ಧಾರವಾಡ :ಹೆಂಡತಿ ಮೇಲೆ ಕಣ್ಣು ; ಗುತ್ತಿಗೆದಾರನನ್ನು ಕೊಲೆ ಮಾಡಿ ಬಿಲ್ಡಿಂಗ್ ಮೇಲಿಂದ ಬಿದ್ದಿರುವುದಾಗಿ ಬಿಂಬಿಸಿದ ಮೂವರು, ಧಾರವಾಡ ಖಾಕಿ ಬಲೆಗೆ ಬಿದ್ದ ಕೊಲೆಗಾರರು...!!

ಧಾರವಾಡ: ಗುತ್ತಿಗೆದಾರನನ್ನು ಕೊಲೆ ಮಾಡಿ ಬಿಲ್ಡಿಂಗ್ ಮೇಲಿಂದ ಕಾಲು ಜಾರಿ ಬಿದ್ದಿದ್ದಾರೆ ಎಂದು ಬಿಂಬಿಸಲು ಹೋಗಿ ಮೂವರು ಜೈಲು ಪಾಲಾದ ಘಟನೆ ಕಾನೂನು ವಿವಿ ಹತ್ತಿರದ ನಿರ್ಮಾಣ ಹಂತದ ಕಟ್ಟಡದಲ್ಲಿ ನಡೆದಿದೆ.
ವಿಜಯಪುರ ಜಿಲ್ಲೆಯ ತಿಕೋಟಾದ ವಿಠಲ ರಾಥೋಡ್ (65) ಕೊಲೆಯಾದ ವ್ಯಕ್ತಿ. ಮೇಘವ ಸತನಾಮಿ (50) ಭಗವಾನ ದಾಸ ಸತನಾಮಿ (21), ವಿಮಲಾ ಸತನಾಮಿ (41) ಆರೋಪಿಗಳು. ಇವರೆಲ್ಲ ಸೇರಿಕೊಂಡು ವಿಠ್ಠಲ ರಾಥೋಡ್ ಅನ್ನು ಕೊಲೆ ಮಾಡಿ ಕಟ್ಟಡದ ಮೇಲಿಂದ ಬಿದ್ದಿದ್ದಾರೆ, ಧಾರವಾಡದ ಎಸ್.ಡಿ.ಎಂ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೃತನ ಮಗನಿಗೆ ಕರೆ ಮಾಡಿ ತಿಳಿಸಿದ್ದಾರೆ.

ನಂತರ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಅಲ್ಲಿದ್ದವರನ್ನು ವಿಚಾರಣೆ ನಡೆಸಿದಾಗ ಘಟನೆ ಆಕಸ್ಮಿಕವಾಗಿರದೇ ಕೊಲೆ ಎಂದು ಗೊತ್ತಾದ ಮೇಲೆ ಈ ಮೂವರು ಆರೋಪಿಗಳನ್ನು ಬಂಧಿಸಿ ಮುಂದಿನ ಕಾನೂನು ಕ್ರಮ ಕೈಗೊಂಡು ತನಿಖೆ ಮುಂದುವರೆಸಿದ್ದಾರೆ.
ಮೂವರು ಆರೋಪಿಗಳು ಛತ್ತೀಸ್ಗಡ ಮೂಲದವರಾಗಿದ್ದು, ಮೃತ ವಿಠ್ಠಲ ರಾಥೋಡ್ ಬಳಿ ನಾಲ್ಕೈದು ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದರು. ವಿಮಲಾ ಸತನಾಮಿ ಜೊತೆಗೆ ಮೃತ ವಿಠ್ಠಲ ರಾಥೋಡ್ ಆತ್ಮೀಯತೆಯಿಂದ ಇರುವುದೇ ಕೊಲೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಆಯುಕ್ತ ಶಶಿಕುಮಾರ್, "ಕಾನೂನು ವಿವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಆಡಳಿತ ಕಟ್ಟಡ ಕಾಮಗಾರಿ ನಡೆಯುತ್ತಿತ್ತು. ಅದರಲ್ಲಿ ಕೆಲಸ ಮಾಡುತ್ತಿದ್ದಂತಹ ಮೂರು ಜನ ಕಾರ್ಮಿಕರು ಹಾಗೂ ಕಾರ್ಮಿಕ ಗುತ್ತಿಗೆದಾರ ವಿಠ್ಠಲ ರಾಥೋಡ್ ನಡುವೆ ಜ. 10ರಂದು ರಾತ್ರಿ ಜಗಳವಾಗಿದೆ. ಜಗಳ ತಾರಕಕ್ಕೇರಿ ಅಲ್ಲಿದ್ದ ಮಹಿಳೆಯ ಮಗ ವಿಠ್ಠಲ್ ರಾಥೋಡ್ ಮೇಲೆ ಹಲ್ಲೆ ಮಾಡಿದ್ದಾನೆ. ಮೂರೂ ಜನ ಸೇರಿ ಆತ ಕಟ್ಟಡದ ಮೇಲಿಂದ ಬಿದ್ದಿದ್ದಾರೆ ಎಂಬ ರೀತಿ ಬಿಂಬಿಸುತ್ತಾರೆ. ಆ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಿದಾಗಲೂ, ಆರೊಪಿಗಳು ಅಲ್ಲಿಯೂ ಅದೇ ರೀತಿಯ ಹೇಳಿಕೆಗಳನ್ನು ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ ವೇಳೆ ನಮ್ಮ ಅಧಿಕಾರಿಗಳಿಗೆ ಅಲ್ಲಿ ಕಟ್ಟಡದಿಂದ ಬಿದ್ದು ಪೆಟ್ಟಾಗುವಂತೆ ಇಲ್ಲ ಎಂಬ ಸಂಶಯ ಬಂದಿದೆ. ಇದೇ ಆಧಾರದ ಮೇಲೆ ಸಂಶಯಾತ್ಮಕ ವ್ಯಕ್ತಿಗಳನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಯಿತು" ಎಂದು ತಿಳಿಸಿದ್ದಾರೆ.
"ಮೇಘವ್ ಸತನಾಮಿ, ಆತನ ಪತ್ನಿ ವಿಮಲಾ ಸತನಾಮಿ ಹಾಗೂ ಮಗ ಭಗವಾನ ದಾಸ ಸತನಾಮಿ, ಛತ್ತೀಸ್ಗಡ ಮೂಲದವರು. ಇದೇ ಗುತ್ತಿಗೆದಾರ ಜೊತೆ ಕಳೆದ ನಾಲ್ಕೈದು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಗುತ್ತಿಗೆದಾರ ವಿಠ್ಠಲ್ ರಾಥೋಡ್ಗೆ ವಿಮಲಾ ಜೊತೆ ಹೆಚ್ಚು ಆತ್ಮೀಯತೆ ಇತ್ತು ಎಂದು ವಿಮಲಾಳ ಗಂಡ ಹಾಗೂ ಮಗ ಯಾವಾಗಲೂ ವಿರೋಧಿಸುತ್ತಾ ಇರುತ್ತಾರೆ. ಇದೇ ವಿಷಯಕ್ಕೆ ಮೊನ್ನೆ ಆದಂತಹ ಸಂಘರ್ಷದಲ್ಲಿ ಆತನಿಗೆ ಪೆಟ್ಟು ಬಿದ್ದಿದೆ. ನಂತರ ಆತ ಸಾವನ್ನಪ್ಪಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದೇವೆ" ಎಂದು ಮಾಹಿತಿ ನೀಡಿದರು.