
ಕೋಲ್ಕತ್ತಾ: ರಾತ್ರಿ ಇಡೀ ಸುರಿದ ಭಾರೀ ಮಳೆ, ಪ್ರವಾಹಕ್ಕೆ ಸಿಲುಕಿ ಐವರು ಮೃತ್ಯು..
Monday, September 22, 2025

ಕೋಲ್ಕತ್ತಾ : ಸೋಮವಾರ ರಾತ್ರಿಯಿಡೀ ಸುರಿದ ಭಾರೀ ಮಳೆಯಿಂದಾಗಿ ಕೋಲ್ಕತ್ತಾದ ಹಲವು ಕಡೆ ನೀರು ನಿಂತು ಪ್ರವಾಹ ಪರಿಸ್ಥಿತಿ ತಲೆದೋರಿದ್ದು ಐದು ಜನ ಮೃತಪಟ್ಟಿದ್ದಾರೆ. ಕೋಲ್ಕತ್ತಾದ ಮಧ್ಯ ಹಾಗೂ ದಕ್ಷಿಣ ಭಾಗಗಳಾದ ಬೆನಿಯಾಪುಕುರ್, ಕಾಳಿಕಾಪುರ, ನೇತಾಜಿ ನಗರ, ಗರಿಯಾಹತ್ ಮತ್ತು ಇಕ್ಬಾಲ್‌ಪುರದಲ್ಲಿ ನಡೆದಿರುವ ಮಳೆ ಸಂಬಂಧಿತ ಪ್ರತ್ಯೇಕ ಘಟನೆಗಳಲ್ಲಿ ಸಾವುಗಳು ಸಂಭವಿಸಿವೆ.
ಭಾರಿ ಮಳೆಯಿಂದ ರಸ್ತೆಗಳು ಜಲಾವೃತಗೊಂಡಿದ್ದು ವಾಹನ ಸಂಚಾರಕ್ಕೂ ಅಡ್ಡಿಯಾಗಿದೆ. ರೈಲು ಮತ್ತು ಮೆಟ್ರೋ ಸೇವೆಗಳಿಗೂ ತೊಂದರೆಯಾಗಿದ್ದು, ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಮನೆಗಳಿಗೆ ನುಗ್ಗಿ ಅಪಾರ ಆಸ್ತಿಪಾಸ್ತಿಗೆ ಹಾನಿಯಾಗಿದೆ. ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಷನ್‌ನ ಮಾಹಿತಿಯ ಪ್ರಕಾರ, ಗರಿಯಾ ಕಾಮದಹರಿಯಲ್ಲಿ ಕೆಲವೇ ಗಂಟೆಗಳಲ್ಲಿ 332 ಮಿ.ಮೀ. ಮಳೆಯಾಗಿದ., ಜೋಧ್‌ಪುರ ಪಾರ್ಕ್‌ನಲ್ಲಿ 285 ಮಿ.ಮೀ., ಕಾಳಿಘಾಟ್‌ನಲ್ಲಿ 280 ಮಿ.ಮೀ., ಟಾಪ್ಸಿಯಾದಲ್ಲಿ 275 ಮಿ.ಮೀ. ಮತ್ತು ಬ್ಯಾಲಿಗಂಗೆಯಲ್ಲಿ 264 ಮಿ.ಮೀ. ಮಳೆಯಾಗಿದೆ.
ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶದ ಪರಿಣಾಮವಾಗಿ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಸರಾ ಮಹೋತ್ಸವ, ದುರ್ಗಾಪೂಜೆಯ ಸಂಭ್ರಮಕ್ಕೆ ಕೆಲವು ದಿನಗಳ ಮೊದಲು ಕೋಲ್ಕತ್ತಾದಲ್ಲಿ ಭಾರೀ ಮಳೆಯಾಗಿದೆ. ದುರ್ಗಾಪೂಜೆಯ ಸಂದರ್ಭ ಅಪಾರ ಜನರನ್ನು ಆಕರ್ಷಿಸುವ ಜಾಯ್ ನಗರದ ಪೂಜಾ ಪೆಂಡಾಲ್‌ಗಳು ಬಹುತೇಕ ಸಿದ್ಧವಾಗಿದ್ದು, ಮಳೆಯಿಂದ ಅದನ್ನು ರಕ್ಷಿಸಿಕೊಳ್ಳುವುದು ಸವಾಲಾಗಿ ಪರಿಣಮಿಸಿದೆ.