ಸಿಡ್ನಿ: ಬೊಂಡಿ ಬೀಚ್ ದಾಳಿಗೆ 12 ಬಲಿ; ಉಗ್ರರ ಕೃತ್ಯ ಶಂಕೆ, ಓರ್ವನ ಹತ್ಯೆ, ಇನ್ನೊಬ್ಬನ ಸೆರೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ ಸುಮಾರು ಎರಡು ಗಂಟೆಗಳ ಹಿಂದೆ ನಡೆದ ಗುಂಡಿನ ದಾಳಿಯಲ್ಲಿ ಸುಮಾರು 50 ಗುಂಡುಗಳು ಹಾರಿವೆ ಎಂದು ಹೇಳಿದ್ದಾರೆ.
ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಘಟನೆ ಬಗ್ಗೆ ಆಸ್ಟ್ರೇಲಿಯಾ ಪ್ರಧಾನಿ ಬೇಸರ ವ್ಯಕ್ತಪಡಿಸಿದ್ದು, ಘಟನೆಯನ್ನು ಆಘಾತಕಾರಿ ಮತ್ತು ದುಃಖಕರ ಎಂದು ಕರೆದಿದ್ದಾರೆ. ಅಲ್ಲದೆ, ಇದು ಭಯೋತ್ಪಾದಕರ ದಾಳಿ ಇರಬಹುದೆಂದು ಶಂಕಿಸಿದ್ದಾರೆ. ಇಬ್ಬರು ದಾಳಿಕೋರರ ಪೈಕಿ ಒಬ್ಬನನ್ನು ಹತ್ಯೆಗೈಯಲಾಗಿದ್ದು, ಇನ್ನೋರ್ವನನ್ನು ಭದ್ರತಾ ಪಡೆಗಳು ವಶಕ್ಕೆ ಪಡೆದಿವೆ.
ಗುಂಡಿನ ದಾಳಿಯಿಂದ ತಪ್ಪಿಸಿಕೊಂಡ ವ್ಯಕ್ತಿ, ಶೂಟರ್ ಹಿಂಬದಿಯಿಂದ ತೆರಳಿ ಶೂಟರ್ ಜತೆ ಗುದ್ದಾಡಿದ್ದಾನೆ. ಬಳಿಕ ಶೂಟರ್ ಕೈಯಿಂದ ಗನ್ ಕಸಿದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ಈತನ ಸಾಹಸ ವಿಡಿಯೋದಲ್ಲಿ ಸೆರೆಯಾಗಿದೆ.
ಯಹೂದಿ ಸಮುದಾಯದ ಹಬ್ಬದ ಆಚರಣೆಗೆ ಸಮುದಾಯ ಬಹುತೇಕರು ಸಿಡ್ನಿ ಬಳಿ ಬೊಂಡಿ ಬೀಚ್‌ನಲ್ಲಿ ಸೇರಿದ್ದರು. ಎಲ್ಲರಲ್ಲಿ ಸಂಭ್ರಮದ ವಾತಾವರಣವಿತ್ತು. ಮಧ್ಯಾಹ್ನ 2.17ರ ವೇಳೆ ಕಪ್ಪು ಬಟ್ಟೆ ಧರಿಸಿದ್ದ ಇಬ್ಬರು ಶೂಟರ್ ಈ ಹಬ್ಬದ ಸ್ಥಳಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಬಳಿಕ ಗುಂಡಿನ ದಾಳಿ ನಡೆಸಿದ್ದಾರೆ. 50ಕ್ಕೂ ಹೆಚ್ಚು ಗುಂಡು ಸಿಡಿಸಿದ್ದಾರೆ. ಹಬ್ಬದ ಸಂಭ್ರಮದಲ್ಲಿದ್ದ ಹಲವು ಅಮಾಯಕರು ಗಾಯಗೊಂಡಿದ್ದಾರೆ. 12 ಮಂದಿ ಈ ದಾಳಿಯಲ್ಲಿ ಮೃತಪಟ್ಟಿದ್ದಾರೆ.
ಧೈರ್ಯ ತೋರಿದ ಯಹೂದಿ
ಹಬ್ಬಕ್ಕೆ ಆಗಮಿಸಿದ ಹಲವರು ಸಿಕ್ಕ ಸಿಕ್ಕ ವಸ್ತು, ಗೋಡೆ, ಮರ, ಕಾರುಗಳ ಬದಿಯಲ್ಲಿ ಪ್ರಾಣ ಉಳಿಸಿಕೊಳ್ಳಲು ಅಡಗಿ ಕುಳಿತಿದ್ದಾರೆ. ಹೀಗೆ ಕಾರಿನ ಬದಿಯಲ್ಲಿ ಅಡಗಿ ಕುಳಿತ ವ್ಯಕ್ತಿ ಹತ್ತಿರದಿಂದಲೇ ಶೂಟರ್ ದಾಳಿ ನೋಡಿ ಬೆಚ್ಚಿ ಬಿದ್ದಿದ್ದಾರೆ. ಮರದ ಬಳಿ ನಿಂತಿದ್ದ ಶೂಟರ್ ಅಮಾಯಕರ ಮೇಲೆ ಗುಂಡಿನ ದಾಳಿ ಮುಂದುವರಿಸಿದ್ದ. ಧೈರ್ಯ ಮಾಡಿ ಯೂಹೂದಿ ಹಿಂಬದಿಯಿಂದ ತೆರಳಿ ಶೂಟರ್ ಗನ್ ಹಾಗೂ ಕೊರಳನ್ನು ಗಟ್ಟಿಯಾಗಿ ಹಿಡಿದಿದ್ದಾನೆ. ಈ ವೇಳೆ ಜಟಾಪಟಿ ಶುರುವಾಗಿದೆ. ಸಾಹಸ ಮೆರೆದ ಯೂಹೂದಿ ಶೂಟರ್ ಕೈಯಲ್ಲಿದ್ದ ಗನ್ ಕಸಿದುಕೊಂಡಿದ್ದಾನೆ. ಗನ್ ಕಸಿದ ವ್ಯಕ್ತಿ ಬಳಿಕ ಗನ್ ಕೆಳಗಿಟ್ಟಿದ್ದಾನೆ. ಅಷ್ಟೊತ್ತಿಗೆ ಶೂಟರ್ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾನೆ.
ಇಬ್ಬರು ಶೂಟರ್‌ಗಳ ಪೈಕಿ ಒಬ್ಬನನ್ನು ಪೊಲೀಸರು ಹತ್ಯೆ ಮಾಡಿದ್ದರೆ. ಈ ಗುಂಡಿನ ಚಕಮಕಿಯಲ್ಲಿ ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ. ಮತ್ತೊಬ್ಬ ಶೂಟರ್‌ನನ್ನು ಅರೆಸ್ಟ್ ಮಾಡಲಾಗಿದೆ. ಭಯೋತ್ಪಾದಕ ಕೃತ್ಯವಾಗಿರಬಹುದೇ ಎನ್ನುವ ಅನುಮಾನಗಳು ಕಾಡುತ್ತಿವೆ.
ಯಹೂದಿಗಳನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ. ಶೂಟರ್ ಹೆಚ್ಚು ಮಕ್ಕಳು ಹಾಗೂ ಹಿರಿಯ ನಾಗರೀಕರನ್ನು ಟಾರ್ಗೆಟ್ ಮಾಡಿದ್ದಾರೆ. 100ಕ್ಕೂ ಹೆಚ್ಚು ಜನ ಸೇರಿದ್ದ ಹಬ್ಬದ ವಾತಾವರಣದಲ್ಲಿ ಈ ದಾಳಿ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.