ನವದೆಹಲಿ :ನವಜಾತ ಶಿಶುವನ್ನು ಪೊದೆಗೆ ಎಸೆದ ಮನ ಕಲಕುವ ಘಟನೆ ಮಗುವನ್ನು ರಕ್ಷಿಸಿದ ಪೊಲೀಸ್ ಅಧಿಕಾರಿಗಳು
Monday, October 14, 2024
ನವದೆಹಲಿ: ಆ ಮಗು ಹುಟ್ಟಿ ಕೆಲವೇ ಕ್ಷಣಗಳಾಗಿತ್ತು.ಹೊಕ್ಕುಳಬಳ್ಳಿಯ ಮೇಲಿನ ಗಾಯವು ಕೂಡ ಇನ್ನೂ ಮಾಸಿರಲಿಲ್ಲ. ಮಾನವೀಯತೆಯನ್ನೇ ಮರೆತ ಜನ್ಮ ಕೊಟ್ಟವರು ಆ ಮಗುವನ್ನು ಪೊದೆಯಲ್ಲಿ ಎಸೆದು ಹೋಗಿದ್ದರು. ಇದೇ ವೇಳೆ ಆ ಮಗುವನ್ನು ರಕ್ಷಣೆ ಮಾಡಿದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ದತ್ತು ಪಡೆಯುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಈ ಘಟನೆ ನಡೆದಿದೆ. ಪೊದೆಯಲ್ಲಿ ಎಸೆದು ಹೋಗಿದ್ದ ನವಜಾತ ಹೆಣ್ಣು ಮಗು ಅಳುವ ಶಬ್ದವನ್ನು ಕೇಳಿ ಸಮೀಪದ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದರು. ಸಬ್ ಇನ್ಸ್‌ಪೆಕ್ಟರ್ ಪುಷ್ಟೇಂದ್ರ ಸಿಂಗ್ ನೇತೃತ್ವದಲ್ಲಿ ದುಧಿಯಾ ಪೀಪಲ್ ಪೊಲೀಸ್ ಔಟ್‌ಪೋಸ್ಟ್‌ನ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಧಾವಿಸಿ ಮಗುವನ್ನು ರಕ್ಷಿಸಿದರು.
ವೈದ್ಯಕೀಯ ತಪಾಸಣೆ ಮತ್ತು ಆರೈಕೆಗಾಗಿ ಮಗುವನ್ನು ದಾಸ್ನಾ ಆಸ್ಪತ್ರೆಗೆ ತಕ್ಷಣ ಕರೆದೊಯ್ಯಲಾಯಿತು. ಇದಾದ ಬಳಿಕ ಮಗುವಿನ ಪಾಲಕರನ್ನು ಪತ್ತೆಹಚ್ಚಲು ಸಾಕಷ್ಟು ಪ್ರಯತ್ನಿಸಿದರೂ ಯಾರೂ ಕೂಡ ಮಗು ತಮ್ಮದೆಂದು ಹೇಳಿಕೊಂಡು ಮುಂದೆ ಬರಲಿಲ್ಲ.
ನವಜಾತ ಮಗುವಿನ ಪರಿಸ್ಥಿತಿ ನೋಡಿ ಎಸ್‌ಐ ಪುಷ್ಪೇ಼ಂದ್ರ ಸಿಂಗ್ ಮತ್ತು ಅವರ ಪತ್ನಿ ರಾಶಿ ಅವರ ಮನ ಕರಗಿತು.ಕಾನೂನು ಪ್ರಕ್ರಿಯೆ ಮೂಲಕ ಮಗುವನ್ನು ದತ್ತು ತೆಗೆದುಕೊಳ್ಳಲು
ನಿರ್ಧರಿಸಿದರು
2018ರಲ್ಲಿ ವಿವಾಹವಾಗಿ, ಮಕ್ಕಳಿಲ್ಲದೇ ನೊಂದಿದ್ದ ದಂಪತಿಗೆ ನವರಾತ್ರಿ ಹಬ್ಬದ ಸಮಯದಲ್ಲೇ ಮನೆಗೆ ಮಗುವಿನ ಆಗಮನವಾಗಿದ್ದು . ಇದನ್ನು ನೋಡಿ ದೈವಿಕ ಆಶೀರ್ವಾದವೆಂದು ಭಾವಿಸಿದ್ದಾರೆ.