ಬೆಂಗಳೂರು:ರೇಣುಕಾಸ್ವಾಮಿ ಕೊಲೆ ಪ್ರಕರಣ;ಜಾಮೀನು ಅರ್ಜಿ ಪುನರ್ ಪರಿಶೀಲಿಸುವಂತೆ ಪವಿತ್ರಾ ಗೌಡ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್..!!

ನವದೆಹಲಿ/ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ಪವಿತ್ರಾ ಗೌಡ, ರದ್ದುಗೊಂಡಿರುವ ಜಾಮೀನು ಅರ್ಜಿಯನ್ನು ಪುನರ್ ಪರಿಶೀಲಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.
ಕಳೆದ ಆಗಸ್ಟ್ 14 ರಂದು ಕೊಲೆ ಪ್ರಕರಣದಲ್ಲಿ A1 ಆಗಿರುವ ಪವಿತ್ರಾ ಗೌಡ ಸೇರಿದಂತೆ ಇತರೆ ಆರೋಪಿಗಳಿಗೆ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿತ್ತು. ಜಾಮೀನು ರದ್ದು ಆದೇಶದಲ್ಲಿ ಕೆಲ ತಪ್ಪುಗಳಿವೆ. ಮತ್ತೊಮ್ಮೆ ಪರಿಶೀಲಿಸಿ ಜಾಮೀನು ನೀಡುವಂತೆ ಪವಿತ್ರಾ ಗೌಡ ಮನವಿ ಮಾಡಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಆರ್ ಮಹಾದೇವನ್ ಅವರನ್ನೊಳಗೊಂಡ ಪೀಠವು ಈ ಆದೇಶ ನೀಡಿದೆ. ಅರ್ಜಿ ವಿಚಾರಣೆ ನಡೆಸಿದ ಪೀಠ ನವೆಂಬರ್ 6 ರಂದು ಹೊರಡಿಸಿದ ಆದೇಶದಲ್ಲಿ, ತೀರ್ಪನ್ನು ಪರಿಶೀಲಿಸಲು ಯಾವುದೇ ಅವಕಾಶವಿಲ್ಲ ಎಂದು ಹೇಳಿದೆ.
ನಾವು ಆದೇಶ ಮತ್ತು ದಾಖಲೆಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿದ್ದೇವೆ. ನಮ್ಮ ಅಭಿಪ್ರಾಯದಲ್ಲಿ, ಪುನರ್ ಪರಿಶೀಲನೆಗೆ ಯಾವುದೇ ಪ್ರಕರಣವನ್ನು ಸಲ್ಲಿಸಲಾಗಿಲ್ಲ. ಈ ಹಿನ್ನೆಲೆ ಈ ಪರಿಶೀಲನಾ ಅರ್ಜಿಗಳನ್ನು ವಜಾಗೊಳಿಸಲಾಗಿದೆ ಎಂದು ಪೀಠ ತಿಳಿಸಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ಡಿಸೆಂಬರ್ 2024 ರಲ್ಲಿ ನೀಡಿದ್ದ ಜಾಮೀನು ಅರ್ಜಿ ಆದೇಶವನ್ನು ಆಗಸ್ಟ್‌ನಲ್ಲಿ ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು. ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಇತರ ಆರೋಪಿಗಳಿಗೆ ಹೈಕೋರ್ಟ್ ಜಾಮೀನು ನೀಡಿತ್ತು.
ಸುಪ್ರೀಂ ತೀರ್ಪಿನ ಬೆನ್ನಲ್ಲೇ ದರ್ಶನ್, ನಾಗರಾಜು ಆರ್, ಅನು ಕುಮಾರ್ ಅಲಿಯಾಸ್ ಅನು, ಲಕ್ಷ್ಮಣ್ ಎಂ, ಪವಿತ್ರಾ ಗೌಡ, ಜಗದೀಶ್ ಅಲಿಯಾಸ್ ಜಗ್ಗ, ಪ್ರದೂಷ್ ಎಸ್ ರಾವ್ ಅಲಿಯಾಸ್ ಪ್ರದೂಷ್ ಜಾಮೀನು ಕೂಡ ರದ್ದಾಗಿತ್ತು.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 2024ರ ಜೂನ್ನಲ್ಲಿ ದರ್ಶನ್ ಸೇರಿದಂತೆ ಇತರೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.
ನ. 10ಕ್ಕೆ ದೋಷಾರೋಪಣೆ ವಿಚಾರಣೆ: ಈ ಪ್ರಕರಣದಲ್ಲಿ 17 ಮಂದಿ ಆರೋಪಿಗಳಿಗೆ ಇತ್ತೀಚಿಗೆದೋಷಾರೋಪ ನಿಗದಿ ಮುಕ್ತಾಯಗೊಂಡಿದ್ದು, ವಿಚಾರಣೆಯನ್ನು 64ನೇ ಸಿಸಿಹೆಚ್ ನ್ಯಾಯಾಲಯ ನ.10ಕ್ಕೆ ಮುಂದೂಡಿದೆ. ಹತ್ಯೆ ಪ್ರಕರಣದಲ್ಲಿ ಪೊಲೀಸರು ಒಟ್ಟು 230 ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು, ಈ ಪೈಕಿ ಸುಮಾರು 70 ಅತ್ಯಂತ ಪ್ರಮುಖವಾಗಿವೆ. ಮೂರು ಪ್ರಮುಖ ಐ ವಿಟ್ನೆಸ್‌ಗಳು, ಸಿಸಿಟಿವಿ ದೃಶ್ಯಗಳು ಹಾಗೂ ಎಫ್‌ಎಸ್‌ಎಲ್ ವರದಿ ಸೇರಿದಂತೆ ತಾಂತ್ರಿಕ ಸಾಕ್ಷ್ಯಗಳೂ ಸೇರಿವೆ.