ರಾಂಪುರ :ಹಳ್ಳಿಯಿಂದ ವಿಶ್ವಕಪ್ ಫೈನಲ್ವರೆಗೆ ಬೆಳೆದಿರುವ ಭಾರತದ ವೇಗಿ ರೇಣುಕಾ ಸಿಂಗ್ ಠಾಕೂರ್..!! ಕಷ್ಟದಲ್ಲೂ ಯಶಸ್ಸು ಕಂಡ ಆಟಗಾರ್ತಿಯ ಯಶೋಗಾಥೆ.!!
ರಾಂಪುರ: ಹಿಮಾಚಲ ಪ್ರದೇಶದ ಪುತ್ರಿ ವೇಗಿ ರೇಣುಕಾ ಸಿಂಗ್ ಠಾಕೂರ್ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತಕ್ಕೆ ಹೆಮ್ಮೆ ತಂದ ಕ್ರಿಕೆಟ್ ಆಟಗಾರ್ತಿ. ಇವರನ್ನು ಭಾರತೀಯ ಮಹಿಳಾ ಕ್ರಿಕೆಟ್ ತಂಡದ ವೇಗದ ಬೌಲಿಂಗ್ ದಾಳಿಯ ಬೆನ್ನೆಲುಬು ಎಂದು ಪರಿಗಣಿಸಲಾಗಿದೆ. ಮಹಿಳಾ ವಿಶ್ವಕಪ್ ಫೈನಲ್ಗೇರಿರುವ ಭಾರತ ತಂಡದಲ್ಲಿ ರೇಣುಕಾ ಸಿಂಗ್ ಠಾಕೂರ್ ಕೂಡ ಪ್ರಮುಖ ಬೌಲರ್.
ಭಾರತ ತಂಡವು ಐಸಿಸಿ ಮಹಿಳಾ ವಿಶ್ವಕಪ್ 2025 ರಲ್ಲಿ ಏಳು ಪಂದ್ಯಗಳನ್ನು ಆಡಿದೆ. ಈ ಪೈಕಿ ರೇಣುಕಾ ಐದು ಪಂದ್ಯಗಳಲ್ಲಿ ಆಡಿ, ಒಟ್ಟು ಮೂರು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಪಾಕಿಸ್ತಾನ (ಅಕ್ಟೋಬರ್ 5), ಇಂಗ್ಲೆಂಡ್ (ಅಕ್ಟೋಬರ್ 19), ನ್ಯೂಜಿಲೆಂಡ್ (ಅಕ್ಟೋಬರ್ 23), ಬಾಂಗ್ಲಾದೇಶ (ಅಕ್ಟೋಬರ್ 26) ಮತ್ತು ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ (ಅಕ್ಟೋಬರ್ 30) ರೇಣುಕಾ ಕಣಕ್ಕಿಳಿದಿದ್ದರು. ನ್ಯೂಜಿಲೆಂಡ್ ವಿರುದ್ಧ ಎರಡು ಮತ್ತು ಬಾಂಗ್ಲಾದೇಶ ವಿರುದ್ಧ ಒಂದು ವಿಕೆಟ್ ಪಡೆದಿದ್ದಾರೆ.
ಹಳ್ಳಿಯಿಂದ ವಿಶ್ವಕಪ್ ಫೈನಲ್ವರೆಗೆ: ಶಿಮ್ಲಾ ಜಿಲ್ಲೆಯ ರೋಹ್ರು ತಾಲೂಕಿನ ಪರ್ಸಾ ಗ್ರಾಮದವ ರೇಣುಕಾ ಸಿಂಗ್ ಜನವರಿ 2, 1996 ರಂದು ಸಾಧಾರಣ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಕೇಹರ್ ಸಿಂಗ್ ಠಾಕೂರ್ ನೀರಾವರಿ ಮತ್ತು ಸಾರ್ವಜನಿಕ ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ರೇಣುಕಾ ಕೇವಲ 3 ವರ್ಷದವಳಿದ್ದಾಗ ನಿಧನರಾದರು. ಅವರ ಮರಣದ ನಂತರ, ಅವರ ತಾಯಿ ಸುನೀತಾ ಠಾಕೂರ್ ಅವರು 4 ನೇ ದರ್ಜೆಯ ಉದ್ಯೋಗಿಯಾಗಿ ಕುಟುಂಬದ ಜವಾಬ್ದಾರಿಯನ್ನು ವಹಿಸಿಕೊಂಡರು. ಕಷ್ಟದಲ್ಲಿಯೂ ಇಬ್ಬರು ಮಕ್ಕಳನ್ನು ಬೆಳೆಸಿದರು. ಸಮಸ್ಯೆಗಳ ಮಧ್ಯೆಯೂ ಕ್ರಿಕೆಟ್ ಮೇಲಿನ ಉತ್ಸಾಹವು ರೇಣುಕಾ ಅವರನ್ನು ಅಂತರರಾಷ್ಟ್ರೀಯ ವೇದಿಕೆಗೆ ಕರೆತಂದಿದೆ.
ನನ್ನ ಮಗಳಿಂದಾಗಿ ನಾನು ಸ್ವರ್ಗದಲ್ಲಿದ್ದೇನೆ ಎಂಬಂತೆ ಅನಿಸುತ್ತಿದೆ. ತಂಡ ವಿಶ್ವಕಪ್ ಫೈನಲ್ ತಲುಪಿರುವುದು ನನಗೆ ಹೆಮ್ಮೆ ಇದೆ. ತಂಡ ಗೆದ್ದರೆ, ನಾವು ಗ್ರಾಮದಲ್ಲಿ ಹಬ್ಬವನ್ನು ಆಯೋಜಿಸುತ್ತೇವೆ. ರಜಾದಿನಗಳಲ್ಲಿ ರೇಣುಕಾ ಮನೆಗೆ ಬಂದಾಗಲೆಲ್ಲಾ, ಹೊಲಗಳಲ್ಲಿ ಮತ್ತು ಅಡುಗೆಮನೆಯಲ್ಲಿ ಸಹಾಯ ಮಾಡುತ್ತಾಳೆ. ಆಕೆ ಯಾವಾಗಲೂ ಸರಳವಾಗಿ ಬದುಕುತ್ತಾರೆ" ಎಂದು ರೇಣುಕಾ ತಾಯಿ ತಿಳಿಸಿದ್ದಾರೆ.
ರೇಣುಕಾ ಸಿಂಗ್ ಶಿಕ್ಷಣ: ಹಳ್ಳಿಯಲ್ಲೇ ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸಿದ ರೇಣುಕಾ, ನಂತರ ಮಾಧ್ಯಮಿಕ ಶಿಕ್ಷಣಕ್ಕಾಗಿ ಧರ್ಮಶಾಲಾದ ಜಿಎಸ್ಎಸ್ ಶಾಲೆ, ಹಿರಿಯ ಮಾಧ್ಯಮಿಕ ಶಿಕ್ಷಣಕ್ಕಾಗಿ ಕಾಂಗ್ರಾದ ಜೆಎವಿ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ವ್ಯಾಸಂಗ ಮಾಡಿದರು. ಬಳಿಕ ಗುರುನಾನಕ್ ದೇವ್ ವಿಶ್ವವಿದ್ಯಾಲಯ ಮತ್ತು ಅಮೃತಸರದ ಖಾಲ್ಸಾ ಕಾಲೇಜಿನಲ್ಲಿ ಉನ್ನತ ಶಿಕ್ಷಣವನ್ನು ಪಡೆದರು. ನಂತರ ಧರ್ಮಶಾಲಾದ ಸರ್ಕಾರಿ ಕಾಲೇಜಿನಲ್ಲಿ ಹೆಚ್ಚುವರಿ ಅಧ್ಯಯನವನ್ನು ಪೂರ್ಣಗೊಳಿಸಿದರು.
ಸಹೋದರ ಮತ್ತು ಸ್ನೇಹಿತರೊಂದಿಗೆ ಕ್ರಿಕೆಟ್ : ರೇಣುಕಾ ಮೊದಲು ತನ್ನ ಸಹೋದರ ಮತ್ತು ಸ್ನೇಹಿತರೊಂದಿಗೆ ಶಾಲಾ ಮೈದಾನದಲ್ಲಿ ಕ್ರಿಕೆಟ್ ಆಡಲು ಆರಂಭಿಸಿದರು. ಆಗ ಪ್ರತಿಭೆಯನ್ನು ಗುರುತಿಸಿದ ಆಕೆಯ ಚಿಕ್ಕಪ್ಪ, ಪಿಇಟಿ ಕಾಲೇಜಿನಲ್ಲಿ ಶಿಕ್ಷಕರಾಗಿರುವ ಭೂಪೇಂದ್ರ ಸಿಂಗ್ ಠಾಕೂರ್, ಮುಂದಿನ ಹೆಜ್ಜೆ ಇಡಲು ಪ್ರೋತ್ಸಾಹಿಸಿದರು. ಅವರ ಸಲಹೆಯನ್ನು ಅನುಸರಿಸಿ, ರೇಣುಕಾ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ (HPCA) ಮಹಿಳಾ ವಸತಿ ಅಕಾಡೆಮಿಗೆ ಸೇರಿದರು. ಇಲ್ಲಿ ಔಪಚಾರಿಕ ಕ್ರಿಕೆಟ್ ತರಬೇತಿ ಪಡೆದರು.
ಕ್ರಿಕೆಟ್ ವೃತ್ತಿಜೀವನ: ರೇಣುಕಾ 2009 ರಲ್ಲಿ HPCA ಅಕಾಡೆಮಿಗೆ ಸೇರಿದ ನಂತರ, ಹಿಮಾಚಲ ಪ್ರದೇಶದ ಅಂಡರ್-16 ಮತ್ತು ಅಂಡರ್-19 ತಂಡಗಳಿಗೆ ಆಯ್ಕೆ ಆದರು. 2019-20 ಸೀನಿಯರ್ ಮಹಿಳಾ ಏಕದಿನ ಟ್ರೋಫಿಯಲ್ಲಿ 23 ವಿಕೆಟ್‌ಗಳನ್ನು ಪಡೆಯುವ ಮೂಲಕ ರಾಷ್ಟ್ರೀಯ ಗಮನ ಸೆಳೆದರು.
ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪ್ರವೇಶ: ದೇಶೀಯ ಕ್ರಿಕೆಟ್‌ನಲ್ಲಿ ಅವರ ಸ್ಥಿರ ಪ್ರದರ್ಶನವು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪ್ರವೇಶಕ್ಕೆ ದಾರಿ ಮಾಡಿಕೊಟ್ಟಿತು. ರೇಣುಕಾ ಅಕ್ಟೋಬರ್ 2021 ರಲ್ಲಿ ಆಸ್ಟ್ರೇಲಿಯಾ ವಿರುದ್ಧ T20 ಗೆ ಪಾದಾರ್ಪಣೆ ಮಾಡಿದರು ಮತ್ತು ಫೆಬ್ರವರಿ 2022 ರಲ್ಲಿ ನ್ಯೂಜಿಲೆಂಡ್ ವಿರುದ್ಧ ODI ಗೆ ಪಾದಾರ್ಪಣೆ ಮಾಡಿದರು. 2022 ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ, ಅವರು ಭಾರತದ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ್ತಿಯಾಗಿದ್ದರು ಮತ್ತು ಬೆಳ್ಳಿ ಪದಕವನ್ನು ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಸಾಧನೆಗಳು ಮತ್ತು ಗೌರವಗಳು
• 2022 ರ ICC ಉದಯೋನ್ಮುಖ ಮಹಿಳಾ ಕ್ರಿಕೆಟಿಗ ಪ್ರಶಸ್ತಿ
• T20 ಶ್ರೇಯಾಂಕದಲ್ಲಿ ಅಗ್ರ 5 ಬೌಲರ್‌ಗಳಲ್ಲಿ ಸ್ಥಾನ
ಹೋರಾಟದಿಂದ ಯಶಸ್ಸಿನವರೆಗೆ: ವೈಯಕ್ತಿಕ ಮತ್ತು ಆರ್ಥಿಕ ಸಂಕಷ್ಟದಲ್ಲೂ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಬಂದಿರುವುದು ರೇಣುಕಾ ಸಾಧನೆ. ಚಿಕ್ಕ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡು ಸೀಮಿತ ಸಂಪನ್ಮೂಲಗಳನ್ನು ಹೊಂದಿದ್ದರು. ಹಳ್ಳಿಯ ಮೈದಾನದಲ್ಲಿ ಸ್ವಿಂಗ್ ಬೌಲಿಂಗ್ ಕರಗತ ಮಾಡಿಕೊಂಡು ವಿಶ್ವ ವೇದಿಕೆಯಲ್ಲಿ ಶ್ರೇಷ್ಠತೆಯನ್ನು ಸಾಧಿಸುವವರೆಗೆ ಬೆಳೆದಿರುವುದು ಹಲವರಿಗೆ ಸ್ಫೂರ್ತಿ.
"ನಮ್ಮ ಗ್ರಾಮದ ರೇಣುಕಾ ಸಿಂಗ್ ಠಾಕೂರ್ ಹಿಮಾಚಲಕ್ಕೆ ಮಾತ್ರವಲ್ಲದೆ ಇಡೀ ದೇಶಕ್ಕೆ ಗೌರವವನ್ನು ತಂದಿದ್ದಾರೆ ಎಂದು ನಾವು ಹೆಮ್ಮೆಪಡುತ್ತೇವೆ." ಅಂತಾ ಪಾರ್ಸಾ ಗ್ರಾಮ ಪಂಚಾಯತ್ ಮುಖ್ಯಸ್ಥ ಗಣೇಶ್ ದತ್ ಶರ್ಮಾ ತಿಳಿಸಿದ್ದಾರೆ.