
ಬನ್ನೇರುಘಟ್ಟ :ಪ್ರೀತಿಸಿ ಮದುವೆಯಾಗಿ ಬೀದಿಗೆ ಬಿದ್ದ ಪ್ರೇಮಿಗಳು; ಪ್ರೀತಿ ಸಂಕೇತವಾಗಿದ್ದ ತ್ರಿವಳಿ ಶಿಶು ತಾಯಿ ಗರ್ಭದಲ್ಲೇ ಸಾವು.!!

ಬನ್ನೇರುಘಟ್ಟ :ಪ್ರೀತಿಸಿ ಮದುವೆಯಾಗಿದ್ದಕ್ಕಾಗಿ ಪೋಷಕರಿಂದ ನಿರ್ಲಕ್ಷ್ಯಕ್ಕೊಳಗಾದ ಜೋಡಿ ಬೀದಿಗೆ ಬಂದಿದ್ದರು. ಗಾರೆ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದ ಜೋಡಿಗೆ, ತಮ್ಮ ಪ್ರೀತಿಯ ಸಂಕೇತವಾಗಿದ್ದ ಗರ್ಭದಲ್ಲಿದ್ದ ತ್ರಿವಳಿ ಕಂದಮ್ಮಗಳಿಗೆ ಸಮರ್ಪಕ ತಪಾಸಣೆ ಹಾಗೂ ಚಿಕಿತ್ಸೆ ದೊರೆಯದೆ ತಾಯಿ ಗರ್ಭದಲ್ಲೇ ಸಾವನ್ನಪ್ಪಿದ ಘಟನೆ ಆನೇಕಲ್ ತಾಲೂಕಿನ ಬನ್ನೇರುಘಟ್ಟ ಗೊಲ್ಲಹಳ್ಳಿಯಲ್ಲಿ ಬೆಳಕಿಗೆ ಬಂದಿದೆ.
ಬನ್ನೇರುಘಟ್ಟ ಗ್ರಾಮದ ಆನಂದ್ ಮತ್ತು ಮಂಜುಳಾ ದಂಪತಿ ಸುಮಾರು 5 ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದರು. ಈ ದಂಪತಿಗೆ ಈಗಾಗಲೇ ಮೂರು ವರ್ಷದ ಹೆಣ್ಣು ಮಗು ಇದೆ. ಇತ್ತೀಚೆಗೆ ಎರಡನೇ ಬಾರಿ ಗರ್ಭಿಣಿಯಾಗಿದ್ದ ಮಂಜುಳಾ, ತ್ರಿವಳಿ ಶಿಶುಗಳನ್ನು ಹೊತ್ತಿದ್ದರು. ಆನಂದ್ ಮತ್ತು ಮಂಜುಳಾ ಇಬ್ಬರೂ ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಪ್ರೀತಿಸಿ ಮದುವೆಯಾಗಿದ್ದ ಕಾರಣ ಕುಟುಂಬದವರು ಇವರನ್ನು ನಿರ್ಲಕ್ಷಿಸಿದ್ದರು. ಆನಂದ್ ಅವರ ಸಹೋದರನೊಂದಿಗಿನ ಕಲಹದಿಂದಾಗಿ ಮನೆ ಬಿಟ್ಟು ಬಂದಿದ್ದ ಈ ದಂಪತಿಗೆ ಸೂಕ್ತ ಆಸರೆಯೂ ಇರಲಿಲ್ಲ.
ಆರ್ಥಿಕವಾಗಿ ತೀವ್ರ ಸಂಕಷ್ಟದಲ್ಲಿದ್ದ ಕಾರಣ, ಮಂಜುಳಾ ಅವರಿಗೆ ನಿಯಮಿತವಾಗಿ ವೈದ್ಯಕೀಯ ತಪಾಸಣೆ ಮಾಡಿಸಲು ಸಾಧ್ಯವಾಗಿರಲಿಲ್ಲ. ಏಪ್ರಿಲ್ ತಿಂಗಳಲ್ಲಿ ತಾಯಿ ಕಾರ್ಡ್ ಮಾಡಿಸಿದ್ದರೂ ಸಹ, ನಂತರದ ದಿನಗಳಲ್ಲಿ ತಪಾಸಣೆ ಮಾಡಿಸಿಕೊಂಡಿರಲಿಲ್ಲ. ಹಲವಾರು ಬಾರಿ ಆಶಾ ಕಾರ್ಯಕರ್ತೆಯರು ತಪಾಸಣೆಗಾಗಿ ಕರೆಯುತ್ತಿದ್ದರೂ, ದಂಪತಿ ವೈದ್ಯಕೀಯ ಆರೈಕೆಯನ್ನು ನಿರ್ಲಕ್ಷಿಸಿದ್ದರು.
ಕಳೆದ ಶನಿವಾರ ಮಂಜುಳಾ ಅವರಿಗೆ ಇದ್ದಕ್ಕಿದ್ದಂತೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಕೆಲವೇ ಕ್ಷಣಗಳಲ್ಲಿ ಒಂದು ಗಂಡು ಮಗು ಜನಿಸಿದೆ, ಆದರೆ ಅದು ಮೊದಲೇ ಸಾವನ್ನಪ್ಪಿತ್ತು. ಕೂಡಲೇ ಸ್ಥಳೀಯ ವೈದ್ಯರನ್ನು ಸಂಪರ್ಕಿಸಿದಾಗ, ಅವರು ಹೆಚ್ಚಿನ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ತೆರಳಲು ಸೂಚಿಸಿದ್ದಾರೆ. ದಂಪತಿ ಜಿಗಣಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ನಂತರ ಆನೇಕಲ್ ತಾಲ್ಲೂಕು ಆಸ್ಪತ್ರೆಗೆ ತೆರಳಿದಾಗ ವೈದ್ಯರು ಹೊಟ್ಟೆಯಲ್ಲಿ ಇನ್ನೂ ಎರಡು ಶಿಶುಗಳು ಸಾವನ್ನಪ್ಪಿರುವುದನ್ನು ದೃಢಪಡಿಸಿದರು. ನಂತರ ಆ ಎರಡು ಶಿಶುಗಳನ್ನು ಹೊರತೆಗೆಯಲಾಯಿತು. ಸದ್ಯ ತಾಯಿ ಮಂಜುಳಾ ಆರೋಗ್ಯ ಸ್ಥಿರವಾಗಿದೆ.