ಮಂಗಳೂರು :ನಕಲಿ ಷೇರು ಮಾರುಕಟ್ಟೆ ಮೇಲೆ ಹೂಡಿಕೆ ; ಫೇಸ್ಬುಕ್ ಗೆಳತಿಯ ಮಾತು ಕೇಳಿ 32 ಲಕ್ಷ ಕಳಕೊಂಡ ಮಂಗಳೂರಿನ ಯುವಕ !

ಮಂಗಳೂರು, ನ.4 : ನಕಲಿ ಷೇರು ಮಾರುಕಟ್ಟೆಯನ್ನು ನಂಬಿ ಹೂಡಿಕೆ ಮಾಡಿದ ಮಂಗಳೂರಿನ ಯುವಕನೊಬ್ಬ ಬರೋಬ್ಬರಿ 32 ಲಕ್ಷ ರೂ. ಹಣ ಕಳಕೊಂಡ ಘಟನೆ ನಡೆದಿದ್ದು, ನಗರದ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
35 ವರ್ಷದ ಮಂಗಳೂರಿನ ಯುವಕ ಮೊಬೈಲ್ ನಲ್ಲಿ ಫೇಸ್ಬುಕ್ ನೋಡುತ್ತಿದ್ದಾಗ ಕಾವ್ಯ ಶೆಟ್ಟಿ ಹೆಸರಲ್ಲಿ ಯುವತಿಯೊಬ್ಬಳು ಪರಿಚಯ ಆಗಿದ್ದಳು. ತಾನು ಮುಂಬೈನಲ್ಲಿ ಷೇರ್ ಟ್ರೇಡಿಂಗ್ ಕೆಲಸ ಮಾಡಿಕೊಂಡಿರುವುದಾಗಿ ತಿಳಿಸಿದ್ದು ಟ್ರೇಡಿಂಗ್ ನಲ್ಲಿ ಕೆಲಸ ಮಾಡಿದರೆ ಹೆಚ್ಚಿನ ಲಾಭಾಂಶ ಬರುವುದಾಗಿ ತಿಳಿಸಿದ್ದಾರೆ.
ಆಕೆ ಬಳಿಕ ವಾಟ್ಸಾಪ್ ನಂಬರ್ ನಿಂದ ಪಿರ್ಯಾದಿದಾರರಿಗೆ h5.capdynglobal.org ಎಂಬ ಲಿಂಕ್ ಕಳುಹಿಸಿ ಜಾಯಿನ್ ಆಗಲು ತಿಳಿಸಿದ್ದರು. ಸದ್ರಿ ಲಿಂಕ್ ಒತ್ತಿದಾಗ capdynglobal ಎಂಬ ಟ್ರೇಡಿಂಗ್ ಆ್ಯಪ್ ಓಪನ್ ಆಗಿತ್ತು. ತನ್ನ ಇ- ಮೇಲ್ ಐಡಿ ಹಾಗೂ ವೈಯಕ್ತಿಕ ವಿವರಗಳನ್ನು ನಮೂದಿಸಿ ಸದ್ರಿ ಟ್ರೇಡಿಂಗ್ ಆಪ್ ನಲ್ಲಿ ಜಾಯಿನ್ ಆಗಿದ್ದರು. ಟ್ರೇಡಿಂಗ್ ನಲ್ಲಿ ಶೇರು ಪರ್ಚೇಸ್ ಮಾಡಲು ರೂ. 40,000/- ಹಣ ಪಾವತಿ ಮಾಡುವಂತೆ ತಿಳಿಸಿದ್ದು, ಅದರಂತೆ ಸೆ.13ರಂದು ಫೋನ್ ಫೇ ಮಾಡಿರುತ್ತಾರೆ. ಇದಕ್ಕೆ ಲಾಭಾಂಶವಾಗಿ ಇವರ ಖಾತೆಗೆ ರೂ. 9,504/- ಹಣ ಜಮೆ ಆಗಿರುತ್ತದೆ. ನಂತರ 2,00,000/- ರೂ. ಹಣ ಹಾಕಿದಾಗ ಇದಕ್ಕೆ ಲಾಭಾಂಶವಾಗಿ 23,760/- ರೂ ಹಣ ಜಮೆ ಆಗಿರುತ್ತದೆ.
ಇದರಿಂದ ಸದ್ರಿ ಶೇರು ಮಾರ್ಕೆಟ್ ನಲ್ಲಿ ಪಿರ್ಯಾದಿದಾರರಿಗೆ ನಂಬಿಕೆ ಉಂಟಾಗಿ ಹೆಚ್ಚಿನ ಲಾಭಾಂಶ ಪಡೆಯುವ ಉದ್ದೇಶದಿಂದ ಅವರು ತಿಳಿಸಿದ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು 32,06,880/-ರೂ. ಹಣವನ್ನು 13-09-2025 ರಿಂದ 24-10-2025 ರ ವರೆಗೆ ಅಪರಿಚಿತ ವ್ಯಕ್ತಿ ನೀಡಿದ ಬೇರೆ ಬೇರೆ ಹಣ ವರ್ಗಾವಣೆ ಮಾಡಿರುತ್ತಾರೆ. ಬಳಿಕ ಹಣ ವಂಚನೆಯಾದ ಬಗ್ಗೆ ಯುವಕನಿಗೆ ತಿಳಿದಿದ್ದು ಅಪರಿಚಿತರು ನಕಲಿ ಶೇರ್ ಮಾರ್ಕೆಟಿಂಗ್ ಇನ್ ವೆಸ್ಟ್ ಮೆಂಟ್ ಹೆಸರಿನಲ್ಲಿ ಆನ್ ಲೈನ್ ಮೂಲಕ ಪಿರ್ಯಾದಿದಾರರಿಂದ ಮೋಸದಿಂದ ಹಣ ವರ್ಗಾಯಿಸಿಕೊಂಡು ಆನ್ ಲೈನ್ ವಂಚನೆ ಮಾಡಿದ್ದಾರೆಂದು ದೂರು ನೀಡಿದ್ದಾರೆ.