
ಜೈಪುರ :ಚಿತಾಭಸ್ಮ ವಿಸರ್ಜಿಸಿ ಮರಳುತ್ತಿದ್ದಾಗ ಭೀಕರ ರಸ್ತೆ ಅಪಘಾತ: ಎರಡು ಕುಟುಂಬಗಳ 7 ಮಂದಿ ಸಾವು..!!

ಜೈಪುರ: ಮೃತಪಟ್ಟ ಸಂಬಂಧಿಯೊಬ್ಬರ ಅಂತ್ಯಕ್ರಿಯೆ ನಡೆಸಿದ ನಂತರ ಹರಿದ್ವಾರದಿಂದ ಹಿಂತಿರುಗುತ್ತಿದ್ದಾಗ, ಜೈಪುರದ ರಿಂಗ್ ರಸ್ತೆಯಿಂದ ನೀರು ತುಂಬಿದ ಅಂಡರ್‌ಪಾಸ್‌ಗೆ ಕಾರೊಂದು ಉರುಳಿ ಬಿದ್ದು ಎರಡು ಕುಟುಂಬಗಳ ಏಳು ಮಂದಿ ಸಾವನ್ನಪ್ಪಿದ ಘಟನೆ ಕಳೆದ ರಾತ್ರಿ ನಡೆದಿದೆ.
ತಡರಾತ್ರಿ ಪ್ರಹ್ಲಾದಪುರ ಬಳಿಯ ಶಿವದಾಸಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ಘಟಿಸಿದ್ದು, ವೇಗವಾಗಿ ಬಂದ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು, ನಂತರ ರಿಂಗ್ ರಸ್ತೆಯಿಂದ ಸುಮಾರು 16 ಅಡಿ ಕೆಳಗೆ ಬಿದ್ದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಬೆಳಗ್ಗೆ ನಜ್ಜುಗುಜ್ಜಾದ ವಾಹನವನ್ನು ಸ್ಥಳೀಯರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ, ಕ್ರೇನ್ ಸಹಾಯದಿಂದ ಕಾರನ್ನು ಹೊರತೆಗೆಯಲಾಗಿದೆ.
"ಕಾರಿನಲ್ಲಿದ್ದ ಏಳು ಪ್ರಯಾಣಿಕರು ಮೃತಪಟ್ಟಿದ್ದಾರೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ" ಎಂದು ಶಿವದಾಸಪುರ ಎಸ್‌ಎಚ್‌ಒ ಸುರೇಂದ್ರ ಸೈನಿ ಮಾಹಿತಿ ನೀಡಿದರು.
ಸಂಗನೇರ್ ವಾಟಿಕಾ ನಿವಾಸಿ ರಾಮರಾಜ್ ವೈಷ್ಣವ್, ಇವರ ಪತ್ನಿ ಮಧು, ಮಗ ರುದ್ರ, ಅಜ್ಮೀರ್‌ನ ಕೇಕ್ರಿಯ ರಾಮರಾಜ್ ಅವರ ಸಂಬಂಧಿ ಕಾಲೂರಮ್, ಇವರ ಪತ್ನಿ ಸೀಮಾ, ಮಗ ರೋಹಿತ್ ಮತ್ತು ಗಜರಾಜ್ ಮೃತಪಟ್ಟಿದ್ದಾರೆ.
ಟ್ಯಾಕ್ಸಿ ಚಾಲಕರಾಗಿ ಕೆಲಸ ಮಾಡುತ್ತಿದ್ದ ರಾಮರಾಜ್ ಎಂಬವರು ಮೃತಪಟ್ಟ ಸಂಬಂಧಿಯೊಬ್ಬರ ಚಿತಾಭಸ್ಮ ವಿಸರ್ಜನೆಗೆ ಕಾಲುರಾಮ್ ಮತ್ತು ಅವರ ಕುಟುಂಬದವರೊಂದಿಗೆ ಹರಿದ್ವಾರಕ್ಕೆ ಹೋಗಿದ್ದರು. ಕ್ರಿಯೆ ಮುಗಿದ ನಂತರ ಜೈಪುರಕ್ಕೆ ಹಿಂತಿರುಗುತ್ತಿದ್ದಾಗ ಅಪಘಾತ ಸಂಭವಿಸಿದೆ" ಎಂದು ಪೊಲೀಸರು ತಿಳಿಸಿದ್ದಾರೆ.
ಹಾಸನದಲ್ಲಿ ಭೀಕರ ರಸ್ತೆ ಅಪಘಾತ: ಹಾಸನ ತಾಲೂಕಿನ ಮೊಸಳೆ ಹೊಸಹಳ್ಳಿ ಬಳಿ ಗಣೇಶ ನಿಮಜ್ಜನ ಮೆರವಣಿಗೆ ವೇಳೆ ಇತ್ತೀಚಿಗೆ ಭೀಕರ ಅಪಘಾತ ಸಂಭವಿಸಿತ್ತು. ಮೆರವಣಿಗೆಯ ಮೇಲೆ ಕ್ಯಾಂಟರ್ ನುಗ್ಗಿ 9 ಜನ ಸಾವನ್ನಪ್ಪಿ, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಹಾಸನದಿಂದ ಹೊಳೆನರಸೀಪುರ ಮಾರ್ಗವಾಗಿ ಹೋಗುತ್ತಿದ್ದ ಮಿನಿ ಕ್ಯಾಂಟರ್, ಗಣೇಶ ನಿಮಜ್ಜನೆಗೂ ಮುನ್ನ ನಡೆಯುತ್ತಿದ್ದ ಮೆರವಣಿಗೆ ಮೇಲೆ ನುಗ್ಗಿತ್ತು.
ಹಳ್ಳಕ್ಕೆ ಬಿದ್ದ ಬಸ್, ಅದೃಷ್ಟವಶಾತ್ ತಪ್ಪಿದ ಅನಾಹುತ: ಚಾಲಕನ ನಿಯಂತ್ರಣ ತಪ್ಪಿ ಪ್ರಯಾಣಿಕರಿದ್ದ ಖಾಸಗಿ ಬಸ್ ಸೇತುವೆ ಮೇಲಿಂದ ಹಳ್ಳಕ್ಕೆ ಬಿದ್ದಿರುವ ಘಟನೆ ವಿಜಯನಗರ ಜಿಲ್ಲೆ ಹರಪ್ಪನಹಳ್ಳಿ ತಾಲೂಕಿನ ಅಣಜಿಗೆರೆ ಗ್ರಾಮದ ಬಳಿ ಸೆಪ್ಟೆಂಬರ್ 2, 2025ರಂದು ನಡೆದಿತ್ತು.
ಅಪಘಾತದಲ್ಲಿ 20 ಪ್ರಯಾಣಿಕರಿಗೆ ಗಾಯವಾಗಿದ್ದು, ಐದಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿರಲಿಲ್ಲ. ದಾವಣಗೆರೆಯಿಂದ ಅರಸೀಕೆರೆ ಕಡೆ ಖಾಸಗಿ ಬಸ್ ಹೊರಟಿದ್ದ ವೇಳೆ ಅವಘಡ ಸಂಭವಿಸಿತ್ತು.