾಗೂ ದಪ್ಪದ ರೂಪದಲ್ಲಿತ್ತು ಎಂಬ ಮಾಹಿತಿ ಇದೆ.

Ads on article

Advertise in articles 1

advertising articles 2

Advertise under the article