ಬೆಂಗಳೂರು :ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ; ಭಯಗೊಂಡು ಕಮೋಡ್ ಗೆ ನೋಟಿನ ಕಂತೆ ಸುರಿದುಬಿಟ್ಟ ಅಧಿಕಾರಿ !!!!

ಬೆಂಗಳೂರು : ಲೋಕಾಯುಕ್ತ ಪೊಲೀಸರು ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ಅಕ್ರಮ ಆಸ್ತಿ ಮಾಡಿಟ್ಟಿರುವ ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಧಾರವಾಡದಲ್ಲಿ ಅಧಿಕಾರಿಯೊಬ್ಬರು ಲೋಕಾಯುಕ್ತ ದಾಳಿಯಿಂದ ಭಯಗೊಂಡು ಹಣವನ್ನು ಟಾಯ್ಲೆಟ್ ಕಮೋಡ್‌ಗೆ ಸುರಿದು ಫ್ಲಶ್ ಮಾಡಿದ್ದಾರೆ. ಧಾರವಾಡ, ಶಿವಮೊಗ್ಗ, ಮಂಡ್ಯ, ಚಿಕ್ಕಮಗಳೂರು, ಬೆಂಗಳೂರು ಸೇರಿ ವಿವಿಧ ಕಡೆಗಳಲ್ಲಿ ದಾಳಿ ನಡೆದಿದೆ.
ಬೆಳಗಾವಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಜಶೇಖರ್ ಅವರ ಧಾರವಾಡದ ನಿವಾಸದ ಮೇಲೆ ಲೋಕಾಯುಕ್ತ ದಾಳಿ ನಡೆದಿದ್ದು, ರಾಜಶೇಖರ್ಗೆ ಸೇರಿದ ಒಟ್ಟು ಮೂರು ಕಡೆ ದಾಳಿ ನಡೆಸಲಾಗಿದೆ. ರಾಣಿ ಚೆನ್ನಮ್ಮ ನಗರದಲ್ಲಿರುವ ರಾಜಶೇಖರ್ಗೆ ಸೇರಿದ ಖಾಸಗಿ ಕಚೇರಿ, ಯರಿಕೊಪ್ಪ ಗ್ರಾಮದ ಬಳಿಯ ಫಾರ್ಮ್ ಹೌಸ್ ಮೇಲೂ ದಾಳಿ ನಡೆಸಲಾಗಿದೆ.
ಲೋಕಾಯುಕ್ತ ಸಿಬ್ಬಂದಿ ಕಂಡು ಬೆದರಿದ ರಾಜಶೇಖರ್ ಸುಮಾರು 50 ಸಾವಿರ ರೂ. ಹಣವನ್ನು ಕಮೋಡ್‌ಗೆ ಸುರಿದು ಫ್ಲಶ್ ಮಾಡಿದ್ದಾರೆ. ಸುಮಾರು ಅರ್ಧ ಗಂಟೆ ಕಾಲ ಬಾಗಿಲು ತೆಗೆಯದೆ ಲೊಕಾಯುಕ್ತ ಪೊಲೀಸರನ್ನು ಮನೆ ಹೊರಗೆ ಕಾಯಿಸಿದ್ದಾರೆ.
ಆದಾಯಕ್ಕಿಂತ ಹೆಚ್ಚಿನ ಸಂಪತ್ತು ಗಳಿಕೆ ಆರೋಪ ಹಿನ್ನೆಲೆ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಎಕ್ಸಿಕ್ಯೂಟಿವ್ ಇಂಜಿನಿಯರ್ ರೂಪಾ ನಾಯ್ಕ ಅವರ ಮನೆ, ಕಚೇರಿ ಸೇರಿ ವಿವಿಧೆಡೆ ದಾಳಿಯಾಗಿದೆ. ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಬೆಂಗಳೂರಿನಲ್ಲಿ ಏಕ ಕಾಲಕ್ಕೆ ದಾಳಿ ನಡೆಸಲಾಗಿದ್ದು ಬಸವನಗುಡಿ ಮತ್ತು ಕೆಂಗೇರಿಯ ಮನೆ, ಶಿವಮೊಗ್ಗದ ಕಚೇರಿ, ಚಿಕ್ಕಮಗಳೂರು ಜಿಲ್ಲೆ ಸಖರಾಯಪಟ್ಟಣದ ನಿವಾಸದಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಮಂಡ್ಯ ಪಿಆರ್ಇಡಿ ಸೂಪರಿಡೆಂಟ್ ಬೈರೇಶ್ಗೂ ಲೋಕಾಯುಕ್ತ ಶಾಕ್ ಕೊಟ್ಟಿದ್ದು, ಏಕಕಾಲದಲ್ಲಿ ಮಂಡ್ಯದ ನಿವಾಸ, ಮದ್ದೂರಿನ ಅತ್ತೆ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಲಾಗಿದೆ. ಬೈರೇಶ್ ಮೇಲೆ ಸಾರ್ವಜನಿಕರಿಂದ ಹಲವು ದೂರುಗಳು ಬಂದಿದ್ದ ಹಿನ್ನೆಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.