ಬೆಂಗಳೂರು :ಮನೆ ಬಳಿ ಆಡ್ತಿದ್ದ ಬಾಲಕನನ್ನ ಫುಟ್ಬಾಲ್ ತರ ಒದ್ದ ಯುವಕ;ವೈರಲ್ ವಿಡಿಯೋ ನೋಡಿ...!!

ಬೆಂಗಳೂರು :ಮನೆಯ ಮುಂದೆ ತನ್ನ ಪಾಡಿಗೆ ತಾನು ಆಟವಾಡುತ್ತಿದ್ದ ಪುಟ್ಟ ಬಾಲಕನೊಬ್ಬನನ್ನು ಜಿಮ್ ಟ್ರೈನರ್ ಒಬ್ಬ ಫುಟ್ಬಾಲ್‌ನಂತೆ ಕಾಲಿನಿಂದ ಒದ್ದು ವಿಕೃತಿ ಮೆರೆದಿದ್ದಾನೆ. ಈ ಘಟನೆಯನ್ನು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ತೀವ್ರವಾಗಿ ಖಂಡಿಸಿದ್ದು, ಆರೋಪಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದೆ.
ತ್ಯಾಗರಾಜ ನಗರದ ತನ್ನ ಅಜ್ಜಿ ಮನೆಗೆ ಬಂದಿದ್ದ ನೀವ್ ಜೈನ್ ಎಂಬ ಬಾಲಕ, ಕಳೆದ ಡಿಸೆಂಬರ್ 14ರಂದು ರಸ್ತೆಯಲ್ಲಿ ಆಟವಾಡುತ್ತಿದ್ದನು. ಈ ವೇಳೆ ಅಲ್ಲಿಗೆ ಬಂದ ರಂಜನ್ ಎಂಬ ಜಿಮ್ ಟ್ರೈನರ್, ಯಾವುದೇ ಪ್ರಚೋದನೆ ಇಲ್ಲದಿದ್ದರೂ ಬಾಲಕನಿಗೆ ಬಲವಾಗಿ ಒದ್ದಿದ್ದಾನೆ.
ರಂಜನ್ ಒದ್ದ ರಭಸಕ್ಕೆ ಮಗು ಹಾರಿ ಹೋಗಿ ದೂರಕ್ಕೆ ಬಿದ್ದಿದೆ. ಪರಿಣಾಮ ಬಾಲಕನ ಮೈಕೈಗೆ ತೀವ್ರ ಗಾಯಗಳಾಗಿವೆ. ಆರಂಭದಲ್ಲಿ ಮಗು ಬಿದ್ದಿದ್ದಕ್ಕೆ ಕಾರಣ ತಿಳಿದಿರಲಿಲ್ಲ, ಆದರೆ ಪೋಷಕರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆರೋಪಿ ರಂಜನ್‌ನ ಅಸಲಿ ಮುಖವಾಡ ಬಯಲಾಗಿದೆ.
ಆರೋಪಿ ರಂಜನ್ ಇದೇ ಮೊದಲ ಬಾರಿಗೆ ಇಂತಹ ಕೃತ್ಯ ಎಸಗಿಲ್ಲ, ಈ ಮೊದಲು ಇಂತಹ ಅನೇಕ ಕೃತ್ಯಗಳನ್ನು ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಈತ ತ್ಯಾಗರಾಜ ನಗರದ ಸುಮಾರು ಮೂರ್ನಾಲ್ಕು ಮಕ್ಕಳಿಗೆ ಇದೇ ರೀತಿ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ.
ಜಿಮ್ ಟರೈನರ್ ಆಗಿದ್ದರೂ ದಾರಿಹೋಕರಿಗೆ ಅನಗತ್ಯವಾಗಿ ಬೈಯುವುದು ಮತ್ತು ಮಕ್ಕಳ ಮೇಲೆ ಹಲ್ಲೆ ನಡೆಸುವುದು ಈತನ ಚಾಳಿಯಾಗಿದೆ ಎಂದು ಸ್ಥಳೀಯರು ದೂರಿದ್ದಾರೆ. ಬಾಲಕನ ತಾಯಿ ನೀಡಿದ ದೂರಿನ ಮೇರೆಗೆ ಬನಶಂಕರಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದರೂ, ಸದ್ಯ ಆತ ಜಾಮೀನಿನ ಮೇಲೆ ಬಿಡುಗಡೆಯಾಗಿರುವುದು ಪೋಷಕರ ಆತಂಕಕ್ಕೆ ಕಾರಣವಾಗಿದೆ.