ಉಡುಪಿ :ಕೊರಗ ಸಮುದಾಯದಲ್ಲಿ ಮೊಟ್ಟಮೊದಲ ವೈದ್ಯಕೀಯ ಪದವಿ ಪಡೆದ ಡಾ.ಸ್ನೇಹಾ ; ಅತಿ ಹಿಂದುಳಿದ ಸಮುದಾಯಕ್ಕೊಂದು ಗರಿಮೆ, ಆಳ್ವಾಸ್ ಕಾಲೇಜಿನ ಬೆಂಬಲದಲ್ಲಿ ಶೈಕ್ಷಣಿಕ ಸಾಧನೆ..!!

ಉಡುಪಿ : ಕರಾವಳಿ ಜಿಲ್ಲೆಯ ಅತಿ ಹಿಂದುಳಿದ ಆದಿವಾಸಿ ಬುಡಕಟ್ಟು ಜನಾಂಗ ಕೊರಗ ಸಮುದಾಯಕ್ಕೆ ಸೇರಿದ ಯುವತಿಯೊಬ್ಬಳು ಮೊಟ್ಟಮೊದಲ ಬಾರಿಗೆ ವೈದ್ಯಕೀಯ ಪದವಿ ಮತ್ತು ಎಂಡಿ ಪಡೆಯುವ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ. ಕುಂದಾಪುರ ತಾಲೂಕಿನ ಉಳ್ತೂರು ನಿವಾಸಿ ಗಣೇಶ್ ಮತ್ತು ಜಯಶ್ರೀ ದಂಪತಿಯ ಹಿರಿಯ ಪುತ್ರಿ ಡಾ.ಕೆ. ಸ್ನೇಹಾ ಈ ಸಾಧನೆ ಮಾಡಿರುವ ಯುವತಿ. ಮಂಗಳೂರಿನ ಎ.ಜೆ. ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪೂರೈಸಿದ್ದು ದೆಹಲಿಯ ಯುನಿವರ್ಸಿಟಿ ಕಾಲೇಜ್ ಆಫ್ ಮೆಡಿಕಲ್ ಸೈನ್ಸ್‌ನಲ್ಲಿ ಎಂಡಿ ಪದವಿ ಪಡೆದು ಸಮುದಾಯಕ್ಕೆ ಹಿರಿಮೆ ತಂದಿದ್ದಾರೆ.
ಕುಂದಾಪುರದ ಜೆಎಲ್‌ಬಿ ರಸ್ತೆಯಲ್ಲಿ ನೆಲೆಸಿರುವ ಗಣೇಶ್ ವಿ. ತಾಲೂಕು ಕೊರಗ ಶ್ರೇಯೋಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿದ್ದು ನಾಲ್ಕು ದಶಕಗಳಿಂದ ಸಮುದಾಯದ ಮಕ್ಕಳ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತ ಬಂದಿದ್ದಾರೆ. ಕೊರಗ ಮಕ್ಕಳ ಶೈಕ್ಷಣಿಕ ಉನ್ನತಿಗಾಗಿ ಕುಂಭಾಸಿಯಲ್ಲಿ ಕೊರಗ ಮಕ್ಕಳ ಮನೆ ಸ್ಥಾಪಿಸಿ ಸಮುದಾಯ ಜಾಗೃತಿಯಲ್ಲಿ ತೊಡಗಿದ್ದಾರೆ. ಅವರ ಪತ್ನಿ ಜಯಶ್ರೀ ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದಾರೆ.
ದಂಪತಿಯ ಹಿರಿಯ ಪುತ್ರಿಯಾಗಿರುವ ಸ್ನೇಹಾ ಬಾಲ್ಯದಿಂದಲೂ ಕಲಿಕೆಯಲ್ಲಿ ಚುರುಕಾಗಿದ್ದು ಅಂಕೋಲಾ, ಕುಂದಾಪುರ, ಹೆಬ್ರಿಯಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ ಪಡೆದಿದ್ದರು. ಈಕೆಯ ಪ್ರತಿಭೆ ಗುರುತಿಸಿದ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಪಿಯುಸಿಗೆ ಉಚಿತ ಶಿಕ್ಷಣ ವ್ಯವಸ್ಥೆ ಕಲ್ಪಿಸಿದ್ದರು. ಪಿಯುಸಿಯಲ್ಲಿ ಶೇ.96 ಅಂಕ ಪಡೆದು ಸಿಇಟಿಯಲ್ಲಿ ಸಾಧನೆ ಮಾಡಿದ್ದ ಈಕೆಗೆ ಮೆಡಿಕಲ್ ಸೀಟು ಲಭ್ಯವಾಗಿತ್ತು.
ಸರಕಾರಿ ಕೋಟಾದಡಿ ಕಲಿಯುವ ಅವಕಾಶವಿದ್ದರೂ ಹತ್ತಿರದಲ್ಲೇ ಕಲಿಸಬೇಕೆಂಬ ಬಯಕೆಯಂತೆ ಹೆತ್ತವರು ಮಂಗಳೂರಿನ ಎ.ಜೆ. ಮೆಡಿಕಲ್ ಕಾಲೇಜಿಗೆ ಸೇರಿಸಿದ್ದರು. 5 ವರ್ಷದ ಎಂಬಿಬಿಎಸ್ ಪದವಿ ಪೂರ್ಣಗೊಳಿಸಿದ ಬಳಿಕ ಇದೀಗ ನವದೆಹಲಿಯ ಯುನಿವರ್ಸಿಟಿ ಕಾಲೇಜ್ ಆಫ್ ಮೆಡಿಕಲ್ ಸೈನ್ಸ್‌ನಲ್ಲಿ ಎಂಡಿ ಪದವಿ ಪೂರೈಸಿದ್ದಾರೆ. ಗಣೇಶ್ ದಂಪತಿ ಸಂಸಾರದ ಕಷ್ಟದ ನಡುವೆಯೂ ಮಗಳನ್ನು ಕಷ್ಟಪಟ್ಟು ಓದಿಸಿ ಕೊರಗ ಸಮುದಾಯದಿಂದ ಮೊಟ್ಟಮೊದಲ ವೈದ್ಯೆಯನ್ನು ಸಮಾಜಕ್ಕೆ ನೀಡಿದ್ದಾರೆ. ಅವರ ಕಿರಿಯ ಪುತ್ರಿ ಕೆ. ಸಾಕ್ಷಿ ಸಹ ಪ್ರತಿಭಾನ್ವಿತೆಯಾಗಿದ್ದು ಪ್ರಸ್ತುತ ಗುಜರಾತ್ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್ಸ್‌ನಲ್ಲಿ ಕಲಿಯುತ್ತಿದ್ದಾರೆ. ನೀಟ್ ಬರೆದು ಐಐಟಿಯಲ್ಲಿ 2 ವರ್ಷ ಕಲಿಕೆ ನಿರ್ವಹಿಸಿದ್ದರು. ಈಕೆಯ ಶಿಕ್ಷಣ ಸಾಧನೆಯ ಹಿಂದೆಯೂ ಆಳ್ವಾಸ್ ಫೌಂಡೇಶನ್ ಬೆಂಬಲ ಇದೆ.
ಕರಾವಳಿಯ ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ ಭಾಗದಲ್ಲಿ ಸೀಮಿತರಾಗಿರುವ ಕೊರಗ ಸಮಾಜದಲ್ಲಿ ಪ್ರಸ್ತುತ 15 ಸಾವಿರದಷ್ಟು ಜನರಿದ್ದು ಸಮುದಾಯ ಇತ್ತೀಚಿನ ದಿನಗಳಲ್ಲಿ ಬದಲಾವಣೆಗೆ ತೆರೆದುಕೊಂಡಿದೆ. ಸಮುದಾಯದ ಒಬ್ಬರು 2010ರಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದರು. 2012ರಲ್ಲಿ ಇಬ್ಬರು ಯುಜಿಸಿ -ಎನ್‌ಇಟಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು.