ಉಪ್ಪಿನಂಗಡಿ: ಕಾಡುಕೋಣ ಬೇಟೆ, ಅರಣ್ಯಾ ಧಿಕಾರಿಗಳ ದಾಳಿ ವೇಳೆ ಪರಾರಿ ಆದ ಆರೋಪಿಗಳು, ಮುಂದುವರೆದ ಕಾರ್ಯಚಾರಣೆ
Monday, October 14, 2024
ನೆಲ್ಯಾಡಿ: ಉಪ್ಪಿನಂಗಡಿ ವಲಯ ಅರಣ್ಯ ವ್ಯಾಪ್ತಿಯ ನಿಡ್ಲೆ ಗ್ರಾಮದ ಬೂಡುಜಾಲು ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಕಾಡುಕೋಣ ಬೇಟೆಯಾಡಿದ ಪ್ರಕರಣಕ್ಕೆ ಸಂಬಂಧಿಸಿ ಉಪ್ಪಿನಂಗಡಿ ವಲಯ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಪ್ರಕರಣದ ಶಂಕಿತ ಆರೋಪಿಗಳ ಮನೆಗೆ ದಾಳಿ ನಡೆಸಿದ್ದಾರೆ.ಈ ವೇಳೆ ಬೇಯಿಸಿ ಒಣಗಿಸುತ್ತಿದ್ದ ಮಾಂಸ ಪತ್ತೆ ಹಚ್ಚಿದ್ದು, ಪ್ರಕರಣ ದಾಖಲಿಸಿದ್ದಾರೆ.
ಆರೋಪಿಗಳು ಅರಣ್ಯದ ಅಂಚಿನಲ್ಲಿರುವ ತೋಟದಲ್ಲಿ ಕಾಡುಕೋಣ ಕೊಂದು ಅದರ ಅಂಗಾಂಗಗಳನ್ನು ಬೇರ್ಪಡಿಸಿ ವಾಹನವೊಂದರಲ್ಲಿ ಸಾಗಾಟ ಮಾಡಿ,
ಮನೆಯಲ್ಲಿ ಶೇಖರಿಸಿದ್ದ ಮಾಹಿತಿ ತಿಳಿದ ಅರಣ್ಯ ಅಧಿಕಾರಿಗಳ ತಂಡ ಶನಿವಾರ ರಾತ್ರಿಯಿಂದಲೇ ಪತ್ತೆ ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಆರೋಪಿ ಶಿಬಾಜೆ ಗ್ರಾಮದ ಕಡಮಕಲ್ ವಾಸಿಯಾಗಿದ್ದಾನೆ.ರಾಜು ಎಂಬಾತನ ಮನೆಯಲ್ಲಿ ಬೇಯಿಸಿ,ಒಣಗಿಸುತ್ತಿದ್ದ ಮಾಂಸವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಆರೋಪಿಗಳು ಪರಾರಿ:
ಕಾಡುಕೋಣವನ್ನು ಬೇಟೆಯಾಡಿರುವ ತಂಡದಲ್ಲಿ ಸುಮಾರು 7 ಮಂದಿ ಇದ್ದು, ಈ ಪೈಕಿ ಬಹುತೇಕ ಮಂದಿ ಮನೆಗೆ ಬೀಗ ಹಾಕಿ ವಾಹನದೊಂದಿಗೆ ಪರಾರಿ ಆಗಿದ್ದಾರೆ ಎಂದು ಹೇಳಲಾಗಿದೆ. ಬೇಟೆಯಾಡಿರುವ ಕಾಡುಕೋಣ ಸುಮಾರು ಭಾರಿ ಗಾತ್ರದ್ದಾಗಿದ್ದು, ಸುಮಾರು 4 ಕ್ವಿಂಟಲ್ ಮಾಂಸ ದೊರೆತಿರುವ ಅನುಮಾನ ವ್ಯಕ್ತವಾಗಿದೆ. ಅದನ್ನು ಆರೋಪಿಗಳು ಪಾಲುಮಾಡಿಕೊಂಡಿದ್ದಾರೆ. ಈ ಪೈಕಿ ಕೆಲವರು ಮಾಂಸವನ್ನು ಮನೆಯ ಹಿಂಭಾಗದ ಗುಡ್ಡದಲ್ಲಿ ಹೂತಿರುವ ಸಾಧ್ಯತೆ ಇದೆ.ಕೆಲವರು ಪರಾರಿಯಾಗುವಾಗ ಮಾಂಸವನ್ನೂ ಕೊಂಡೊಯ್ದಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಈ ಪೈಕಿ 3 ಮಂದಿ ಶಂಕಿತ ಆರೋಪಿಗಳ ಮನೆಗೆ ದಾಳಿ ನಡೆಸಿದ್ದೇವೆ. ಆರೋಪಿಗಳು ಪರಾರಿ ಆಗಿದ್ದು, ತನಿಖೆ ತೀವ್ರಗತಿಯಲ್ಲಿ ನಡೆಯುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ವಲಯ ಅರಣ್ಯಾಧಿಕಾರಿ ರಾಘವೇಂದ್ರ ಮಾದ್ಯಮವೊಂದಕ್ಕೆ ತಿಳಿಸಿದ್ದಾರೆ. ಅವರ ದಾಳಿ ಕಾರ್ಯಾಚರಣೆಯ ತಂಡದಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ರಾಜೇಶ್, ಶಿವಾನಂದ ಆಚಾರ್ಯ, ಯತೀಂದ್ರ, ಭವಾನಿ ಶಂಕರ್, ಅರಣ್ಯ ರಕ್ಷಕ ಶಿವಾನಂದ ಕುದುರಿ ಭಾಗವಹಿಸಿದ್ದರು.