ದೇರಳಕಟ್ಟೆ :ಚಿಕಿತ್ಸೆಗೆ ದಾಖಲಾಗಿದ್ದ ಬಾಲಕನಿಗೆ ಲೈಂಗಿಕ ಕಿರುಕುಳ ; ತಾಯಿಗೆ ಮೂರನೇ ಮಗುವಾಗಿಸಲು ಸಹಕಾರ ನೀಡ್ತೀನಿ ಎಂದ ಪೋಲಿ ಡಾಕ್ಟರ್, ದೇರಳಕಟ್ಟೆ ಮೆಡಿಕಲ್ ಕಾಲೇಜು ಟ್ರೈನೀ ವಿರುದ್ಧ ಪೋಕ್ಸೊ ಪ್ರಕರಣ !

ಉಳ್ಳಾಲ: ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಾಗಿದ್ದ ಹದಿನೈದು ವರ್ಷದ ಅಪ್ರಾಪ್ತ ಬಾಲಕನಿಗೆ ಇಂಟರ್ನ್ ಶಿಪ್ ವೈದ್ಯನೋರ್ವ ಗುಪ್ತಾಂಗವನ್ನ ಮುಟ್ಟಿ ಲೈಂಗಿಕ ಕಿರುಕುಳವೆಸಗಿದ್ದು ವಿಚಾರವನ್ನ ಯಾರಿಗೂ ಹೇಳದಂತೆ ಬೆದರಿಸಿದ ಘಟನೆ ದೇರಳಕಟ್ಟೆಯ ಕಣಚೂರು ಆಸ್ಪತ್ರೆಯಲ್ಲಿ ನಡೆದಿದೆ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಆರೋಪಿ ವೈದ್ಯನ ವಿರುದ್ಧ ಫೋಕ್ಸೊ ಪ್ರಕರಣ ದಾಖಲಾಗಿದೆ.
ಉಳ್ಳಾಲ ತಾಲೂಕಿನ ವಸತಿ ಶಾಲೆಯೊಂದರ ಹಿಂದು ಸಮುದಾಯದ ಹದಿನೈದು ವರ್ಷದ ಅಪ್ರಾಪ್ತ ಬಾಲಕನಿಗೆ ಸಣ್ಣ ಮಟ್ಟದ ಮಾನಸಿಕ (Obsessive Compulsive Disorder) ರೋಗ ಬಾಧಿಸುತ್ತಿದ್ದು, ವೈದ್ಯರ ಸಲಹೆ ಮೇರೆಗೆ ಪೋಷಕರು ಬಾಲಕನನ್ನ ಕಳೆದ ಡಿಸೆಂಬರ್ 12 ರಂದು ದೇರಳಕಟ್ಟೆಯ ಕಣಚೂರು ಆಸ್ಪತ್ರೆಯ ಮಾನಸಿಕ ಚಿಕಿತ್ಸಾ ವಿಭಾಗಕ್ಕೆ ದಾಖಲಿಸಿದ್ದರು.

ಅಂದು ಮಧ್ಯಾಹ್ನ 3.15 ಗಂಟೆ ಸುಮಾರಿಗೆ ಇಂಟರ್ನಿ ವೈದ್ಯನೆಂದು ಹೇಳಿಕೊಂಡು ಬಂದ ಮಹಮ್ಮದ್ ಆಲಿ ಎಂಬಾತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಪ್ರಾಪ್ತ ಬಾಲಕನಲ್ಲಿ ಅಸಭ್ಯವಾಗಿ ಲೈಂಗಿಕ ವಿಚಾರಗಳ ಬಗ್ಗೆ ಮಾತನಾಡಿ, ಬಾಲಕನ ಗುಪ್ತಾಂಗದ ಗಾತ್ರದ ಬಗ್ಗೆ ಪ್ರಶ್ನಿಸಿದ್ದಾನೆ. ಮತ್ತೂ ಮುಂದುವರಿದ ಆರೋಪಿ ಬಾಲಕನನ್ನು ಉದ್ದೇಶಿಸಿ ನಿನ್ನ ತಾಯಿಗೆ ಮೂರನೇ ಮಗು ಯಾಕಾಗಿಲ್ಲ..? ಆಕೆಗೆ ಮೂರನೇ ಮಗುವಾಗಲು ನನ್ನ ಸಹಾಯ ಬೇಕಾಗಬಹುದೆಂದು ಹೇಳಿ ಬಾಲಕನ ಗುಪ್ತಾಂಗವನ್ನ ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದು ನಡೆದಿರುವ ವಿಚಾರವನ್ನ ಪೋಷಕರಿಗೆ ತಿಳಿಸದಂತೆ ಬೆದರಿಕೆಯೊಡ್ಡಿದ್ದಾನೆ.
ಈ ಹಿಂದೆ ಕಣಚೂರು ಆಸ್ಪತ್ರೆಯಲ್ಲಿ ಬಾಲಕನನ್ನ ಆರೋಗ್ಯ ಪರೀಕ್ಷೆಗಾಗಿ ಲಿಫ್ಟ್ ನಲ್ಲಿ ಲ್ಯಾಬ್ ಗೆ ಸಾಗಿಸುತ್ತಿದ್ದ ವೇಳೆಯೂ ಆರೋಪಿ ಮಹಮ್ಮದ್ ಆಲಿ ಬಾಲಕನ ಹಿಂಭಾಗವನ್ನು ಸ್ಫರ್ಶಿಸಿ ಲೈಂಗಿಕ ಕಿರುಕುಳ ನೀಡಿದ್ದನೆಂದು ಆರೋಪಿಸಲಾಗಿದೆ. ಆರೋಪಿ ಮಹಮ್ಮದ್ ಆಲಿ ನೀಡಿರುವ ಲೈಂಗಿಕ ಕಿರುಕುಳದ ಬಗ್ಗೆ ಸಂತ್ರಸ್ತ ಬಾಲಕ ತನ್ನ ಸಹೋದರ ಮತ್ತು ತಾಯಿಯಲ್ಲಿ ಹೇಳಿಕೊಂಡಿದ್ದ. ಅಪ್ರಾಪ್ತ ಮಗನ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯದ ವಿಚಾರ ತಿಳಿದ ತಾಯಿ ಆಘಾತದಿಂದ ಕುಸಿದು ಅಸ್ವಸ್ಥಳಾಗಿದ್ದು ಆಕೆಗೆ ಕಣಚೂರು ಆಸ್ಪತ್ರೆಯಲ್ಲೇ ಚಿಕಿತ್ಸೆಯನ್ನ ನೀಡಲಾಗಿತ್ತು.
ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತ ಬಾಲಕನ ತಂದೆ ಡಿ.29 ರಂದು ಆರೋಪಿ ಮಹಮ್ಮದ್ ಆಲಿ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆರೋಪಿ ಮಹಮ್ಮದ್ ಆಲಿ ತನ್ನ ಅಪ್ರಾಪ್ತ ಮಗನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು, ಘಟನೆಯಿಂದ ತನ್ನ ಮಗನಲ್ಲಿ ಭಯ, ಆತಂಕದಿಂದ ಮಾನಸಿಕ ಖಿನ್ನತೆಗೀಡಾಗಿದ್ದಾನೆ. ಮಾನಸಿಕ ಆಘಾತದ ಲಕ್ಷಣಗಳು ಕಾಣಿಸಿಕೊಂಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಉಳ್ಳಾಲ ಠಾಣೆ ಪೊಲೀಸರು ಆರೋಪಿ ಮಹಮ್ಮದ್ ಆಲಿ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.