
ಜಮ್ಮು ಕಾಶ್ಮೀರ: ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂಕುಸಿತ, ಕೊಚ್ಚಿಹೋದ ರಾಷ್ಟ್ರೀಯ ಹೆದ್ದಾರಿ, ವೈಷ್ಣೋದೇವಿ ಯಾತ್ರೆ ತಾತ್ಕಾಲಿಕ ಸ್ಥಗಿತ, ಹಲವರು ಸಿಲುಕಿರುವ ಶಂಕೆ..!!

ಜಮ್ಮು, ಆ.26: ಜಮ್ಮು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಮಂಗಳವಾರ ಸುರಿದ ಭಾರಿ ಮಳೆಗೆ ಒಂಬತ್ತು ಮಂದಿ ಬಲಿಯಾಗಿದ್ದು ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿ ನಷ್ಟವಾಗಿದೆ. ಹಲವೆಡೆ ಭೂಕುಸಿತ ಸಂಭವಿಸಿದ್ದು ಮುನ್ನೆಚ್ಚರಿಕಾ ಕ್ರಮವಾಗಿ ವೈಷ್ಣೋದೇವಿ ಯಾತ್ರೆಯನ್ನು ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ.
ಮೂಲಗಳ ಪ್ರಕಾರ ಮೃತ ನಾಲ್ಕು ಜನರ ಪೈಕಿ ಇಬ್ಬರ ಮನೆ ಧರಾಶಾಯಿ ಆಗಿದ್ದರಿಂದ ಅದರಡಿ ಸಿಲುಕಿ ಮೃತಪಟ್ಟಿದ್ದಾರೆ. ಉಳಿದ ಏಳು ಮಂದಿ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ. ಮೇಘಸ್ಪೋಟ ಉಂಟಾಗಿದ್ದು ಜನ ಆದಷ್ಟು ಸುರಕ್ಷಿತ ಸ್ಥಳದಲ್ಲಿದ್ದು ಜಲಾಶಯ, ನದಿ ಪಾತ್ರಗಳಿಂದ ದೂರ ಇರುವಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.
ಭಾರಿ ಮಳೆಗೆ ದೋಡಾ - ಕಿಷ್ತ್ ವಾರ ರಾಷ್ಟ್ರೀಯ ಹೆದ್ದಾರಿ ಕೊಚ್ಚಿ ಹೋಗಿದ್ದು ಉಭಯ ಜಿಲ್ಲೆಗಳ ಸಂಪರ್ಕ ಕಡಿತಗೊಂಡಿದೆ. ವೈಷ್ಣೋದೇವಿ ಮಂದಿರಕ್ಕೆ ತೆರಳುವ ದಾರಿಯಲ್ಲು ಭೂಕುಸಿತವಾಗಿದ್ದು ಹಲವಾರು ಮಂದಿ ಸಿಲುಕಿರುವ ಆತಂಕ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಓಮರ್ ಅಬ್ದುಲ್ಲ ಪರಿಸ್ಥಿತಿ ಗಂಭೀರತೆ ಹಿನ್ನೆಲೆಯಲ್ಲಿ ಸ್ವತಃ ಸ್ಥಳಕ್ಕೆ ತೆರಳಿ ಅವಲೋಕನಕ್ಕೆ ಮುಂದಾಗಿದ್ದಾರೆ. ಸದ್ಯಕ್ಕೆ ಪರಿಸ್ಥಿತಿ ಗಂಭೀರವಾಗಿದೆ ಎಂದು ಹೇಳಿದ್ದಾರೆ. ರಾಜ್ಯದ ಪ್ರಮುಖ ನದಿಗಳಾದ ರಾವಿ ಮತ್ತು ತಾವಿ ತುಂಬಿ ಹರಿಯುತ್ತಿದ್ದು, ಪ್ರವಾಹ ಕಾಣಿಸಿಕೊಂಡಿದೆ.