ತಮಿಳು ನಾಡು :14 ವರ್ಷದ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಮಹಿಳೆಗೆ 54 ವರ್ಷ ಜೈಲು ಶಿಕ್ಷೆ!

ಏನಿದು ಪ್ರಕರಣ, ಹಿನ್ನೆಲೆ ಏನು? ದೇಡಿಯೂರಿನ ಲಲಿತಾ ತಿರುವರೂರು ಜಿಲ್ಲೆಯ ಎರವಾಂಚೇರಿ ಪ್ರದೇಶದ ಅಂಗನವಾಡಿ ಕೇಂದ್ರದಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು. 2021 ರಲ್ಲಿ ಈ ಮಹಿಳೆಗೆ ಆಗ ಹತ್ತನೇ ತರಗತಿಯಲ್ಲಿ ಓದುತ್ತಿದ್ದ ಹುಡುಗನೊಂದಿಗೆ ಸಂಬಂಧವಿತ್ತು. ಲಲಿತಾ ಅಕ್ಟೋಬರ್ 26, 2021 ರಂದು ವಿದ್ಯಾರ್ಥಿಯನ್ನು ಊಟಿಗೆ ಕರೆದೊಯ್ದು ತನ್ನೊಂದಿಗೆ ಲೈಂಗಿಕ ಸಂಪರ್ಕ ಹೊಂದಲು ಒತ್ತಾಯಿಸಿದ್ದಾರೆ ಎಂದು ಆರೋಪಿಸಲಾಗಿತ್ತು.
ನಾಪತ್ತೆ ದೂರು ನೀಡಿದ ಬಾಲಕನ ಪೋಷಕರು: ಈ ಸಂಬಂಧ ಬಾಲಕನ ಪೋಷಕರು ಎರವಾಂಚೇರಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಬಾಲಕನ ಪೋಷಕರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ತೀವ್ರ ತನಿಖೆ ನಡೆಸಿದ್ದರು. ಈ ವೇಳೆ, ಆರೋಪಿತೆ ಲಲಿತಾ ಬಾಲಕನನ್ನು ಊಟಿಯಿಂದ ಮತ್ತು ನಂತರ ವೇಲಾಂಕಣ್ಣಿಗೆ ಕರೆದೊಯ್ದಿದ್ದಾಳೆ ಎಂದು ತಿಳಿದುಬಂದಿತ್ತು . ಇಬ್ಬರೂ ಲಾಡ್ಜ್‌ನಲ್ಲಿ ತಂಗಿದ್ದರು ಎಂದು ಪೊಲೀಸರು ತಿಳಿಸಿದ್ದರು.
ತೀವ್ರ ಶೋಧದ ಬಳಿಕ ಬಾಲಕನನ್ನು ರಕ್ಷಿಸಿ, ಆರೋಪಿ ಬಂಧಿಸಿದ್ದ ಪೊಲೀಸರು: ತೀವ್ರ ಹುಡುಕಾಟದ ಬಳಿಕ 2021ರ ನವೆಂಬರ್ 4 ರಂದು ಲಲಿತಾಳನ್ನು ಪತ್ತೆ ಮಾಡಿದ ಪೊಲೀಸರು ಬಾಲಕನನ್ನು ರಕ್ಷಿಸಿದ್ದರು. ನಂತರ ಎರವಂಚೇರಿ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಲಲಿತಾಳನ್ನು ಬಂಧಿಸಿದ್ದರು. ಪ್ರಕರಣದ ವಿಚಾರಣೆಯನ್ನು ತಿರುವರೂರು ಫಾಸ್ಟ್ ಟ್ರ್ಯಾಕ್ ಮಹಿಳಾ ನ್ಯಾಯಾಲಯದಲ್ಲಿ ನಡೆಸಲಾಯಿತು. ಈ ಸಂದರ್ಭದಲ್ಲಿ ಲಲಿತಾ ಆ ಹುಡುಗನೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಳು ಎಂದು ಬೆಳಕಿಗೆ ಬಂದಿತ್ತು.
ಎರಡೂ ಕಡೆ ವಾದ - ಪ್ರತಿವಾದ ಆಲಿಸಿ ತೀರ್ಪು ನೀಡಿದ ಫಾಸ್ಟ್ ಟ್ರ್ಯಾಕ್ ಕೋರ್ಟ್: ಎರಡು ಕಡೆಯ ವಾದ - ಪ್ರತಿವಾದ ಆಲಿಸಿದ ನ್ಯಾಯಾಧೀಶ ಶರತ್‌ರಾಜ್ ತೀರ್ಪು ನೀಡಿದ್ದಾರೆ. ಪೋಕ್ಸೋ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಲಲಿತಾಗೆ 54 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 18,000 ರೂ. ದಂಡ ವಿಧಿಸಿ ಆದೇಶಿಸಿದ್ದಾರೆ. ಇದೇ ವೇಳೆ, ರಾಜ್ಯ ಸರ್ಕಾರವು ಬಾಲಕನಿಗೆ ಪರಿಹಾರವಾಗಿ 6 ಲಕ್ಷ ರೂ.ಗಳನ್ನು ಪಾವತಿಸುವಂತೆ ನ್ಯಾಯಾಧೀಶರು ಸರ್ಕಾರಕ್ಕೆ ಸೂಚಿಸಿದ್ದಾರೆ.