ನವದೆಹಲಿ :ವಿಮಾನದ ಲ್ಯಾಂಡಿಂಗ್ ಗೇರ್ನಲ್ಲಿ ಕುಳಿತು ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅಘ್ವಾನಿಸ್ತಾನದ 13ರ ಬಾಲಕ..!!
ನವದೆಹಲಿ: ವಿಮಾನದ ಮೇಲಿದ್ದ ಕುತೂಹಲದಿಂದ 13 ವರ್ಷದ ಬಾಲಕನೊಬ್ಬ ವಿಮಾನದ ಲ್ಯಾಂಡಿಂಗ್ ಗೇರ್ನಲ್ಲಿ ಅಡಗಿ ಕುಳಿತುಕೊಂಡು ದೆಹಲಿಗೆ ಬಂದಿಳಿದಿರುವ ವಿಚಿತ್ರ ಘಟನೆ ವರದಿಯಾಗಿದೆ. ಎರಡು ಗಂಟೆಗಳ ಈ ವಿಮಾನ ಪ್ರಯಾಣದಲ್ಲಿ ಬಾಲಕ ವಿಮಾನ ಕೆಳಗಿಳಿಯುವಾಗ ತೆರೆಯುವ ಚಕ್ರದ ಮಧ್ಯೆದಲ್ಲಿಯೇ ಕುಳಿತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೆಎಎಂ ಏರ್ಲೈನ್ ವಿಮಾನ ಆರ್ಕ್ಯೂ- 4401 ಅಫ್ಘಾನ್ನ ಕಾಬೂಲ್ನಿಂದ ಹೊರಟು ಭಾನುವಾರ 11ರ ಸುಮಾರಿಗೆ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ವಿಮಾನದಲ್ಲಿ ಪ್ರಯಾಣಿಕರು ಇಳಿದ ಬಳಿಕ ಬಾಲಕನೊಬ್ಬ ಅದರ ಲ್ಯಾಂಡಿಂಗ್ ಗೇರ್ ಕಂಪಾರ್ಟ್ಮೆಂಟ್ನಿಂದ ಇಳಿದಿದ್ದು, ದೆಹಲಿಯಲ್ಲಿ ವಿಮಾನ ಇಳಿದಾಗ ಬಾಲಕ ವಿಮಾನದ ಆಸುಪಾಸಿನಲ್ಲಿ ಓಡಾಡುತ್ತಿರುವುದು ಕಂಡು ಬಂದಿದೆ.
ಬಾಲಕನ ಚಲನವನಲನಗಳ ಬಗ್ಗೆ ಸಂಶಯ ಮೂಡಿಸಿದ್ದು, ಅಧಿಕಾರಿಗಳ ಗಮನಕ್ಕೆ ಬಂದಿದೆ. ತಕ್ಷಣಕ್ಕೆ ವಿಮಾನಯಾನ ಸಿಬ್ಬಂದಿ ಬಾಲಕನನ್ನು ಬಂಧಿಸಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿಗೆ ಹಸ್ತಾಂತರಿಸಿದ್ದಾರೆ. ಅವರು ಆತನನ್ನು ವಿಚಾರಣೆಗಾಗಿ ವಿಮಾನ ನಿಲ್ದಾಣದ ಟರ್ಮಿನಲ್ 3ಕ್ಕೆ ಕರೆತಂದು ಪ್ರಶ್ನಿಸಿದ್ದಾರೆ. ಆಗ ಬಾಲಕ ಲ್ಯಾಂಡಿಂಗ್ ಗೇರ್ ವಿಭಾಗದೊಳಗೆ ಹೇಗೋ ಪ್ರವೇಶಿಸಿದ್ದು, ಅಲ್ಲಿಯೇ ಕುಳಿತು ಪ್ರಯಾಣ ಮಾಡಿರುವುದು ಬೆಳಕಿಗೆ ಬಂದಿದೆ.
ಈ ಬಾಲಕ ಕುಂದುಜ್ ನಗರದ ಮೂಲದವನಾಗಿದ್ದು, ಅಫ್ಘಾನಿಸ್ತಾನದ ಪ್ರಜೆ ಎಂಬುದಾಗಿ ತಿಳಿಸಿದ್ದಾನೆ. ಅಲ್ಲದೇ, ವಿಮಾನದ ಬಗ್ಗೆ ಆಸಕ್ತಿ ಹೊಂದಿದ್ದೆ. ಇದರಿಂದಾಗಿ ಹೇಗೋ ಕಾಬೂಲ್ ವಿಮಾನ ನಿಲ್ದಾಣದ ಒಳಗೆ ಯಾರಿಗೂ ತಿಳಿಯದಂತೆ ನುಸುಳಿದ್ದು, ಬಳಿಕ ವಿಮಾನದ ಲ್ಯಾಂಡಿಂಗ್ ಗೇರ್ ಕಂಪಾರ್ಟ್ಮೆಂಟ್ ಪ್ರವೇಶಿಸಿದ್ದೆ. ಈ ಘಟನೆಯ ಹಿಂದೆ ಯಾವುದೇ ಉದ್ದೇಶವಿರಲಿಲ್ಲ. ಕೇವಲ ಕುತೂಹಲವಿತ್ತು ಎಂದು ದೃಢಪಡಿಸಿದ್ದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆ ಬೆನ್ನಲ್ಲೇ ಬಾಲಕನನ್ನು ಅದೇ ವಿಮಾನದಲ್ಲಿ ಕಾಬೂಲ್ಗೆ ಕಳುಹಿಸಲಾಗಿದೆ. ಕೆಎಎಂ ಏರ್‌ಲೈನ್‌ನ ಭದ್ರತಾ ಅಧಿಕಾರಿಗಳು ಲ್ಯಾಂಡಿಂಗ್ ಗೇರ್ ಕಂಪಾರ್ಟ್‌ಮೆಂಟ್‌ನ ಭದ್ರತಾ ವ್ಯವಸ್ಥೆಯನ್ನು ಪರಿಶೀಲನೆ ನಡೆಸಿದಾಗ ಈ ಹುಡುಗ ತಂದಿದ್ದ ಸಣ್ಣ ಕೆಂಪು ಬಣ್ಣದ ಸ್ಪೀಕರ್ ಕಂಡು ಬಂದಿದೆ.
ಇದಾದ ಬಳಿಕ ವಿಮಾನದ ಭದ್ರತಾ ಪರಿಶೀಲನೆ ನಡೆಸಲಾಗಿದೆ. ಸಂಪೂರ್ಣ ವಿಮಾನ ತಪಾಸಣೆ ಮತ್ತು ವಿಧ್ವಂಸಕ ಕೃತ್ಯ ವಿರೋಧಿ ಪರಿಶೀಲನೆಗಳ ನಂತರ ವಿಮಾನವನ್ನು ಸುರಕ್ಷಿತ ಎಂದು ಘೋಷಿಸಲಾಗಿದ್ದು. ಮಧ್ಯಾಹ್ನ 12.30ಕ್ಕೆ ವಿಮಾನ ದೆಹಲಿ ವಿಮಾನ ನಿಲ್ದಾಣದಿಂದ ಕಾಬೂಲ್ಗೆ ತೆರಳಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.