ದಾವಣಗೆರೆ :ಕುಟುಂಬ ತೊರೆದು ರಂಗನಾಥಸ್ವಾಮಿ ಬೆಟ್ಟ ಸೇರಿ 30 ವರ್ಷ, ಗುಡ್ಡದಲ್ಲಿ ನೆಲೆಸಿ ವನಸಿರಿಗಾಗಿ ಜೀವನವನ್ನೇ ಮುಡಿಪಿಟ್ಟ ಶಾಮಣ್ಣ..!!
ದಾವಣಗೆರೆ: ಶಾಮಣ್ಣ ಶ್ರೀಲಕ್ಷ್ಮಿ ಕೊಣಚಕಲ್ ಮತ್ತು ಶ್ರೀರಂಗನಾಥ ಸ್ವಾಮಿಯ ಪರಮಭಕ್ತರು. ಇವರು ಕುಟುಂಬ ತೊರೆದು ರಂಗನಾಥಸ್ವಾಮಿ ಬೆಟ್ಟ ಸೇರಿ ಬರೋಬ್ಬರಿ 30 ವರ್ಷಗಳಾಗಿವೆ. ಗುಡ್ಡದಲ್ಲಿ ನೆಲೆಸಿ ವನಸಿರಿಗಾಗಿ ಜೀವನವನ್ನೇ ಒತ್ತೆ ಇಟ್ಟಿರುವ ಶಾಮಣ್ಣ ನೂರಕ್ಕೂ ಹೆಚ್ಚು ಮರಗಳನ್ನು ಬೆಳೆಸಿದ್ದಾರೆ. ಇಷ್ಟೇ ಅಲ್ಲದೆ ಭಕ್ತರು ದೇವಾಲಯಕ್ಕೆ ಬರಲು ತಮ್ಮ ಕೈಯಾರೆ ಕಲ್ಲುಕಟ್ಟಿ ರಸ್ತೆ ನಿರ್ಮಿಸಿದ್ದಾರೆ. ಗಿಡಮರಗಳನ್ನು ಬೆಳೆಸಿ ಪ್ರಾಣಿ ಪಕ್ಷಿಗಳಿಗೆ ಆಸರೆಯಾಗಿದ್ದಾರೆ.
ಇನ್ನು ಹತ್ತಕ್ಕೂ ಹೆಚ್ಚು ವಿವಿಧ ಜಾತಿಯ ಗಿಡಮರಗಳಿಗೆ ಕೈಯಾರೆ ನೀರೆರೆದು ಮಕ್ಕಳಂತೆ ಬೆಳೆಸಿದ್ದಾರೆ. ಶಾಮಣ್ಣ ಅವರು ಮನೆ ತೊರೆದು ಬರೋಬ್ಬರಿ 30 ವರ್ಷಗಳೇ ಉರುಳಿದ್ದು, ವನಸಿರಿಯೇ ತನ್ನ ಕುಟುಂಬ ಎಂಬುದನ್ನು ಮನಗಂಡು ರಂಗನಾಥ ಸ್ವಾಮಿ ಗುಡ್ಡದಲ್ಲಿ ಬದುಕು ಸಾಗಿಸುತ್ತಿದ್ದಾರೆ. ದೇವಾಲಯದ ಪ್ರಸಾದ ಸೇವಿಸುತ್ತಾ ಅಲ್ಲೇ ನೆಲೆಸಿದ್ದಾರೆ.
ರಂಗನಾಥಸ್ವಾಮಿ ಗುಡ್ಡ ಸೇರಿ 30 ವರ್ಷ: ಹೌದು, ಶಾಮಣ್ಣ ಮೂಲತಃ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಹಿರೇಅರಕೆರೆ ಗ್ರಾಮದ ನಿವಾಸಿ. ಅವರು ತಮ್ಮ 40 ವಯಸ್ಸಿಗೆ ಜಗಳೂರು ತಾಲೂಕಿನ ಕೊರಟಿಕೆರೆ ಗ್ರಾಮದ ಕೂಗಳತೆಯಲ್ಲಿ ಇರುವ ಕೊಣಚಕಲ್ ರಂಗನಾಥ ಸ್ವಾಮಿ ಬೆಟ್ಟ ಸೇರಿದರು.
ಅಂದಿನಿಂದ ಇಲ್ಲಿಯವರಗೆ ಅಂದರೆ ಬರೋಬ್ಬರಿ 30 ವರ್ಷ ಈ ಬೆಟ್ಟದಲ್ಲೇ ಗಿಡ ಮರಗಳನ್ನು ಬೆಳೆಸುತ್ತಾ ಬದುಕು ಸಾಗಿಸುತ್ತಿದ್ದಾರೆ. ಮತ್ತೆ ಮನೆಯತ್ತ ಮುಖ ಮಾಡದ ಇವರು ವಿರಕ್ತನಾಗಿ ಮರಗಳನ್ನು ಬೆಳೆಸುತ್ತಿದ್ದಾರೆ. ಬೇವು, ಮಾವು, ಹಲಸು ಸೇರಿದಂತೆ ಜಗಳೂರು ಸೀಮೆಯ ಪರಿಸರಕ್ಕೆ ಹೊಂದಿಕೊಳ್ಳುವ ಗಿಡಗಳನ್ನು ನೆಟ್ಟು ನೀರೆರೆಯುತ್ತಿದ್ದಾರೆ. ಶಾಮಣ್ಣ ಅವರಿಗೆ ಈಗ 70 ವರ್ಷ ವಯಸ್ಸಾಗಿದೆ. ವಯಸ್ಸು ನನಗೆ ಆಗಿಲ್ಲ, ನನ್ನ ದೇಹಕ್ಕೆ ಆಗಿದೆ ಎನ್ನುತ್ತಾರೆ ಈ ಪರಿಸರ ಪ್ರೇಮಿ.
ವಿರಕ್ತರಾಗಿರುವ ಶಾಮಣ್ಣನವರು ರಂಗನಾಥ ಸ್ವಾಮಿ ಬೆಟ್ಟದಲ್ಲಿ ಧಾರ್ಮಿಕವಾಗಿ ನೆಲೆನಿಂತು, ಕಾವಿ ತೊಟ್ಟು ಕಾಡು ಬೆಳೆಸುತ್ತಿದ್ದಾರೆ. ಇಲ್ಲಿ ಪಾಳೇಗಾರರಿಂದ ನಿರ್ಮಾಣವಾದ ಕಲ್ಯಾಣಿ, 17ನೇ ಶತಮಾನದ ಅನುಭವಾಮೃತ ಕವಿ ಮಹಲಿಂಗರಂಗರ ಸಮಾಧಿ, ಕೊಣಚಕಲ್ ರಂಗನಾಥಸ್ವಾಮಿ ದೇವಾಲಯಕ್ಕೆ ಜಿಲ್ಲೆ ಮತ್ತು ಹೊರ ಜಿಲ್ಲೆಗಳ ಸಾವಿರಾರು ಭಕ್ತರು ಬಂದು ಹೋಗುವ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿದೆ. ಇಲ್ಲಿ ಪರಿಸರ ಬೆಳೆಸಲು ಶಾಮಣ್ಣ ಅವರು ಟೊಂಕ ಕಟ್ಟಿ ನಿಂತಿದ್ದಾರೆ.
ಇನ್ನು, ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕನವರಷ್ಟೇ ಪರಿಸರ ಕಾಳಜಿಯ ದ್ಯೋತಕವಾಗಿರುವ ಶಾಮಣ್ಣ ಕಳೆದ ಮೂರು ದಶಕದಿಂದ ಸಾಲು ಸಾಲು ಮರಗಳನ್ನು ನೆಟ್ಟು ನೀರೆರೆಯುವ ಮೂಲಕ ಪ್ರಾಣಿ - ಪಕ್ಷಿಗಳಿಗೆ ಆಶ್ರಯ ಕೊಟ್ಟು 'ವನ ಶಾಮ'ನಾಗಿ ಸದ್ದಿಲ್ಲದೇ ಸೇವೆ ಮಾಡುತ್ತಿದ್ದಾರೆ.ಹತ್ತಕ್ಕೂ ಹೆಚ್ಚು ಜಾತಿಯ ಮರಗಳನ್ನು ಬೆಳೆಸಿರುವ ಶಾಮಣ್ಣ : ಶಾಮಣ್ಣ ಅವರು ಹತ್ತಕ್ಕೂ ಹೆಚ್ಚು ಜಾತಿಯ ಮರಗಳನ್ನು ಬೆಳೆಸಿದ್ದಾರೆ. ಅತ್ತಿ ಮರ, ಹುಣಸೆ ಮರ, ಬೇವಿನ ಮರ, ಬಿಲ್ವಪತ್ರೆ, ಅಶ್ವತ್ಥ ಮರ, ನೀಲಿಗಿರಿ ಮರ, ನೇರಳೆ ಮರ, ಬೇವು, ಮಾವು, ಹಲಸು ಸೇರಿದಂತೆ ಜಗಳೂರು ಸೀಮೆಯ ಪರಿಸರಕ್ಕೆ ಹೊಂದಿಕೊಳ್ಳುವ ಜಾತಿಯ ಗಿಡಗಳನ್ನು ನೆಟ್ಟು ಪೋಷಿಸಿ ಬೆಳೆಸಿದ್ದಾರೆ.
ಅವರು ಪ್ರತಿಯೊಂದು ಗಿಡ ಮರಗಳಿಗೆ ಬಿಂದಿಗೆಯಲ್ಲಿ ನೀರೆರೆಯುತ್ತಿದ್ದಾರೆ. ಈ ಭಾಗದಲ್ಲಿ ಹೆಚ್ಚು ಕರಡಿಗಳಿದ್ದು, ಅವುಗಳ ಆಹಾರಕ್ಕಾಗಿ ಹಲಸು, ಮಾವು ಮರಗಳನ್ನು ಬೆಳೆಸಿದ್ದಾರೆ. ಈ ಮರ ಗಿಡಗಳು ಪ್ರಾಣಿ ಪಕ್ಷಿಗಳಿಗೆ ಆಶ್ರಯ ತಾಣಗಳೂ ಆಗಿದ್ದು, ಇಡೀ ರಂಗನಾಥ ಸ್ವಾಮಿ ಬೆಟ್ಟ ಹಸಿರಿನಿಂದ ಕಂಗೊಳಿಸುತ್ತಿದೆ.
ಭಕ್ತರಿಗಾಗಿ ಕಲ್ಲು ಕಟ್ಟಿ ದಾರಿ ಮಾಡಿದ್ದ ಶಾಮಣ್ಣ: 30 ವರ್ಷಗಳ ಹಿಂದೆ ಶಾಮಣ್ಣ ಬೆಟ್ಟಕ್ಕೆ ಬಂದಾಗ ದಾರಿ ಇರಲಿಲ್ಲ, ನಂತರ ಶಾಮಣ್ಣ ಅವರು ತಮ್ಮ ಕೈಯಾರೆ ಕಲ್ಲು ಕಟ್ಟಿ ದೇವಾಲಯಕ್ಕೆ ದಾರಿ ಮಾಡಿದ್ದರು. ಭಕ್ತರು ಇಂದಿಗೂ ಅದೇ ದಾರಿಯಲ್ಲೇ ಓಡಾಡುತ್ತಿದ್ದು, ಶಾಮಣ್ಣನವರನ್ನು ನೆನೆಯುತ್ತಾರೆ. ಅಲ್ಲದೆ ದೇವಾಲಯಕ್ಕೆ ಬರುವ ಭಕ್ತರು ಬೆಟ್ಟದಲ್ಲಿ ತಂಗಲು ಮೂರು ಪುಟ್ಟ ಮಠಗಳನ್ನು ಕಟ್ಟಿದ್ದಾರೆ. ವಿದ್ಯುತ್ ಸಂಪರ್ಕ ಪಡೆದು ಬೆಳಕು ನೀಡುವಲ್ಲಿ ಶಾಮಣ್ಣ ಸಫಲರಾಗಿದ್ದಾರೆ.
ಅರ್ಚಕ ರಂಗಸ್ವಾಮಿಯವರು ನೂರಾರು ಗಿಡ ಮರಗಳನ್ನು ಬೆಳೆಸಿ ಮನೆ ಮಾತಾಗಿರುವ ವನಸಿರಿ ಶಾಮಣ್ಣ, ಬೆಟ್ಟದ ಮೇಲೆಯೇ ಇದ್ದುಕೊಂಡು ಕೈಯಾರೆ ರಸ್ತೆ ಮಾಡಿದ್ದಾರೆ. ದೇವಾಲಯಕ್ಕೆ ತೆರಳಲು ರಸ್ತೆ ಇರದ ಕಾರಣ ಕಲ್ಲು ಕಟ್ಟಿ ರಸ್ತೆ ನಿರ್ಮಿಸಿ ಭಕ್ತರಿಗೆ ಅನುಕೂಲ ಮಾಡಿದ್ದಾರೆ. ಇನ್ನು ರಾತ್ರಿ ಅಲ್ಲೇ ಊಟ ಮಾಡಿ ಅಲ್ಲೇ ಉಳಿದುಕೊಳ್ಳುತ್ತಾರೆ. ಭಕ್ತರು ಉಳಿದುಕೊಳ್ಳಲು ಮೂರು ಮಠಗಳನ್ನು ಕಟ್ಟಿದ್ದಾರೆ" ಎಂದರು.
ಹಳ್ಳಗಳಿಗೆ ಕಲ್ಲು ಕಟ್ಟಿ ಬೆಟ್ಟ ಭದ್ರ ಪಡಿಸಿದ್ದ ಶಾಮಣ್ಣ: "ಹಳ್ಳಗಳು ಇರುವೆಡೆ ಶಾಮಣ್ಣ ಕಲ್ಲು ಕಟ್ಟಿ ಬೆಟ್ಟ ಭದ್ರಪಡಿಸಿದ್ದರು. ಅವರು ಊರು ಬಿಟ್ಟು ಬಂದು 30 ವರ್ಷ ಆಗಿದೆ. 100 ರಿಂದ 150 ಮರಗಳನ್ನು ಬೆಳೆಸಿದ್ದಾರೆ. ಶಾಮಣ್ಣ ಇರುವಷ್ಟು ದಿನ ಮರಗಳ ಪೋಷಣೆ ಮಾಡ್ತೀನಿ ಎನ್ನುತ್ತಾರೆ. ಹುಣಸೆ, ಬೇವು, ಅರಳಿ, ಬಿಲ್ವಪತ್ರೆ, ಅಶ್ವತ್ಥ ಮರ ಸೇರಿದಂತೆ ವಿವಿಧ ಜಾತಿಯ ಮರ ಗಿಡಗಳನ್ನು ಬೆಳೆಸುತ್ತಿದ್ದಾರೆ. ಅವರು ನೀರು ಹಾಕುವುದು, ಗಿಡಗಳನ್ನು ಕಟ್ಟುವ ಕೆಲಸದಲ್ಲಿ ನಿರತರಾಗುತ್ತಾರೆ. ದೇವಾಲಯದಲ್ಲಿ ನೀಡುವ ಪ್ರಸಾದವನ್ನು ಸೇವಿಸಿ ಬೆಟ್ಟದಲ್ಲೇ ನೆಲೆಸುತ್ತಾರೆ. ಅವರಿಂದ ಪ್ರಾಣಿ, ಪಕ್ಷಿ, ಜನರಿಗೂ ಪ್ರಯೋಜನ ಆಗ್ತಿದೆ" ಎಂದು ಅರ್ಚಕ ರಂಗಸ್ವಾಮಿ ತಿಳಿಸಿದರು.
ಮರಗಳೇ ಕುಟುಂಬ, ದೇವಾಲಯವೇ ಮನೆ: ಕೈಯಾರೆ ಬೆಳೆಸಿರುವ ಮರ ಗಿಡಗಳೇ ನನ್ನ ಕುಟುಂಬ, ದೇವಾಲಯವೇ ಮನೆ ಎಂದು ಶಾಮಣ್ಣ ಹೇಳುತ್ತಾರೆ. ಶಾಮಣ್ಣ ಪ್ರತಿಯೊಂದು ಮರದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದಾರೆ. ದಿನ ಬೆಳಗಾದ್ರೆ ನೀರೆರೆದು ಮರ ಗಿಡಗಳನ್ನು ಪೋಷಣೆ ಮಾಡ್ತಿದ್ದಾರೆ.
"ಶಾಮಣ್ಣ ಸಂಸಾರ ಬಿಟ್ಟು ಬಂದು ಗಿಡ ಮರಗಳನ್ನು ಸಾಕಿದ್ದಾರೆ. ಭಕ್ತರು ಬರಲು ಕಲ್ಲು ಕಟ್ಟಿ ರಸ್ತೆ ನಿರ್ಮಾಣ ಮಾಡಿದ್ದಾರೆ. ಭಕ್ತರು ಉಳಿಯಲು ಪುಟ್ಟ ಪುಟ್ಟ ಮಠಗಳನ್ನು ಅವರೇ ಕಟ್ಟಿದ್ದಾರೆ. ಮರಗಳನ್ನು ಬೆಳೆಸಿದ್ದಾರೆ. ಮರಗಳನ್ನು ಸಾಕುವುದು ಅಷ್ಟು ಸುಲಭವಲ್ಲ, ಇದನ್ನು ಮಾಡಲು ಅವರ ಶ್ರಮ ಹೆಚ್ಚಿದೆ. ಕುಟುಂಬ ಬಿಟ್ಟು ಇರುವವರು ಕೋಟಿಗೆ ಒಬ್ಬರು. 30 ವರ್ಷ ಆಯ್ತು ಅವರು ಬೆಟ್ಟಕ್ಕೆ ಬಂದು. ಅಂದು ಅವರು ಬಂದಾಗ ಇಲ್ಲಿ ದಾರಿ ಕೂಡ ಸರಿಯಾಗಿ ಇರಲಿಲ್ಲ. ಕಲ್ಲು ಕಟ್ಟಿ ದಾರಿ ಮಾಡಿದ್ದಾರೆ. ಅವರಿಗೆ ಯಾರೂ ಬೇಕಾಗಿಲ್ಲ, ಆ ರಂಗನಾಥ ಅವರಿಗೆ ಬೇಕು. ಇಷ್ಟೆಲ್ಲಾ ಮಾಡಿರುವ ಶಾಮಣ್ಣ ಅವರ ಜನ್ಮ ಪಾವನ ಆದಂತೆ" ಎಂದು ಭಕ್ತ ರಂಗಣ್ಣ ಮೆಚ್ಚುಗೆಯ ಮಾತುಗಳನ್ನಾಡಿದರು.
ಸಾವಿಗೂ ಮುನ್ನ ಸಮಾಧಿ ಮಾಡಿಕೊಂಡಿರುವ ಶಾಮಣ್ಣ: ಕೊಣಚಕಲ್ ರಂಗನಾಥ ಸ್ವಾಮಿ ಬೆಟ್ಟದಲ್ಲಿ ಸೇವೆ ಮಾಡ್ತಿರುವ ವಿರಕ್ತ ಶಾಮಣ್ಣನವರು ತಮ್ಮ ಸಾವಿಗೂ ಮೊದಲೇ ಸಮಾಧಿ ಸಿದ್ಧ ಪಡಿಸಿಟ್ಟುಕೊಂಡಿದ್ದಾರೆ. ಆ ಸಮಾಧಿ ಮೇಲೆ ದೊಡ್ಡ ಚಪ್ಪಡಿ ಕಲ್ಲು ಮುಚ್ಚಿದ್ದಾರೆ. ತಾನು ಕೊನೆಯುಸಿರೆಳೆದರೆ ಇಲ್ಲಿಯೇ ಸಮಾಧಿ ಮಾಡಿ ಎಂದು ಹೇಳಿದ್ದಾರೆ. ಇಷ್ಟೆಲ್ಲಾ ಮಾಡಿರುವ ಶಾಮಣ್ಣ ಎಲೆಮರೆ ಕಾಯಿಯಂತೆ ಜೀವನ ನಡೆಸುತ್ತಿದ್ದಾರೆ. ಅಲ್ಲದೆ ಕರಡಿ ಕಾಟ ಇರುವ ಈ ಬೆಟ್ಟದಲ್ಲಿ ಅವರೊಬ್ಬರೇ ಜೀವನ ಸಾಗುತ್ತಿದ್ದಾರೆ. ರಾತ್ರಿ ವೇಳೆ ಆಹಾರ ಅರಸಿ ದೇವಾಲಯದ ಬಳಿ ಬರುವ ಕರಡಿಗಳನ್ನು ಇವರೇ ಎಷ್ಟೋ ಬಾರಿ ಓಡಿಸಿರುವ ಉದಾಹರಣೆಗಳಿವೆ.
ಸೇವೆ ನಿರಂತರ ಎನ್ನುತ್ತಾರೆ ಶಾಮಣ್ಣ: "30 ವರ್ಷದಿಂದ ಮರಗಳನ್ನು ಬೆಳೆಸುತ್ತಿದ್ದೇನೆ. ಹುಣಸೆ ಮರ, ಬೇವಿನ ಮರ, ಅರಳಿ ಮರ ಸೇರಿ ಹತ್ತಕ್ಕೂ ಹೆಚ್ಚು ವಿವಿಧ ಜಾತಿಯ ಮರಗಳನ್ನು ಬೆಳೆಸಿದ್ದೇನೆ. ಬೆಟ್ಟಕ್ಕೆ ಬಂದ ಎರಡ್ಮೂರು ವರ್ಷಕ್ಕೆ ಗಿಡಗಳನ್ನು ಬೆಳೆಸಲು ಆರಂಭಿಸಿದ್ದೆ. ಎಲ್ಲಾ ಸೇರಿ 100 ರಿಂದ 150 ಮರಗಳನ್ನು ಬೆಳೆಸಿದ್ದೇನೆ. ಶ್ರಮ ವಹಿಸಿದರೆ ಮಾತ್ರ ಮರಗಳನ್ನು ಬೆಳೆಸಲು ಸಾಧ್ಯ. ಒಂದು ಮರ ಬೆಳೆಯಲು 10 ವರ್ಷ ಬೇಕಾಗುತ್ತದೆ. ನಾನು ಮನೆಗೆ ಹೋಗಲ್ಲ ದೇವಾಲಯದಲ್ಲೇ ಊಟ, ವನಸಿರಿ ಬೆಳೆಸುವುದೇ ಕಾಯಕ. ಇಲ್ಲಿಗೆ ಬಂದು 30 ವರ್ಷ ಆಯ್ತು, ಮನೆಗೆ ಹೋಗಬೇಕೆಂದು ಅನಿಸುವುದಿಲ್ಲ. ನನಗೆ ಇದೇ ಸಂಪತ್ತು. ಮರಗಳಿದ್ರೇ ಜನರಿಗೆ, ಪ್ರಾಣಿಗಳಿಗೆ, ಪಕ್ಷಿ ಸೇರಿ ಎಲ್ಲರಿಗೂ ಒಳ್ಳೆದಾಗುತ್ತದೆ. ಮನೆ ಬಿಟ್ಟು ಬಂದಾಗ 40 ವರ್ಷ ಆಗಿತ್ತು. ಇದೀಗ ನನಗೆ 70 ವರ್ಷ ಆಗಿದೆ ಎಂದು ಶಾಮಣ್ಣ ಪರಿಸರದ ಜಾಗೃತಿ ಜೊತೆಗೆ ತಮ್ಮ ಕಾಯಕದ ಕುರಿತು ವಿವರಿಸಿದರು.