ದುಬೈ :ಮರಳುಗಾಡಿನ ನಗರಿ ದುಬೈ, ಅಬುಧಾಬಿಯಲ್ಲಿ ಭಾರೀ ಗಾಳಿ- ಮಳೆ ; ಸಿಡಿಲು ಮಿಂಚಿನ ಹೊಡೆತಕ್ಕೆ ನಲುಗಿದ ಬುರ್ಜ್ ಖಲೀಫಾ...!!

ದುಬೈ : ಮರಳುಗಾಡಿನ ನಗರಿ ದುಬೈ ಮತ್ತು ಅಬುಧಾಬಿಯಲ್ಲಿ ದಿಢೀರ್ ಭಾರೀ ಮಳೆಯಾಗಿದ್ದು ಸಿಡಿಲು, ಮಿಂಚು, ಮಳೆ, ಪ್ರವಾಹಕ್ಕೆ ಜನರು ತತ್ತರಿಸಿದ್ದಾರೆ. ಡಿ.18-19ರಂದು ಭಾರೀ ಸಿಡಿಲು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪ್ರವಾಸಿಗರು ಎಚ್ಚರದಲ್ಲಿ ಇರುವಂತೆ ಸೂಚನೆ ನೀಡಲಾಗಿದೆ.
ಮೋಡ ಮುಸುಕಿದ ವಾತಾವರಣ ಮತ್ತು ಆಗಿಂದಾಗ್ಗೆ ಬಿರುಗಾಳಿ ಉಂಟಾಗುತ್ತಿದ್ದು ಅಬುಧಾಬಿಯಲ್ಲಿ ಗುರುವಾರ ರಾತ್ರಿಯಿಂದೀಚೆಗೆ 16 ಮಿ.ಮೀ ಮಳೆಯಾಗಿದೆ. ಕೆಂಪು ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು ಇದರ ಪರಿಣಾಮ ಶುಷ್ಕ ಗಾಳಿಯಲ್ಲಿ ಬದಲಾವಣೆಗೊಂಡು ಮಳೆಯಾಗಿದೆ. ಯುಎಇ ಭಾಗದಿಂದ ಪೂರ್ವಕ್ಕೆ ಮಳೆ ಮಾರುತ ಸಾಗುತ್ತಿರುವುದಾಗಿ ಹವಾಮಾನ ಇಲಾಖೆ ಹೇಳಿದೆ





ಮಳೆ ವೈಪರೀತ್ಯ ಯಾವ ರೀತಿ ಎನ್ನುವುದಕ್ಕೆ ಯುಎಇ ರಾಜ ಮಹಮ್ಮದ್ ಬಿನ್ ರಶೀದ್ ಅಲ್ ಮಕ್ತುಮ್ ಅವರು ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ದುಬೈನಲ್ಲಿರುವ ಜಗತ್ತಿನ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾ ಮಿಂಚಿನ ಹೊಡೆತಕ್ಕೆ ಹೇಗೆ ಕಾಣುತ್ತದೆ ಎಂದು ವಿಡಿಯೋ ಮೂಲಕ ತೋರಿಸಿದ್ದಾರೆ. ಹವಾಮಾನ ಇಲಾಖೆ ಯುಎಇ ಪಶ್ಚಿಮ ಮತ್ತು ಕರಾವಳಿ ಪ್ರದೇಶಕ್ಕೆ ಆರೆಂಜ್ ಅಲರ್ಟ್ ನೀಡಿದ್ದು ಭಾರೀ ಗಾಳಿ ಮತ್ತು ಮಳೆಯಾಗುವ ಮುನ್ಸೂಚನೆ ನೀಡಿದೆ. ಮಳೆಯಿಂದಾಗಿ ಅಬುಧಾಬಿ ಮತ್ತು ದುಬೈನಲ್ಲಿ ಹಗಲಿನ ಉಷ್ಣತೆ 22-24 ಡಿಗ್ರಿ ಸೆಲ್ಸಿಯಸ್ ಗೆ ಇಳಿಕೆಯಾಗಿದೆ.
ಕಳೆದ ವರ್ಷವೂ ಇದೇ ಸಮಯದಲ್ಲಿ ದುಬೈನಲ್ಲಿ ಮಳೆಯಾಗಿತ್ತು. ಮಳೆಯೇ ಅಪರೂಪ ಎಂಬಂತಿದ್ದ ಜಾಗದಲ್ಲಿ ಕೆಲವೊಮ್ಮೆ ಅತಿಯಾದ ಮಳೆ ಆಗುತ್ತಿರುವುದು ನೈಸರ್ಗಿಕ ಬದಲಾವಣೆಗಳಲ್ಲಿ ಒಂದಾಗಿದೆ.