ರಾಜಸ್ಥಾನ್ :ಭಾರತ-ಪಾಕ್ ಗಡಿಯಲ್ಲಿ ಡ್ರೋನ್ ಮೂಲಕ ಹೆರಾಯಿನ್ ಕಳ್ಳಸಾಗಣೆ: ಯತ್ನ ವಿಫಲಗೊಳಿಸಿದ ಬಿಎಸ್ಎಫ್, ಪೊಲೀಸ್..!!

ಭಾನುವಾರ ರಾತ್ರಿ ಡ್ರೋನ್ ಮೂಲಕ ಹೆರಾಯಿನ್ ಕಳ್ಳಸಾಗಣೆ ಮಾಡುತ್ತಿದ್ದು, ಇದನ್ನು ತಡೆದಿರುವ ಬಿಎಸ್ಎಫ್ ಅಧಿಕಾರಿಗಳು ಸುಮಾರು ರೂಪಾಯಿ 2.5 ಕೋಟಿ ಮೊತ್ತದ 500 ಗ್ರಾಂ ನಿಷೇಧಿತ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ತಡರಾತ್ರಿಯಲ್ಲಿ ಬಿಒಪಿ ಆನಂದಸರ್ ಪ್ರದೇಶದಲ್ಲಿ ಡ್ರೋನ್‌ಗಳ ಶಬ್ಧ ಕೇಳಿಬಂದಿದೆ. ಇದರಿಂದ ಎಚ್ಚೆತ್ತುಕೊಂಡ 118ನೇ ಬೆಟಾಲಿಯನ್‌ನ ಬಿಎಸ್‌ಎಫ್ ಸಿಬ್ಬಂದಿ ತಕ್ಷಣ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದರು. ನಂತರ ಬಿಎಸ್‌ಎಫ್ ಮತ್ತು ಪೊಲೀಸರು ಹತ್ತಿರದ ಹೊಲಗಳಲ್ಲಿ ಜಂಟಿ ಶೋಧ ಕಾರ್ಯಾಚರಣೆಯನ್ನು ನಡೆಸಿದರು.
ಬಿಎಸ್‌ಎಫ್ ಮತ್ತು ಸ್ಥಳೀಯ ಪೊಲೀಸರು ಹತ್ತಿರದ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿ, ಹಲವಾರು ಗ್ರಾಮಸ್ಥರನ್ನು ವಿಚಾರಣೆ ನಡೆಸಿದರು. ಈ ವೇಳೆ ಗ್ರಾಮವೊಂದರ ಬಳಿ ತೆರೆದ ಮೈದಾನದಲ್ಲಿ ಹಳದಿ ಪ್ಯಾಕೆಟ್ ಪತ್ತೆಯಾಗಿದೆ. ಈ ಪ್ಯಾಕೆಟ್‌ನಲ್ಲಿ ಸುಮಾರು 500 ಗ್ರಾಂ ಹೆರಾಯಿನ್ ಇತ್ತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಕಳ್ಳಸಾಗಣೆ ವಸ್ತುಗಳ ಮೌಲ್ಯ 2.5 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಯಾವುದೇ ಅನುಮಾನಾಸ್ಪದ ಚಟುವಟಿಕೆಯ ಬಗ್ಗೆ ತಿಳಿದು ಬಂದರೆ ತಕ್ಷಣ ವರದಿ ಮಾಡುವಂತೆ ಸ್ಥಳೀಯರಿಗೆ ಸೂಚನೆ ನೀಡಲಾಗಿದೆ ಎಂದು ಎಸ್‌ಪಿ ಅಮೃತಾ ದುಹಾನ್ ತಿಳಿಸಿದರು.
ಈ ಘಟನೆ ಬೆನ್ನಲ್ಲೇ ಸ್ಥಳದಲ್ಲಿ ಬಿಎಸ್‌ಎಫ್ ಮತ್ತು ಪೊಲೀಸರು ಗಸ್ತು ತಿರುಗುತ್ತಿದ್ದರೂ, ಬೇರೆ ಯಾವುದೇ ವಸ್ತುಗಳು ಕಂಡುಬಂದಿಲ್ಲ. ಸುತ್ತಮುತ್ತಲಿನ ಪ್ರದೇಶಗಳಲ್ಲಿ ತೀವ್ರ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಆದಾಗ್ಯೂ, ಸ್ಥಳದಿಂದ ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿಲ್ಲ ಎಂದು ತಿಳಿಸಿದ್ದಾರೆ.
ಪಾಕಿಸ್ತಾನ ಡ್ರೋನ್‌ಗಳ ಮೂಲಕ ಗಡಿಯಾಚೆಯಿಂದ ಮಾದಕವಸ್ತುಗಳನ್ನು ಬೀಳಿಸಲಾಗಿದ್ದು, ಭಾರತೀಯ ಕಳ್ಳಸಾಗಣೆದಾರರನ್ನು ಗುರಿಯಾಗಿಸಿಕೊಂಡು ಅವರು ಪಂಜಾಬ್ ಮತ್ತು ಇತರ ರಾಜ್ಯಗಳಲ್ಲಿ ಮಾದಕವಸ್ತುವನ್ನು ವಿತರಿಸುತ್ತಿದ್ದರು ಎಂದು ಶಂಕಿಸಲಾಗಿದೆ.
ಗಡಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಾರಿಬರುತ್ತಿರುವ ಡ್ರೋನ್‌ಗಳ ಮೇಲೆ ಭದ್ರತಾ ಪಡೆಗಳು ಹೆಚ್ಚಿನ ನಿಗಾ ವಹಿಸಿವೆ. ಡ್ರೋನ್ ಕಂಡ ತಕ್ಷಣವೇ ಕಾರ್ಯಾಚರಣೆ ನಡೆಸಿ ಹೊಡೆದುರುಳಿಸುತ್ತಿವೆ. ಅವುಗಳನ್ನು ಕಳ್ಳಸಾಗಣೆದಾರರು ಮರಳಿ ಪಡೆಯುವ ಮೊದಲೇ ಗಡಿ ಬೇಲಿಯಲ್ಲಿ ಜಪ್ತಿ ಮಾಡಲಾಗುತ್ತಿದೆ. ಇದರಿಂದ ಮಾದಕ ದ್ರವ್ಯಗಳನ್ನು ಕಳ್ಳಸಾಗಣೆ ಮಾಡುವ ಯತ್ನವನ್ನು ವಿಫಲಗೊಳಿಸಲಾಗುತ್ತಿದೆ ಎಂದು ಅಧಿಕಾರಿ ಹೇಳಿದರು.