ಹರಿಯಾಣ :5 ಸಾವಿರದಿಂದ 15ಲಕ್ಷಕ್ಕೆ ತಲುಪಿದ ವಹಿವಾಟು: ಕೃತಕ ಹೂವಿನ ತಯಾರಿಕೆ ಮೂಲಕ ಭರಪೂರ ಆದಾಯಗಳಿಸುತ್ತಿರುವ ಗ್ರಾಮೀಣ ಮಹಿಳೆಯರು!!!

ಹರಿಯಾಣ: ಕುರುಕ್ಷೇತ್ರ ಜಿಲ್ಲೆಯ ಸುರ ಗ್ರಾಮದಲ್ಲಿ 10 ಮಹಿಳೆಯರ ಗುಂಪೊಂದು ಕೃತಕ ಹೂವಿನ ತಯಾರಿಕೆ ಮೂಲಕವೇ ಲಕ್ಷಾಂತರ ರೂ ವಹಿವಾಟು ನಡೆಸುತ್ತಿದೆ. ಜಿಲ್ಲೆಯ ಸುರ ಗ್ರಾಮದಲ್ಲಿ 10 ಮಹಿಳೆಯರ ಗುಂಪೊಂದು ಸ್ವಾವಲಂಬಿಯಾಗಿ ಉದ್ಯಮವೊಂದನ್ನು ಪ್ರಾರಂಭಿಸುವ ಮೂಲಕ ಅನೇಕರಿಗೆ ಸ್ಪೂರ್ತಿಯಾಗಿದೆ.
2020ರಲ್ಲಿ ಈ ಮಹಿಳೆಯರು 5,000 ರೂ. ಬಂಡವಾಳ ಹೂಡಿ ಉದ್ಯಮ ಆರಂಭಿಸಿದ್ದರು. ಇಂದು ಈ ಮಹಿಳೆಯರು ಸ್ಥಿರವಾದ ಆದಾಯದ ಮೂಲವನ್ನು ಕಂಡುಕೊಂಡಿದ್ದಾರೆ. ವಾರ್ಷಿಕವಾಗಿ ಈಗ ಅವರು 15 ಲಕ್ಷ ರೂಪಾಯಿ ವಹಿವಾಟು ನಡೆಸುತ್ತಿದ್ದಾರೆ. ಪ್ರತಿ ಮಹಿಳೆಯರು ತಿಂಗಳಿಗೆ 10,000 ರಿಂದ 15,000 ರೂ.ಗಳವರೆಗೆ ಆದಾಯ ಗಳಿಸುವ ಮೂಲಕ ಮನೆಯ ನಿರ್ವಹಣೆಯ ಜವಾಬ್ದಾರಿಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.
ಸ್ವ ಸಹಾಯ ಗುಂಪಿನ ಬೆಳವಣಿಗೆ: ಸ್ಥಳೀಯ ಸ್ವಸಹಾಯ ಗುಂಪಿನ ಬೆಂಬಲದೊಂದಿಗೆ ಮಹಿಳೆಯರು ಈ ಕೃತಕ ಹೂ ತಯಾರಿಕೆ ಉದ್ಯಮ ಪ್ರಾರಂಭಿಸಿದರು. 10 ಮಹಿಳೆಯರು ತಮ್ಮ ಮನೆಗಳಲ್ಲಿ ಮೂಲ ವಸ್ತುಗಳಿಂದ ಅಲಂಕಾರಿಕ ಹೂವುಗಳನ್ನು ತಯಾರಿಸುವ ಪ್ರಯೋಗವನ್ನು ನಡೆಸಿದರು. ಈ ಕುರಿತು ಮಾತನಾಡಿರುವ ಸಂಜು ಎಂಬುವವರು, ನನ್ನ ತಾಯಿ ಮತ್ತು ಇತರ ಕೆಲವು ಮಹಿಳೆಯರು ಈ ಕೆಲಸವನ್ನು ಸಣ್ಣ ಪ್ರಮಾಣದಲ್ಲಿ ಪ್ರಾರಂಭಿಸಿದೆವು, ಆದರೆ ಇಂದು ಈ ಉದ್ಯಮ ಗಮನಾರ್ಹವಾಗಿ ಬೆಳೆದಿದೆ. ಈಗ ಸುಮಾರು 10 ಮಹಿಳೆಯರು ಗುಂಪಿನಲ್ಲಿದ್ದು, ಎಲ್ಲರೂ ಚೆನ್ನಾಗಿ ಸಂಪಾದಿಸುತ್ತಿದ್ದಾರೆ ಎಂದರು.
ಮಹಿಳೆಯರು ಮನೆ ಒಳಾಂಗಣ ಅಲಂಕಾರಕ್ಕಾಗಿ , ಹಬ್ಬಗಳು ಮತ್ತು ಉಡುಗೊರೆ ವಸ್ತುಗಳಾಗಿ ಬಳಸುವ 50 ಕ್ಕೂ ಹೆಚ್ಚು ಬಗೆಯ ಕೃತಕ ಹೂವುಗಳನ್ನು ತಯಾರಿಸುತ್ತಿದ್ದಾರೆ. ಈ ಉತ್ಪನ್ನಗಳನ್ನು ಸರ್ಕಾರಿ ಮೇಳಗಳು, ಸ್ಥಳೀಯ ಮಾರುಕಟ್ಟೆಗಳು ಮತ್ತು ನೇರ ಆದೇಶಗಳ ಮೂಲಕ ಮಾರಾಟ ಮಾಡಲಾಗುತ್ತದೆ.
ಹೊಸ ಮಾರುಕಟ್ಟೆ ತಲುಪುತ್ತಿರುವ ಮಹಿಳೆಯರು: ಸ್ವಸಹಾಯ ಸಂಘವನ್ನು ನೋಂದಾಯಿಸಿದ ನಂತರ, ಮಹಿಳೆಯರು ಹರಿಯಾಣ ಸರ್ಕಾರದಿಂದ ಆಯೋಜಿಸಲಾಗುವ ಪ್ರಮುಖ ಮೇಳಗಳಲ್ಲಿ ಮಳಿಗೆಗಳನ್ನು ಸ್ಥಾಪಿಸಲು ಆಹ್ವಾನಗಳನ್ನು ಸ್ವೀಕರಿಸಲು ಪ್ರಾರಂಭಿಸಿದರು. ಬಳಿಕ ದೊಡ್ಡ ಸಭೆಗಳಲ್ಲಿ ಉತ್ಪನ್ನಗಳ ಮಾರಾಟ ಮಾಡಲು ದಾರಿ ಮಾಡಿಕೊಟ್ಟಿತು. ಅಂದಿನಿಂದ ಅವರು ಗೀತಾ ಜಯಂತಿ ಮಹೋತ್ಸವ, ಫರಿದಾಬಾದ್‌ನ ಸೂರಜ್‌ಕುಂಡ್ ಮೇಳ ಮತ್ತು ಯಮುನಾನಗರದ ಕಪಾಲ್ ಮೋಚನ್ ಮೇಳ ಸೇರಿದಂತೆ ಇತರ ಹಲವು ಸ್ಥಳಗಳಲ್ಲಿ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಿದ್ದಾರೆ.
ಸರ್ಕಾರಿ ಮೇಳಗಳಲ್ಲಿ ನಮಗೆ ಉಚಿತ ಮಳಿಗೆಗಳನ್ನು ಒದಗಿಸಲಾಗುತ್ತದೆ. ಉತ್ತಮ ಬೇಡಿಕೆಯಿದೆ. ಹೂವುಗಳು ನೈಜ ಎಂಬಂತೆ ಕಾಣುವಂತಿದ್ದು, ನಿರ್ವಹಣೆ ಅಗತ್ಯವಿಲ್ಲದ ದೀರ್ಘಾಯುಷ್ಯಕ್ಕಾಗಿ ಮೆಚ್ಚುಗೆ ಪಡೆಯುತ್ತಿವೆ ಎಂದು ಸಂಜು ತಿಳಿಸಿದ್ದಾರೆ. ಹೂವುಗಳ ಬೆಲೆ ವಿನ್ಯಾಸ ಮತ್ತು ಗಾತ್ರದ ಆಧಾರದ ಮೇಲೆ 25 ರಿಂದ 1,500 ರೂ.ಗಳವರೆಗೆ ಇರುತ್ತದೆ. ಹಲವು ಬಾರಿ ಗ್ರಾಹಕರ ಬೇಡಿಕೆಯನ್ನು ಆಧರಿಸಿ ಉತ್ಪಾದನೆ ಹೆಚ್ಚಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಕೌಶಲ್ಯ ಮತ್ತು ಸುಸ್ಥಿರತೆ: ತಮ್ಮ ಈ ಉದ್ಯಮದ ಕುರಿತು ಮಾತನಾಡಿರುವ ಮತ್ತೊಬ್ಬ ಸದಸ್ಯೆ ರೇಖಾ, ಉತ್ಪಾದನೆಗೆ ಬೇಕಾದ ಕೆಲವು ಕಚ್ಚಾ ವಸ್ತುಗಳನ್ನು ದೆಹಲಿಯಿಂದ ತರಿಸಲಾಗುತ್ತಿದೆ. ಆದರೂ ಹೆಚ್ಚಿನ ಜೋಡಣೆ ಕೆಲಸವನ್ನು ಸ್ಥಳೀಯವಾಗಿ ಮಾಡಲಾಗುತ್ತದೆ. ಹೆಚ್ಚಿನ ವಸ್ತುಗಳನ್ನು ನಾವೇ ತಯಾರಿಸುತ್ತೇವೆ. ಮಹಿಳೆಯರು ಕಸೂತಿ ಮತ್ತು ಹೊಲಿಗೆಯಲ್ಲಿ ನಿಪುಣರಾಗಿದ್ದು, ಅದು ಆಕರ್ಷಕ ಹೂವುಗಳನ್ನು ವಿನ್ಯಾಸಗೊಳಿಸಲು ಸಹಾಯ ಮಾಡುತ್ತದೆ ಎಂದಿದ್ದಾರೆ.
ಒಬ್ಬ ಮಹಿಳೆಯ ಕಲ್ಪನೆಯಿಂದ ಆರಂಭವಾದ ಈ ವ್ಯವಹಾರ ಈಗ ಹತ್ತು ಸದಸ್ಯರ ಸಾಮೂಹಿಕ ಸಂಘವಾಗಿ ಬೆಳೆದು, ಕೃತಕ ಹೂವುಗಳ ತಯಾರಿಕೆ ಮೂಲಕ ಜೀವನೋಪಾಯವನ್ನು ಸೃಷ್ಟಿಸುವುದರ ಜೊತೆಗೆ, ಗ್ರಾಮೀಣ ಸ್ವಾವಲಂಬನೆಯ ಮಾದರಿಯನ್ನು ಕಂಡುಕೊಂಡಿದ್ದಾರೆ. ಸ್ವ-ಸಹಾಯ ಗುಂಪುಗಳು ಕನಿಷ್ಠ ಆರ್ಥಿಕ ನೆರವು ಮತ್ತು ಸರಿಯಾದ ತರಬೇತಿಯೊಂದಿಗೆ ಮುನ್ನಡೆದರೆ ಮಹಿಳೆಯರನ್ನು ಹೇಗೆ ಸ್ವಾವಲಂಬಿಗಳಾಗಿ ಮಾಡಬಹುದು ಎಂಬುದನ್ನು ತೋರಿಸುತ್ತದೆ ಎಂಬುದಕ್ಕೆ ಪಕ್ಕಾ ಉದಾಹರಣೆಯಾಗಿದೆ.