ಗದಗ :ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿಧಿ ಪತ್ತೆ ; ಸುದ್ದಿ ಕೇಳಿ ಮುಗಿಬಿದ್ದ ಗದಗದ ಲಕ್ಕುಂಡಿ ಗ್ರಾಮಸ್ಥರು..!!

ಗದಗ :ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿಧಿ ಪತ್ತೆ ; ಸುದ್ದಿ ಕೇಳಿ ಮುಗಿಬಿದ್ದ ಗದಗದ ಲಕ್ಕುಂಡಿ ಗ್ರಾಮಸ್ಥರು..!!

ಗದಗ : ರಾಜ್ಯದ ಪ್ರಸಿದ್ಧ ಐತಿಹಾಸಿಕ ಸ್ಥಳವಾದ ಲಕ್ಕುಂಡಿ ಗ್ರಾಮದಲ್ಲಿ ಇಂದು ಸಂಚಲನ ಮೂಡಿಸುವ ಘಟನೆ ಜರುಗಿದೆ. ಮನೆಯ ಹೊಸ ಅಡಿಪಾಯ ಅಗೆಯುವ ಸಂದರ್ಭದಲ್ಲಿ ಮಣ್ಣಿನ ಚೆಂಬುಯೊಂದರಲ್ಲಿ ಅಂದಾಜು ಒಂದು ಕಿಲೋಗ್ರಾಂ ತೂಕದ ಪುರಾತನ ಚಿನ್ನಾಭರಣಗಳು ಪತ್ತೆಯಾಗಿವೆ.

ಈ ಘಟನೆ ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ವಾರ್ಡ್ ಸಂಖ್ಯೆ 4ರ ನಿವಾಸಿ ಗಂಗವ್ವ ಬಸವರಾಜ ರಿತ್ತಿ ಅವರ ಮನೆ ಜಾಗದಲ್ಲಿ ನಡೆದಿದೆ. ಹಳೆಯ ಮನೆಯನ್ನು ಕೆಡವಿ ಹೊಸ ಮನೆ ನಿರ್ಮಾಣಕ್ಕಾಗಿ ಕಾರ್ಮಿಕರು ಭೂಮಿ ಅಗೆಯುತ್ತಿದ್ದಾಗ ಈ ತಾಮ್ರದ ಚೆಂಬು ಸಿಕ್ಕಿದೆ. ಚೆಂಬಿನೊಳಗೆ ಚಿನ್ನದ ಬಳೆಗಳು, ಚೈನ್‌ಗಳು, ಉಂಗುರಗಳು ಮತ್ತು ಇತರ ಆಭರಣಗಳು ಪತ್ತೆಯಾಗಿವೆ ಎಂದು ಪ್ರಾಥಮಿಕ ಮಾಹಿತಿ ತಿಳಿದುಬಂದಿದೆ.

ನಿಧಿ ಪತ್ತೆಯ ಸುದ್ದಿ ತಿಳಿದ ತಕ್ಷಣ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಜನರು ಕುತೂಹಲದಿಂದ ಸ್ಥಳಕ್ಕೆ ದೌಡಾಯಿಸುತ್ತಿದ್ದಾರೆ. ಇಡೀ ಪ್ರದೇಶವೇ ಜನಸಂದಣಿಯಿಂದ ತುಂಬಿಹೋಗಿದೆ.

ನಿಧಿ ಸಿಕ್ಕ ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಅಪರ ಜಿಲ್ಲಾಧಿಕಾರಿ ದುರ್ಗೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಸಹಾಯಕ ಆಯುಕ್ತ ಗಂಗಪ್ಪ, ತಹಶೀಲ್ದಾರ್ ಶ್ರೀನಿವಾಸ ಕುಲಕರ್ಣಿ, ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರು, ಪುರಾತತ್ವ ಇಲಾಖೆಯ ಅಧಿಕಾರಿಗಳು ಮತ್ತು ಸಂಬಂಧಿತ ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪುರಾತತ್ವ ಇಲಾಖೆಯ ತಜ್ಞರು ಈ ಚಿನ್ನಾಭರಣಗಳನ್ನು ಪರಿಶೀಲಿಸುತ್ತಿದ್ದು, ಇವು ಯಾವ ಕಾಲಘಟ್ಟಕ್ಕೆ ಸೇರಿವೆ, ಯಾವ ರಾಜವಂಶದ್ದು ಮತ್ತು ಯಾವ ಉದ್ದೇಶಕ್ಕಾಗಿ ನೆಲದಡಿಯಲ್ಲಿ ಮರೆಮಾಚಲಾಗಿತ್ತು ಎಂಬುದನ್ನು ತನಿಖೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಕೆಲವು ವರದಿಗಳ ಪ್ರಕಾರ ಇವು ಲಕ್ಷ್ಮೀ ದೇವಸ್ಥಾನಕ್ಕೆ ಸಂಬಂಧಿಸಿದ್ದಿರಬಹುದು ಎಂಬ ಶಂಕೆಯೂ ವ್ಯಕ್ತವಾಗಿದ್ದು, ಎಲ್ಲ ವೈಜ್ಞಾನಿಕ ತನಿಖೆ ಮತ್ತು ಪರೀಕ್ಷೆಗಳ ನಂತರವಷ್ಟೇ ಖಚಿತಪಡಿಸಲಾಗುವುದು ಎಂದು ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಿದ್ದು ಪಾಟೀಲ್​ ಅವರು ತಿಳಿಸಿದ್ದಾರೆ.

ಲಕ್ಕುಂಡಿಯು ಕಲ್ಯಾಣ ಚಾಲುಕ್ಯರ ಕಾಲದ ಅದ್ಭುತ ದೇವಾಲಯಗಳು, ಮೆಟ್ಟಿಲು ಬಾವಿಗಳು, ಶಾಸನಗಳು ಮತ್ತು ಇತಿಹಾಸದ ಗುಪ್ತ ರತ್ನಗಳಿಂದ ಕೂಡಿದ ಸ್ಥಳವಾಗಿದ್ದು, ಇತ್ತೀಚೆಗೆ ಪ್ರಾಚ್ಯ ವಸ್ತುಗಳ ಸಂಗ್ರಹಣೆ, ಉತ್ಖನನ ಕಾರ್ಯಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಚಿನ್ನದ ನಿಧಿ ಸಿಗುವುದು ಇನ್ನಷ್ಟು ಆಸಕ್ತಿ ಕೆರಳಿಸಿದೆ. ಇದು ಚಾಲುಕ್ಯರ ಕಾಲದಲ್ಲಿ ಲಕ್ಕುಂಡಿಯಲ್ಲಿ ಚಿನ್ನದ ನಾಣ್ಯಗಳ ಮುದ್ರಣಗೊಂಡಿದ್ದ ಸ್ಥಳವಾಗಿದ್ದನ್ನು ನೆನಪಿಸುತ್ತದೆ. ಈ ಘಟನೆಯಿಂದ ಗ್ರಾಮಸ್ಥರಲ್ಲಿ ಭಾರಿ ಉತ್ಸಾಹ ಮತ್ತು ಕುತೂಹಲ ಮೂಡಿದ್ದು, ಪುರಾತತ್ವ ಇಲಾಖೆಯ ತನಿಖೆಯ ಫಲಿತಾಂಶಕ್ಕೆ ಎಲ್ಲರೂ ಕಾಯುತ್ತಿದ್ದಾರೆ. ಇದು ಲಕ್ಕುಂಡಿಯ ಐತಿಹಾಸಿಕ ಮಹತ್ವವನ್ನು ಇನ್ನಷ್ಟು ಜಾಗೃತಗೊಳಿಸುವ ಸಂಗತಿಯಾಗಿದೆ.

Ads on article

Advertise in articles 1

advertising articles 2

Advertise under the article