ಒಡಿಶಾ :ಬಡತನದಲ್ಲಿ ಹುಟ್ಟಿದ ಪ್ರತಿಭೆ: ಪಟ್ಟಚಿತ್ರ ಕಲೆ ಮೂಲಕ ವಾರ್ಷಿಕ 6 ಲಕ್ಷ ರೂ. ಆದಾಯ ಗಳಿಸುತ್ತಿರುವ ಯುವತಿ..!!

ಒಡಿಶಾ :ಬಡತನದಲ್ಲಿ ಹುಟ್ಟಿದ ಪ್ರತಿಭೆ: ಪಟ್ಟಚಿತ್ರ ಕಲೆ ಮೂಲಕ ವಾರ್ಷಿಕ 6 ಲಕ್ಷ ರೂ. ಆದಾಯ ಗಳಿಸುತ್ತಿರುವ ಯುವತಿ..!!

Beating Poverty With Pattachitra, Odisha's Pankajini Mohapatra Paints Her Way To Financial Independence

ಭುವನೇಶ್ವರ: ಒಡಿಶಾ ಭಾರತ ಕಂಡಂತಹ ವಿಶಿಷ್ಟ ಹಾಗೂ ವಿಭಿನ್ನ ಕಲೆಗಳ ತವರೂರು. ಪುರಾತನ ಸಂಸ್ಕೃತಿಯ ಕಲೆಗಳ ತಾಣವೂ ಹೌದು. 'ಪಟ್ಟಚಿತ್ರ' ಇಲ್ಲಿನ ಸಾಂಪ್ರದಾಯಿಕ ಚಿತ್ರಕಲೆಗಳ ಗುಚ್ಛಗಳಲ್ಲಿ ಒಂದು. ಸಾಂಪ್ರದಾಯಿಕ ಮತ್ತು ಸಮಕಾಲೀನ ಚಿತ್ರಕಲೆ ಮೈಗೂಡಿಸಿಕೊಂಡು ಹೋಗುತ್ತಿರುವ ಖೋರ್ಡಾ ಜಿಲ್ಲೆಯ ಆನಂದಪುರ ಗ್ರಾಮದ ಪಂಕಜಿನಿ ಮೊಹಾಪಾತ್ರ ಕೂಡ ಒಬ್ಬರು.

ಬಡ ಕುಟುಂಬದಲ್ಲಿ ಹುಟ್ಟಿಬೆಳೆದ ಪಂಕಜಿನಿ, ಹಲವು ಏಳು - ಬೀಳುಗಳ ನಡುವೆ 'ಪಟ್ಟಚಿತ್ರ' ಕಲೆಯನ್ನು ಮುಂದಿನ ತಲೆಮಾರಿಗೆ ಉಳಿಸಿ ಬೆಳೆಸಿಕೊಂಡು ಹೋಗುವ ಮೂಲಕ ಇತರರಿಗೂ ಮಾದರಿಯಾದವರು. ಕಲೆಯೊಂದಿಗೆ ಸ್ವಾವಲಂಬಿ ಬದುಕು ಕಟ್ಟಿಕೊಂಡು ಮಹಿಳಾ ಶಕ್ತಿಯ ಹೊಸ ಮುಖವಾಗಿ ಹೊರಹೊಮ್ಮಿದ್ದು, ಸದ್ಯ ತಾವು ಕಟ್ಟಿಕೊಂಡ ಈ ಬದುಕಿನ ಪಯಣದ ಬಗ್ಗೆ ಇಲ್ಲಿ ಮಾತನಾಡಿದ್ದಾರೆ.

ಪಂಕಜಿನಿ, ಬಡ ಕಲಾವಿದೆ ಆದರೂ ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂದು ಛಲಕ್ಕೆ ಬಿದ್ದವರು. ಪುಟ್ಟ ಗಿರಣಿಯನ್ನು ನಡೆಸುತ್ತಿದ್ದ ತನ್ನ ತಂದೆ ಆರ್ತತ್ರಕ್ ಮೊಹಾಪಾತ್ರ ಪಡುತ್ತಿದ್ದ ಕಷ್ಟಗಳನ್ನು ಕಣ್ಣಾರೆ ಕಂಡವಳು. ಕುಟುಂಬ ನಿರ್ವಹಣೆಗಾಗಿ ಪ್ರತಿ ರೂಪಾಯಿ ಖರ್ಚು ಮಾಡುವುದನ್ನು ನೋಡುತ್ತಾ ಬೆಳೆದವಳು. ಗೃಹಿಣಿಯಾಗಿದ್ದ ಅವಳ ತಾಯಿ ಕಷ್ಟಗಳ ನಡುವೆ ಮನೆಯನ್ನು ಮುನ್ನಡೆಸುತ್ತಿದ್ದಳು. ಸೀಮಿತ ಆದಾಯ ಅವರದ್ದಾಗಿತ್ತು. ನಾಲ್ಕು ಹೆಣ್ಣುಮಕ್ಕಳನ್ನು ಬೆಳೆಸಲು ಇನ್ನಿಲ್ಲದ ಕಷ್ಟಗಳನ್ನು ಎದುರಿಸುತ್ತಿದ್ದ ಕುಟುಂಬಕ್ಕೆ, ಮಕ್ಕಳಿಗೆ ಉನ್ನತ ಶಿಕ್ಷಣವನ್ನು ನೀಡುವುದು ದೂರದ ಮಾತಾಗಿತ್ತು. ಕುಟುಂಬದ ಪರಿಸ್ಥಿತಿಯನ್ನು ತನ್ನ ಕಣ್ಣಾರೆ ಕಂಡ ಪಂಕಜಿನಿ, ಕಠಿಣ ಪರಿಶ್ರಮ ಮತ್ತು ದೃಢಸಂಕಲ್ಪದ ಮೂಲಕ ಇಂದು ಅವರು ಇತರರಿಗೆ ಮಾದರಿಯಾಗಿದ್ದಾರೆ. 'ಪಟ್ಟಚಿತ್ರ' ಕಲೆ ಮೂಲಕವೇ ಸ್ವಾವಲಂಬಿ ಬದುಕು ಕಟ್ಟಿಕೊಂಡಿರುವ ಪಂಕಜಿನಿ, ಸದ್ಯ ರಾಜ್ಯ ಮತ್ತು ರಾಜ್ಯದ ಹೊರಗೆ ಒಡಿಶಾ ಸರ್ಕಾರವನ್ನು ಪ್ರತಿನಿಧಿಸುವ ಮೂಲಕ ಮೆಚ್ಚುಗೆ ಪಡೆದಿದ್ದಾರೆ. ಇದಕ್ಕೆ ಕಾರಣ ಕಠಿಣ ಪರಿಶ್ರಮ ಮತ್ತು ನಿರಂತರ ಪ್ರಯತ್ನ ಎಂದರೆ ತಪ್ಪಾಗಲಾರದು.

ತಮ್ಮ ಸಾಧನೆ ಬಗ್ಗೆ ಪಂಕಜಿನಿ ಮೊಹಾಪಾತ್ರ ಹೇಳಿಕೊಂಡಿದ್ದು ಹೀಗೆ: ನಾವು ನಾಲ್ವರು ಸಹೋದರಿಯರು. ನಮಗೆ ಸಹೋದರ ಇಲ್ಲದ ಕಾರಣ, ನನ್ನ ತಂದೆಯ ಹೆಗಲಿಗೆ ಹೆಗಲು ಕೊಟ್ಟು ನಿಲ್ಲಬೇಕೆಂದುಕೊಂಡಿದ್ದೆ. ನಮ್ಮ ಮನೆಯ ಆರ್ಥಿಕ ಪರಿಸ್ಥಿತಿ ಅಷ್ಟು ಚೆನ್ನಾಗಿರಲಿಲ್ಲ. ಹಾಗಾಗಿ ಕುಟುಂಬದ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವ ಏನಾದರೂ ಮಾಡಬೇಕೆಂದುಕೊಂಡಿದ್ದೆ. ಆರಂಭದಿಂದಲೂ ನಾವು ಸಾಕಷ್ಟು ಕಷ್ಟಪಡಬೇಕಾಯಿತು. ನಮ್ಮ ನಮ್ಮ ಖರ್ಚುಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕಿತ್ತು. ಮನೆಯಲ್ಲಿ ನಮ್ಮ ತಂದೆ ಒಬ್ಬರೇ ಹಣ ಗಳಿಸುವ ವ್ಯಕ್ತಿಯಾಗಿದ್ದರು. ಹಾಗಾಗಿ ನಾನು ಅವರ ಬೆಂಬಲಕ್ಕೆ ನಿಲ್ಲಲು ಬಯಸಿದ್ದೆ. ತಂದೆ - ತಾಯಿ ಪಡುತ್ತಿದ್ದ ಕಷ್ಟಗಳನ್ನು ಕಂಡು ಏನಾದರೂ ಮಾಡಬೇಕು ಎಂಬ ಹಠ ಹುಟ್ಟಿಕೊಂಡಿತು. ತಕ್ಷಣ ನಾನು ವಿವಿಧ ದೇವಾಲಯಗಳು ಮತ್ತು ಪ್ರೇಕ್ಷಣೀಯ ಸ್ಥಳಗಳಿಗೆ ಹೋಗಿ ಅಲ್ಲಿನ ವರ್ಣಚಿತ್ರಗಳನ್ನು ಅಧ್ಯಯನ ಮಾಡಿದೆ. ಅಲ್ಲಿಂದ ನಾನು ಚಿತ್ರಕಲೆಯ ಪ್ರಯಾಣವನ್ನು ಕೈಗೊಳ್ಳಬೇಕಾಯಿತು ಎಂದು 35 ವರ್ಷದ ಪಟ್ಟಚಿತ್ರ ಕಲಾವಿದೆ ಮತ್ತು ಉದ್ಯಮಿ ಪಂಕಜಿನಿ ಮೊಹಾಪಾತ್ರ ತನ್ನ 'ಪಟ್ಟಚಿತ್ರ' ಕಲೆಯ ಕುರಿತು ಇಲ್ಲಿ ಹೇಳಿಕೊಂಡಿದ್ದಾರೆ.

ನಾಲ್ಕು ಸಹೋದರಿಯರಲ್ಲಿ ನಾನು ಕಿರಿಯವಳು. 8ನೇ ತರಗತಿಯಲ್ಲಿದ್ದಾಗಲೇ ನನಗೆ ಚಿತ್ರಕಲೆಯಲ್ಲಿ ಆಸಕ್ತಿ ಹುಟ್ಟಿಕೊಂಡಿತ್ತು. 10ನೇ ತರಗತಿ ಪೂರ್ಣಗೊಳಿಸಲು ಸಾಧ್ಯವಾದರೂ, ಕಲೆಯ ಮೇಲಿನ ನನ್ನ ಪ್ರೀತಿ ಯಾವತ್ತೂ ಕಡಿಮೆಯಾಗಲಿಲ್ಲ. ಆದರೆ, ಕುಟುಂಬದ ಆರ್ಥಿಕ ಪರಿಸ್ಥಿತಿ ಕಳಪೆಯಾಗಿದ್ದ ಕಾರಣ, ತನ್ನ ಅಧ್ಯಯನವನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ. ಗಂಟೆಗಟ್ಟಲೆ ದೇವಾಲಯಗಳಲ್ಲಿ ಭಿತ್ತಿಚಿತ್ರಗಳನ್ನು ವೀಕ್ಷಿಸುತ್ತಿದ್ದೆ. ಪ್ರವಾಸಿ ತಾಣಗಳಲ್ಲಿ ವಿನ್ಯಾಸಗಳನ್ನು ಅಧ್ಯಯನ ಮಾಡುತ್ತಿದ್ದೆ. ಅವುಗಳ ಬಗ್ಗೆ ಗೊತ್ತಿದ್ದವರಲ್ಲಿ ಕೇಳಿ ತಿಳಿದುಕೊಳ್ಳುತ್ತಿದ್ದೆ. ಭುವನೇಶ್ವರಕ್ಕೆ ಬಂದು 2009ರಲ್ಲಿ ರಾಜ್ಯ ಕರಕುಶಲ ಅಭಿವೃದ್ಧಿ ಸಂಸ್ಥೆ (SIDAC)ಯಿಂದ ತರಬೇತಿ ಪಡೆದೆ. ಇಲ್ಲಿ ಒಡಿಶಾ ವರ್ಣಚಿತ್ರಗಳ ಭಾಷೆಯನ್ನು ಅರ್ಥಮಾಡಿಕೊಂಡೆ. 2011ರಲ್ಲಿ ತರಬೇತಿ ಪೂರ್ಣಗೊಳಿಸಿದ ನಂತರ, ಭುವನೇಶ್ವರ ಮತ್ತು ಪುರಿಯಲ್ಲಿ ಕೆಲಸಕ್ಕೆ ಸೇರಿದೆ. ಬದುಕಿಗಾಗಿ ಅರೆಕಾಲಿಕ ಕೆಲಸವನ್ನು ಮಾಡಬೇಕಾಯಿತು. ಮಡಿಕೆಗಳು, ಗಾಜಿನ ಬಾಟಲಿಗಳು, ಹೂವಿನ ಕುಂಡಲ ಸೇರಿದಂತೆ ಇತ್ಯಾದಿಗಳ ಮೇಲೆ ಕೋನ್ ಪೇಂಟಿಂಗ್ ಮತ್ತು ಹೊರಾಂಗಣ ಅಲಂಕಾರಕ್ಕಾಗಿ ಬಳಸುವ ಪ್ಲೈವುಡ್‌ನಲ್ಲಿ ಮೆಹಂದಿ ವಿನ್ಯಾಸಗಳಲ್ಲಿ ಕೆಲಸ ನಿರ್ವಹಿಸಿ ತನ್ನ ಅನುಭವವನ್ನು ಹೆಚ್ಚಿಸಿಕೊಂಡೆ. ಈ ಎರಡು ವರ್ಷಗಳಲ್ಲಿ, 'ಪಟ್ಟಚಿತ್ರ'ದಂತಹ ಸಾಂಪ್ರದಾಯಿಕ ಚಿತ್ರಕಲೆ ಶೈಲಿಗಳಲ್ಲಿ ಪರಿಣತಿ ಪಡೆದೆ. ಆಗ ನನಗೆ 10-15 ಸಾವಿರ ಸಂಬಳ ಬರುತ್ತಿತ್ತು. ಇದುವೇ ನನ್ನ ಜೀವನದ ತಿರುವಿಗೆ ಕಾರಣವಾಯಿತು. ಇದೇ ವೃತ್ತಿಯನ್ನು ಖಾಯಂ ಅಂದುಕೊಂಡು ಇದರಲ್ಲಿ ವೃತ್ತಿಜೀವನ ಶುರು ಮಾಡಲು ಯೋಚಿಸಿದೆ" ಎಂದು ಪಂಕಜಿನಿ ತಮ್ಮ ಕಲಾ ಸೇವೆ ಬಗ್ಗೆಯೂ ಇಲ್ಲಿ ಹೇಳಿಕೊಂಡಿದ್ದಾರೆ.

ಸೂಕ್ಷ್ಮ ಕರಕುಶಲತೆ ಸೀರೆಯ ಸೌಂದರ್ಯವನ್ನು ಹೆಚ್ಚಿಸುತ್ತದೆ: "ಅಂದುಕೊಂಡಂತೆ ಉದ್ಯಮಶೀಲತಾ ಪ್ರಯಾಣದ ಆರಂಭಕ್ಕೆ ನಾಂದಿ ಹಾಡಿದೆ. 'ಕಾಲಿಯಾ ದಲಾನಾ' ಮತ್ತು 'ಬೋಯಿಟಾ ಬಂದಾನ' ದಿಂದ 'ರಾಜ ಪರ್ಬ' ಮತ್ತು 'ಮಥುರಾ ಬಿಜಯ್' ವರೆಗೆ, ಒಡಿಶಾದ ಜಾನಪದ, ಹಬ್ಬಗಳು ಮತ್ತು ಸೀರೆಗಳ ಮೇಲಿನ ಪರಂಪರೆಯನ್ನು ಒಳಗೊಂಡಂತೆ ಎಲ್ಲವನ್ನೂ ಮಾಡಲು ಪ್ರಾರಂಭಿಸಿದೆ. ಸಂಪ್ರದಾಯ ಮತ್ತು ಸಾಂಸ್ಕೃತಿಕ ಮೌಲ್ಯಗಳಿಂದ ಸಮೃದ್ಧವಾಗಿರುವ ನಮ್ಮ ದೇಶದ ಕಥೆಯನ್ನು ವರ್ಣಚಿತ್ರಗಳಲ್ಲಿ ಅದ್ಭುತವಾಗಿ ಚಿತ್ರಿಸಲು ಶುರು ಮಾಡಿದೆ. ಅದೇ ರೀತಿ ಸೂಕ್ಷ್ಮ ಕರಕುಶಲತೆಯು ಹೆಣ್ಣಮಕ್ಕಳು ಉಡುವ ಸೀರೆಯ ಸೌಂದರ್ಯವನ್ನು ಹೆಚ್ಚಿಸುತ್ತದೆ ಎಂದು ತಿಳಿದು ಅವುಗಳಿಗೆ ಪಟ್ಟಚಿತ್ರದ ಟಚ್​ ನೀಡಿದೆ. ಪಟ್ಟಚಿತ್ರ ಸೀರೆಗಳು ಕೇವಲ ಉಡುಪುಗಳಲ್ಲ, ಅವುಗಳು ದೇಶದ ಕಥೆಯನ್ನು ತಿಳಿಸುವ ಉಡುಪುಗಳಾಗಿ ಹೊರಹೊಮ್ಮಿದವು. ಜನರು ತನ್ನ ಪ್ರತಿಭೆಯನ್ನು ಗುರಿತಿಸಲು ಶುರು ಮಾಡಿದರು. ಎಲ್ಲಿಂದಲೋ ನನ್ನನ್ನು ಹುಡುಕಿಕೊಂಡು ಬರತೊಡಗಿದರು. ತನ್ನ ಕುಟುಂಬ ಆರ್ಥಿಕವಾಗಿ ಗಟ್ಟಿ ಆಯಿತು. ಸಮಾಜದಲ್ಲಿ ತನ್ನ ಹೆಸರು ಕೇಳಿ ಬರತೊಡಗಿತು. ಸದ್ಯ 'ಪಟ್ಟಚಿತ್ರ' ಕಲೆಯೇ ನಮ್ಮನ್ನು ಕರೆದೊಯ್ಯುತ್ತಿದೆ. ಬೇಕಾದ ಥೀಮ್ ಮತ್ತು ಕರಕುಶಲತೆಯನ್ನು ಅವಲಂಬಿಸಿ ಪ್ರತಿ ಸೀರೆ ಪೂರ್ಣಗೊಳ್ಳಲು 15 ದಿನಗಳವರೆಗೆ ತೆಗೆದುಕೊಳ್ಳುತ್ತದೆ. ಆದರೆ, ಎಲ್ಲ ಸೀರೆಗಳು ಅಷ್ಟು ಸಮಯ ತೆಗೆದುಕೊಳ್ಳುವುದಿಲ್ಲ. ಕಡಿಮೆ ಥೀಮ್ ಮತ್ತು ವಿನ್ಯಾಸವನ್ನು ಹೊಂದಿರುವ ಕೆಲವು ಸೀರೆಗನ್ನು ಏಳರಿಂದ ಎಂಟು ದಿನಗಳಲ್ಲಿ ಪೂರ್ಣಗೊಳಿಸಬಹುದು. ಇಂದು ಕುಶಲಕರ್ಮಿ ಸೀರೆಗಳಿಗೆ ಬಹಳ ಬೇಡಿಕೆಯಿದೆ. ನಮ್ಮ ಕೈಯಿಂದ ತಯಾರಾದ 'ಪಟ್ಟಚಿತ್ರ' ಸೀರೆಗಳು ಒಡಿಶಾದಲ್ಲಿ 7,000 - 8,000 ರೂ.ಗಳಿಗೆ ಮಾರಾಟವಾದರೆ, ರಾಜ್ಯದ ಹೊರಗೆ 15,000 - 25,000 ರೂ.ಗಳಿಗೆ ಮಾರಾಟ ಆಗುತ್ತಿವೆ" ಎಂದು ತಮ್ಮ ಆದಾಯ ಬಗ್ಗೆಯೂ ಪಂಕಜಿನಿ ಹೇಳಿಕೊಂಡಿದ್ದಾರೆ.

ತಾಯಿಯ ಆಸೆ: "ನನ್ನ ತಾಯಿ ತನ್ನ ಮಗಳು ಏನೇ ಮಾಡಿದರೂ ಹಳ್ಳಿಯಲ್ಲಿಯೇ ಇರಬೇಕು ಎಂದು ಬಯಸಿದ್ದರು. ಹಾಗಾಗಿ ತನ್ನ ತಾಯಿಯ ಆಸೆಯನ್ನು ಪೂರೈಸಲು 3 ವರ್ಷಗಳ ಹಿಂದೆಯಷ್ಟೇ ಹಳ್ಳಿಗೆ ಮರಳಿದೆ. ನನ್ನೊಂದಿಗೆ ಹಳ್ಳಿಯ ಮಹಿಳೆಯರನ್ನು ಕರೆದೊಯ್ದಿದ್ದೆ. ಅವರಿಗೂ ತರಬೇತಿ ನೀಡಲಾಗಿದೆ. ಅವರಲ್ಲಿ ಹಲವರು ತಮ್ಮದೇ ಆದ ಕೆಲಸವನ್ನು ಮಾಡುವ ಮೂಲಕ ಸ್ವಾವಲಂಬಿಗಳಾಗಿದ್ದಾರೆ. ಕೆಲವು ವಿದ್ಯಾರ್ಥಿಗಳು ಕೂಡ ಸ್ವಾವಲಂಬಿಗಳಾಗಿದ್ದು, ತಮ್ಮ ಮನೆಗಳಿಂದ ಕೆಲಸ ಮಾಡುತ್ತಿದ್ದಾರೆ. ಬಾಲಿ ಯಾತ್ರಾ, ತೋಶಾಲಿ ಮೇಳ, ದೆಹಲಿ ವ್ಯಾಪಾರ ಮೇಳ, ಪ್ರವಾಸಿ ಭಾರತೀಯ ಮೇಳ, ಪಲ್ಲಿಶ್ರೀ ಮೇಳ ಮತ್ತು ಸುಭದ್ರಾ ಶಕ್ತಿ ಮೇಳಗಳಲ್ಲಿ ಸ್ಟಾಲ್‌ಗಳನ್ನು ಹಾಕುತ್ತೇವೆ. ಇತ್ತೀಚೆಗೆ ಪುರಿಯಲ್ಲಿ ಆಯೋಜಿಸಲಾದ ಸುಭದ್ರಾ ಶಕ್ತಿ ಮೇಳದಲ್ಲಿ, ಕೇವಲ ನಾಲ್ಕು ದಿನಗಳಲ್ಲಿ 40,000 ರೂ.ಗಳನ್ನು ಆದಾಯ ಬಂದಿತು. ನನ್ನ ವಾರ್ಷಿಕ ಆದಾಯ ಈಗ ಸುಮಾರು 6 ಲಕ್ಷ ರೂ.ಗಳಷ್ಟಿದೆ. ಹೊಸ ಮನೆ ನಿರ್ಮಾಣ ಕಾರ್ಯ ನಡೆಯುತ್ತಿದೆ" ಎಂದು ಪಂಕಜಿನಿ ಹೇಳಿದ್ದಾರೆ.

"ಪಂಕಜಿನಿ ಕಠಿಣ ಪರಿಶ್ರಮದಿಂದ ಈ ಮಟ್ಟಕ್ಕೆ ಬೆಳೆದಿದ್ದಾಳೆ. ಆಕೆ ಬಾಲ್ಯದಿಂದಲೂ ಕಲೆಯಲ್ಲಿ ಆಸಕ್ತಿ ಹೊಂದಿದ್ದಳು. ಅವಳು ಈ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಬೇಕೆಂದು ನಾವು ಬಯಸಿದ್ದೆವು. ಅವಳು ಭುವನೇಶ್ವರದ ಗಂಡಮುಂಡದಲ್ಲಿ ತರಬೇತಿ ಕೂಡ ಪಡೆದಳು. ನಮ್ಮ ತಾಯಿ ಕೂಡ ಶ್ರಮ ಜೀವಿ. ಪಂಕಜಿನಿಗಾಗಿ ತುಂಬಾ ಶ್ರಮಿಸಿದ್ದಾಳೆ. ತಂದೆಯ ಅಲ್ಪ ಆದಾಯದಿಂದಾಗಿ ಅವಳು ಕಷ್ಟಪಟ್ಟು ಬೆಳೆದಿದ್ದಾಳೆ. ಅವಳು ಇಂದು ಕಠಿಣ ಪರಿಶ್ರಮದಿಂದ ಇಲ್ಲಿಯವರೆಗೆ ಬಂದಿದ್ದಾಳೆ" ಎಂದು ಪಂಕಜಿನಿಯ ಅಕ್ಕ ಸೌದಾಮಿನಿ ಸಾಹು ಹರ್ಷ ವ್ಯಕ್ತಪಡಿಸಿದ್ದಾರೆ. "ಮೊದಲು ನಾನು ಮನೆಯಲ್ಲೇ ಇರುತ್ತಿದ್ದೆ. ಆದರೆ, ತರಬೇತಿ ಪಡೆದ ನಂತರ, ನನಗೆ ಸರ್ಕಾರಿ ಸೌಲಭ್ಯಗಳು ದೊರೆಯುದ್ದು, ಈಗ ನಾನೇ ಸಂಪಾದಿಸುತ್ತಿದ್ದೇನೆ ಎಂದು ಪಂಕಜಿನಿ ಸಹಚರರೊಬ್ಬರು ಹೇಳುತ್ತಾರೆ.

Ads on article

Advertise in articles 1

advertising articles 2

Advertise under the article