ಪುತ್ತೂರು: ನಿವೃತ್ತ ಪ್ರಾಂಶುಪಾಲರ ಮನೆಗೆ ನುಗ್ಗಿ ಕಳವಿಗೆ ಯತ್ನ ; ಅರ್ಚಕ ದಂಪತಿ ಬಂಧನ, ಹೆಲ್ಮೆಟ್ ಹಾಕಿ ಬೆದರಿಸಿ ಚಿನ್ನ ಕಿತ್ತುಕೊಳ್ಳಲು ಹೋಗಿ ಜೈಲುಪಾಲು !!

ಪುತ್ತೂರು: ನಿವೃತ್ತ ಪ್ರಾಂಶುಪಾಲರ ಮನೆಗೆ ನುಗ್ಗಿ ಕಳವಿಗೆ ಯತ್ನ ; ಅರ್ಚಕ ದಂಪತಿ ಬಂಧನ, ಹೆಲ್ಮೆಟ್ ಹಾಕಿ ಬೆದರಿಸಿ ಚಿನ್ನ ಕಿತ್ತುಕೊಳ್ಳಲು ಹೋಗಿ ಜೈಲುಪಾಲು !!

ಪುತ್ತೂರು: ಪುತ್ತೂರು ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಎ.ವಿ. ನಾರಾಯಣ ಅವರ ಪುತ್ತೂರಿನ ಮನೆಯಲ್ಲಿ ಡಿ.17ರಂದು ಮಧ್ಯರಾತ್ರಿ ಕಳವು ಯತ್ನ ನಡೆದಿದ್ದು ಮನೆಯವರನ್ನು ಬೆದರಿಸಿ ಬೆಲೆಬಾಳುವ ಸೊತ್ತುಗಳನ್ನು ದೋಚಲು ಯತ್ನಿಸಿದ ಪ್ರಕರಣ ಸಂಬಂಧಿಸಿ ಪುರೋಹಿತ ಕೆಲಸ ಮಾಡುವ ಅರ್ಚಕ ಮತ್ತು ಆತನ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ. 

ಪುತ್ತೂರು ಮುಡೂರು ನಿವಾಸಿ ಪ್ರಸ್ತುತ ಪಂಜದಲ್ಲಿ ಬಾಡಿಗೆ ಮನೆಯಲ್ಲಿರುವ ಕಾರ್ತಿಕ್ ರಾವ್ (31) ಮತ್ತು ಆತನ ಪತ್ನಿ ಕೆ.ಎಸ್ ಸ್ವಾತಿ ರಾವ್ (25) ಎಂಬವರನ್ನು ಪುತ್ತೂರು ನಗರ ಪೊಲೀಸರು ಬಂಧಿಸಿದ್ದಾರೆ. 

ಡಿ.17ರಂದು ಮನೆಗೆ ನುಗ್ಗಿದ ಆರೋಪಿಗಳು ಎ.ವಿ ನಾರಾಯಣ ಮತ್ತು ಅವರ ಪತ್ನಿಯನ್ನು ಬೆದರಿಸಿ ಚಿನ್ನಾಭರಣ ಕಿತ್ತುಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ, ತಳ್ಳಾಟದಲ್ಲಿ ನಾರಾಯಣ ಅವರ ಪತ್ನಿಗೆ ಗಾಯವಾಗಿದ್ದು ಹೆದರಿಕೆಯಿಂದ ಜೋರಾಗಿ ಕಿರುಚಿದ್ದಾರೆ. ಇದರಿಂದ ಹೆದರಿದ ಆರೋಪಿಗಳು ಹಿಂಬಾಗಿಲಿನ ಮೂಲಕ ಓಡಿ ಪರಾರಿಯಾಗಿದ್ದಾರೆ. ಮನೆಯಿಂದ ಯಾವುದೇ ಕಳ್ಳತನ ಆಗಿರುವುದಿಲ್ಲ. ಆದರೆ ಯಾರೋ ಇಬ್ಬರು ಸೇರಿ ಕಳವಿಗೆ ಯತ್ನಿಸಿದ್ದಾರೆ ಎಂದು ನಾರಾಯಣ ಅವರು ನೀಡಿದ ದೂರಿನಂತೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ‌

ತನಿಖೆ ನಡೆಸಿದ ಪೊಲೀಸರು ಆರೋಪಿ ದಂಪತಿಯನ್ನು ಮತ್ತು ಅವರು ಕೃತ್ಯಕ್ಕೆ ಬಳಸಿದ ಮೋಟಾರ್ ಸೈಕಲನ್ನು ವಶಕ್ಕೆ ಪಡೆದಿದ್ದಾರೆ. ‌ಆರೋಪಿ ಕಾರ್ತಿಕ್ ರಾವ್ ಸಹಾಯಕ ಅರ್ಚಕನಾಗಿ ಕೆಲಸ ಮಾಡಿಕೊಂಡಿದ್ದು ಎವಿ ನಾರಾಯಣ ಅವರ ಮನೆಯಲ್ಲಿ ವೃದ್ಧ ದಂಪತಿ ಮಾತ್ರ ಇರುವ ಬಗ್ಗೆ ಮಾಹಿತಿ ತಿಳಿದು ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ್ದಾರೆ. ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಹೆಲ್ಮೆಟ್ ಹಾಕಿ ಮನೆಯ ಒಳಗೆ ನುಗ್ಗಿದ್ದು ವೃದ್ಧ ದಂಪತಿ ಬೊಬ್ಬೆ ಹಾಕಿದ್ದರಿಂದ ಅರ್ಧದಲ್ಲಿ ಬಿಟ್ಟು ಪರಾರಿಯಾಗಿದ್ದರು.

Ads on article

Advertise in articles 1

advertising articles 2

Advertise under the article