
ಮಂಗಳೂರು :ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತ ಬಾಲಕಿ ಜೊತೆ ಸುತ್ತಾಟ, ಲೈಂಗಿಕ ಕಿರುಕುಳ ; ಆರೋಪ ಸಾಬೀತು, ಯುವಕನಿಗೆ 20 ವರ್ಷ ಶಿಕ್ಷೆ ಘೋಷಿಸಿದ ಪೋಕ್ಸೋ ಕೋರ್ಟ್..

ಮಂಗಳೂರು : ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತ ವಯಸ್ಸಿನ ಯುವತಿಯನ್ನು ಚಿತ್ರದುರ್ಗದ ವಸತಿಗೃಹಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯವೆಸಗಿರುವ ಆರೋಪ ದಕ್ಷಿಣ ಕನ್ನಡ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ವಿಶೇಷ ಪೋಕ್ಸೋ ನ್ಯಾಯಾಲಯದಲ್ಲಿ ಸಾಬೀತಾಗಿದ್ದು ಅಪರಾಧಿಗೆ 20 ವರ್ಷಗಳ ಕಠಿಣ ಸಜೆ ಹಾಗೂ 55 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಮೂಲ್ಕಿ ಕಾರ್ನಾಡು ಲಿಂಗಪ್ಪಯ್ಯಕಾಡು ಬಿಜಾಪುರ ಕಾಲೊನಿ ನಿವಾಸಿ ಸಮೀರ್(43) ಶಿಕ್ಷೆಗೊಳಗಾದ ಅಪರಾಧಿಯಾಗಿದ್ದು ಬಂಧಿತನಾಗಿದ್ದ ವಸತಿಗೃಹದ ಸಿಬ್ಬಂದಿ ನಾಗರಾಜ್ (30) ಖುಲಾಸೆಯಾಗಿದ್ದಾರೆ. ಬಾಲಕಿಯ ತಂದೆ ಹೋಟೆಲ್ ವ್ಯವಹಾರ ನಡೆಸುತ್ತಿದ್ದು, ಆ ಹೋಟೆಲ್‌ಗೆ ಸಮೀರ್ ಕೋಳಿ ಮಾಂಸ ಪೂರೈಸುತ್ತಿದ್ದ. ಈ ಸಂದರ್ಭ ಶಿಕ್ಷಣ ಮೊಟಕುಗೊಳಿಸಿ ಮನೆಯಲ್ಲೇ ಇದ್ದ ಬಾಲಕಿಯ ಪರಿಚಯವಾಗಿದ್ದು ಒಬ್ಬರಿಗೊಬ್ಬರು ಆತ್ಮೀಯತೆ ಬೆಳೆಸಿದ್ದರು. ಸಮೀರ್ ಬಾಲಕಿ ಬಳಿ ತನಗೆ ಮದುವೆಯಾಗಿಲ್ಲ ಎಂದು ಹೇಳಿದ್ದು, ಎಲ್ಲಾದರೂ ದೂರ ಹೋಗಿ ಮದುವೆಯಾಗೋಣ ಎಂದು ಹೇಳಿ ಪುಸಲಾಯಿಸಿದ್ದ.
2024ರ ಜೂ.24ರಂದು ಬಾಲಕಿಯ ಮನೆಯ ಬಳಿಗೆ ಕಾರಿನಲ್ಲಿ ಬಂದು ಆಕೆಯನ್ನು ಶಿವಮೊಗ್ಗ ಜಿಲ್ಲೆ ಸಾಗರದ ವಸತಿಗೃಹವೊಂದಕ್ಕೆ ಕರೆದುಕೊಂಡು ಹೋಗಿದ್ದಾನೆ. ಈ ಸಂದರ್ಭ ವಸತಿಗೃಹದ ಸಿಬ್ಬಂದಿ ತುಮಕೂರು ಮೂಲದ ನಾಗರಾಜ್ ಎಂಬಾತ ಈ ಇಬ್ಬರ ಆಧಾರ್ ಕಾರ್ಡ್ ತೆಗೆದುಕೊಂಡು ರೂಂ ನೀಡಿದ್ದ. ಅಲ್ಲಿ ರಾತ್ರಿ ವಾಸ್ತವ್ಯ ಹೂಡಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ.
ಬೆಂಗಳೂರು, ಮುಂಬಯಿ ಸುತ್ತಾಡಿದ್ದ ಜೋಡಿ
ಆರೋಪಿ ಆಬಳಿಕ ಬಾಲಕಿಯನ್ನು ಕಾರಿನಲ್ಲಿ ಚಿತ್ರದುರ್ಗಕ್ಕೆ ಕರೆದುಕೊಂಡು ಹೋಗಿದ್ದು, ಅಲ್ಲಿನ ಕೆಎಸ್ ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಕಾರು ನಿಲ್ಲಿಸಿ ಮಧ್ಯಾಹ್ನ 2 ಗಂಟೆಗೆ ಬಸ್‌ನಲ್ಲಿ ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದಾನೆ. ರಾತ್ರಿ 7 ಗಂಟೆಗೆ ಅಲ್ಲಿಂದ ಖಾಸಗಿ ಬಸ್‌ನಲ್ಲಿ ಮುಂಬಯಿಗೆ ತೆರಳಿದ್ದಾರೆ.
ಜೂ.26ರಂದು ಸಂಜೆ 6.15ಕ್ಕೆ ಮುಂಬಯಿಗೆ ತಲುಪಿದ್ದು, ಅಲ್ಲಿ ಬಾಡಿಗೆ ಮನೆಗಾಗಿ ಹುಡುಕಾಟ ನಡೆಸಿದ್ದಾರೆ. ಎಲ್ಲಿಯೂ ಬಾಡಿಗೆ ಮನೆ ಸಿಗದ ಹಿನ್ನೆಲೆಯಲ್ಲಿ ಮತ್ತೆ ಬೆಂಗಳೂರಿಗೆ ವಾಪಸಾಗಿದ್ದಾರೆ. ಅಲ್ಲಿಂದ ಮಂಗಳೂರಿಗೆ ಬಸ್‌ನಲ್ಲಿ ಹೊರಟು ಜೂ.29ರಂದು ರಾತ್ರಿ 12.30ಕ್ಕೆ ಮಂಗಳೂರಿಗೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಬಂದಿದ್ದಾರೆ. ಈ ವೇಳೆ ಸುರತ್ಕಲ್ ಠಾಣೆ ಪೊಲೀಸರು ಯುವಕನನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್‌ಟಿಎಸ್‌ಸಿ-2 ಕೋರ್ಟ್‌ನ ನ್ಯಾಯಾಧೀಶರಾದ ಮನು ಕೆ.ಎಸ್. ಸಮಗ್ರ ವಿಚಾರಣೆ ನಡೆಸಿದ್ದು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆ.23ರಂದು ತೀರ್ಪು ಪ್ರಕಟಿಸಿದ್ದಾರೆ.
ಐಪಿಸಿ ಕಲಂ376 (2) (ಎನ್) ಮತ್ತು ಪೋಕ್ಸೋ ಕಾಯಿದೆ ಕಲಂ-6ರಡಿ 20 ವರ್ಷ ಕಠಿಣ ಶಿಕ್ಷೆ ಮತ್ತು 50 ಸಾವಿರ ರೂ. ದಂಡ, ದಂಡ ಕಟ್ಟಲು ವಿಫಲನಾದರೆ 4 ತಿಂಗಳು ಹೆಚ್ಚುವರಿ ಸಾದಾ ಸಜೆ, ಐಪಿಸಿ ಕಲಂ 363ರಡಿ 3 ವರ್ಷ ಕಠಿಣ ಸಜೆ, 5 ಸಾವಿರ ರೂ. ದಂಡ, ದಂಡ ತೆರಲು ವಿಫಲನಾದರೆ 1 ತಿಂಗಳು ಹೆಚ್ಚುವರಿ ಸಾದಾ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ.
ವಸತಿ ಗೃಹ ಸಿಬ್ಬಂದಿ ಖುಲಾಸೆ
ಅಪ್ರಾಪ್ತ ಬಾಲಕಿಗೆ ರೂಂ ನೀಡಿದ ಪ್ರಕರಣದಲ್ಲಿ ಚಿತ್ರದುರ್ಗದ ವಸತಿಗೃಹದ ರಿಸೆಪೈನಿಸ್ಟ್ ನಾಗರಾಜ್ ಎರಡನೇ ಆರೋಪಿಯಾಗಿದ್ದು, ನ್ಯಾಯಾಲಯ ಆತನನ್ನು ಖುಲಾಸೆಗೊಳಿಸಿದೆ. ಸುರತ್ಕಲ್ ಠಾಣೆ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್ ಮತ್ತು ಸಬ್ ಇನ್ಸ್‌ಪೆಕ್ಟರ್ ರಘು ನಾಯ್ಕ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ದಂಡದ ಮೊತ್ತ 55 ಸಾವಿರ ರೂ. ಮತ್ತು ಕಾನೂನು ಸೇವಾ ಪ್ರಾಧಿಕಾರ ಹೆಚ್ಚುವರಿಯಾಗಿ 3.45 ಲಕ್ಷ ರೂ. ಪರಿಹಾರವನ್ನು ಸಂತ್ರಸ್ತ ಬಾಲಕಿಗೆ ನೀಡುವಂತೆ ಸೂಚಿಸಿದೆ.