ಹಾವೇರಿ: ಪ್ರೀತಿಸಿದ ಯುವಕ ಮದುವೆಯಾಗಲು ನಿರಾಕರಿಸಿದ ಆರೋಪ, ಗರ್ಭಿಣಿ ಯುವತಿ ಆತ್ಮಹತ್ಯೆ!
ಹಾವೇರಿ: ಪ್ರೀತಿಸಿ ಮದುವೆಯಾಗಲು ನಿರಾಕರಿಸಿದ್ದಕ್ಕೆ ಗರ್ಭಿಣಿ ಯುವತಿ ಆತ್ಮಹತ್ಯೆಗೆ ಶರಣಾದ ಘಟನೆ ಜಿಲ್ಲೆಯ ಬ್ಯಾಡಗಿ ತಾಲೂಕಿನ ಶಂಕ್ರಿಪುರದಲ್ಲಿ ನಡೆದಿದೆ. ಮೃತ ಯುವತಿಯನ್ನು 25 ವರ್ಷದ ಸಿಂಧು ಪರಣ್ಣನವರ್ ಎಂದು ಗುರುತಿಸಲಾಗಿದೆ.
ಮದುವೆಯಾಗಲು ನಿರಾಕರಿಸಿದ ರಾಣೆಬೆನ್ನೂರು ತಾಲೂಕು ಕುದರಿಹಾಳ ಗ್ರಾಮದಲ್ಲಿರುವ ಯುವಕನ ಮನೆಯ ಮುಂದೆ ಯುವತಿಯ ಶವವಿಟ್ಟು ಪೋಷಕರು ಪ್ರತಿಭಟನೆ ನಡೆಸಿ, ನ್ಯಾಯ ಕೊಡಿಸುವಂತೆ ಆಗ್ರಹಿಸಿದರು.
ಸಿಂಧು ಮತ್ತು ಶರತ್ ನೀಲಪ್ಪನವರ ಪರಸ್ಪರ ಪ್ರೀತಿಸುತ್ತಿದ್ದರು. ಕಳೆದ 10 ದಿನಗಳ ಹಿಂದೆ ಪೊಲೀಸ್ ಠಾಣೆಯಲ್ಲಿ ರಾಜಿ ಪಂಚಾಯತಿ ಮಾಡಿದ್ದರು. ಅದರಂತೆ ನಡೆದುಕೊಳ್ಳದ ಕಾರಣ ಸಿಂಧು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಯುವಕನ ಮನೆ ಮುಂದೆ ಶವವಿಟ್ಟು ಪ್ರತಿಭಟನೆ: ನಮ್ಮ ಮಗಳ ಸಾವಿಗೆ ನ್ಯಾಯ ಬೇಕು ಎಂದು ಯುವಕನ ಮನೆ ಮುಂದೆ ಯುವತಿಯ ಶವ ಇಟ್ಟು ಕುಟುಂಬಸ್ಥರು ಪ್ರತಿಭಟಿಸಿದರು. ಈ ವೇಳೆ ಮನೆಗೆ ಬೀಗ ಹಾಕಿ ಯುವಕನ ಮನೆಯವರು ಪರಾರಿಯಾಗಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ರಾಣೇಬೆನ್ನೂರು ಗ್ರಾಮೀಣ ಠಾಣೆಯ ಪೊಲೀಸರು ಆಗಮಿಸಿ, ಪರಿಶೀಲನೆ ನಡೆಸಿದರು. ಬಳಿಕ ಯುವತಿಯ ಕುಟುಂಬಸ್ಥರಿಗೆ ನ್ಯಾಯದ ಭರವಸೆ ನೀಡಿ, ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಎಸ್ಪಿ ಯಶೋಧಾ ವಂಟಗೋಡಿ ಸ್ಪಷ್ಟನೆ: ಕೆಲ ದಿನಗಳ ಹಿಂದೆ ಯುವಕ ಮತ್ತು ಯುವತಿಯ ಕುಟುಂಬದ ಸದಸ್ಯರು ರಾಣೇಬೆನ್ನೂರು ಗ್ರಾಮಾಂತರ ಠಾಣೆಗೆ ದೂರು ನೀಡಲು ಬಂದಿದ್ದರು. ಈ ಕುರಿತಂತೆ ಠಾಣೆಯ ಡೈರಿಯಲ್ಲಿ ದಾಖಲಾಗಿದೆ. ಆದರೆ ಪೊಲೀಸರು ಸಲಹೆಯ ನಂತರ ಹಿರಿಯರ ಸಮ್ಮುಖದಲ್ಲಿ ಸಮಸ್ಯೆ ಬಗೆಹರಿಸುವುದಾಗಿ ವಾಪಸ್ ಹೋಗಿದ್ದರು. ಅವರು ಯಾವ ರೀತಿ ದೂರು ನೀಡುತ್ತಾರೋ ಅದರ ಮೇಲೆ ಕ್ರಮ ಕೈಗೊಳ್ಳುತ್ತೇವೆ. ಪೊಲೀಸರು ಹಣ ಪಡೆದು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಯುವತಿಯ ಪೋಷಕರು ಆರೋಪಿಸಿದ್ದಾರೆ. ಈ ಕುರಿತಂತೆ ದೂರು ನೀಡಿದರೆ ಇಲಾಖಾ ತನಿಖೆ ಕೈಗೊಳ್ಳುವುದಾಗಿ ಎಸ್ಪಿ ಯಶೋಧಾ ವಂಟಗೋಡಿ ತಿಳಿಸಿದ್ದಾರೆ.