ಬಂಟ್ವಾಳ :ಅಕ್ರಮ ಗೋಸಾಗಾಟ ಪ್ರಕರಣ ; ಬಂಟ್ವಾಳದಲ್ಲಿ ಹಿಂದು ವ್ಯಕ್ತಿ ಪೊಲೀಸರ ವಶಕ್ಕೆ, ಆರೋಪಿ ಮನೆ, ದನದ ಕೊಟ್ಟಿಗೆ ಜಪ್ತಿಗೈದ ಪೊಲೀಸರು..!!

ಬಂಟ್ವಾಳ: ಬಂಟ್ವಾಳ ಉಳಿ ಗ್ರಾಮದ ಮಣಿನಾಲ್ಕೂರು- ತೆಕ್ಕಾರು ರಸ್ತೆಯಲ್ಲಿ ಗೂಡ್ಸ್ ಆಟೋದಲ್ಲಿ ಅಕ್ರಮವಾಗಿ ಜಾನುವಾರು ಸಾಗಿಸುತ್ತಿರುವುದನ್ನ ಪತ್ತೆಹಚ್ಚಿದ ಪುಂಜಾಲಕಟ್ಟೆ ಪೊಲೀಸರು ಹಿಂದು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದು ಪ್ರಕರಣ ಸಂಬಂಧಿಸಿ ಜಾನುವಾರು ಸಂರಕ್ಷಣಾ ಕಾಯ್ದೆಯಡಿ ಆತನ ಮನೆಯನ್ನು ಜಪ್ತಿ ಮಾಡಿದ್ದಾರೆ.
KA-70-8686ನೇ ನೊಂದಣಿಯ ಸದ್ರಿ ಗೂಡ್ಸ್ ಆಟೋವನ್ನು ಪೊಲೀಸರು ತಡೆದು ಪರಿಶೀಲಿಸಿದಾಗ, ಅದರಲ್ಲಿ ಒಂದು ಜಾನುವಾರನ್ನು ಹಗ್ಗದಿಂದ ಹಿಂಸಾತ್ಮಕವಾಗಿ ಕಟ್ಟಿ ಹಾಕಿರುವುದು ಕಂಡುಬಂದಿರುತ್ತದೆ. ವಾಹನದ ಚಾಲಕರಲ್ಲಿ ಈ ಬಗ್ಗೆ ವಿಚಾರಿಸಿದಾಗ, ಬಂಟ್ವಾಳ ಮಣಿನಾಲ್ಕೂರು ಗ್ರಾಮದ ನಿವಾಸಿ ಶ್ರೀಧರ ಪೂಜಾರಿ(56) ಎಂಬುದಾಗಿ ತಿಳಿಸಿದ್ದು, ಬಂಟ್ವಾಳ ಸರಪ್ಪಾಡಿ ಎಂಬಲ್ಲಿ ಭೋಜ ಮೂಲ್ಯ ಎಂಬವರ ಮನೆಯಿಂದ ಯಾವುದೇ ದಾಖಲಾತಿ, ಪರವಾನಿಗೆ ಇಲ್ಲದೇ ಎಲ್ಲಿಯೋ ಗೋಹತ್ಯೆ ಮಾಡಿ ಮಾಂಸ ಮಾಡುವ ಉದ್ದೇಶದಿಂದ ಜಾನುವಾರನ್ನು ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಮಾಡಿರುವುದು ಕಂಡುಬಂದಿರುತ್ತದೆ.

ಮುಂದಿನ ಕಾನೂನು ಕ್ರಮಕ್ಕಾಗಿ ಸದ್ರಿ ಜಾನುವಾರು, ಆಟೋ ಹಾಗೂ ಒಂದು ಮೊಬೈಲ್ ಫೋನ್ ವಶಕ್ಕೆ ಪಡೆದು, ಆರೋಪಿಗಳ ವಿರುದ್ಧ ಪುಂಜಾಲಕಟ್ಟೆ ಠಾಣೆಯಲ್ಲಿ ಅ.ಕ್ರ. 85/2025, ಕಲಂ: ಕಲಂ: 5, 7, 12 ಕರ್ನಾಟಕ ಗೋಹತ್ಯೆ ನಿಷೇಧ ಕಾಯಿದೆ ಮತ್ತು ಜಾನುವಾರು ಸಂರಕ್ಷಣಾ ಕಾಯಿದೆ 2020 ಮತ್ತು ಕಲಂ: 11(1)(ಡಿ) ಪ್ರಾಣಿ ಹಿಂಸೆ ತಡೆ ಕಾಯಿದೆಯಡಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ಆರೋಪಿತ ಭೋಜ ಮೂಲ್ಯ ಅವರ ಮನೆ ಹಾಗೂ ಅದಕ್ಕೆ ಹೊಂದಿಕೊಂಡಿರುವ ಜಾನುವಾರು ಕೊಟ್ಟಿಗೆ ಸೇರಿದಂತೆ ಆವರಣವನ್ನು ಕಾನೂನು ಪ್ರಕ್ರಿಯೆಯಂತೆ ಜಪ್ತಿ ಮಾಡಲಾಗಿರುತ್ತದೆ ಎಂದು ಪೊಲೀಸರ ಪ್ರಕಟಣೆ ತಿಳಿಸಿದೆ.