ಮಂಗಳೂರು :ಜೈಲು ಸಿಬ್ಬಂದಿಯಿಂದಲೇ ಕೈದಿಗಳಿಗೆ ಗಾಂಜಾ ಪೂರೈಕೆ ; ಕೆಎಸ್ಐಎಸ್ಎಫ್ ತಪಾಸಣೆಯಲ್ಲಿ ಸಿಕ್ಕಿಬಿತ್ತು ಒಳ ಉಡುಪಿನಲ್ಲಿದ್ದ ಪೊಟ್ಟಣ !

ಮಂಗಳೂರು :ಜೈಲು ಸಿಬ್ಬಂದಿಯಿಂದಲೇ ಕೈದಿಗಳಿಗೆ ಗಾಂಜಾ ಪೂರೈಕೆ ; ಕೆಎಸ್ಐಎಸ್ಎಫ್ ತಪಾಸಣೆಯಲ್ಲಿ ಸಿಕ್ಕಿಬಿತ್ತು ಒಳ ಉಡುಪಿನಲ್ಲಿದ್ದ ಪೊಟ್ಟಣ !

ಮಂಗಳೂರು: ನಗರದ ಕೊಡಿಯಾಲಬೈಲಿನ ಜಿಲ್ಲಾ ಕಾರಾಗೃಹದಲ್ಲಿ ಜೈಲು ಸಿಬ್ಬಂದಿಯೇ ಕೈದಿಗಳಿಗೆ ಗಾಂಜಾ ಪೂರೈಕೆ ಮಾಡಲು ಸಹಕಾರ ನೀಡಿದ ಘಟನೆ ನಡೆದಿದ್ದು, ಬರ್ಕೆ ಠಾಣೆ ಪೊಲೀಸರು ಜೈಲು ಸಿಬ್ಬಂದಿಯನ್ನು ಬಂಧಿಸಿದ್ದಾರೆ. ಸಂತೋಷ್ ಬಂಧಿತ ಜೈಲು ಸಿಬ್ಬಂದಿ.

ಆ.22ರಂದು ಬೆಳಗ್ಗೆ 10.40ಕ್ಕೆ ಕರ್ತವ್ಯಕ್ಕೆ ಹಾಜರಾಗುತ್ತಿದ್ದ ಸಂದರ್ಭ ಎಂದಿನಂತೆ ಮುಖ್ಯ ದ್ವಾರದಲ್ಲಿ ಕೆಎಸ್‌ಐಎಸ್‌ಎಫ್ ಸಿಬ್ಬಂದಿ ತಪಾಸಣೆ ಮಾಡುತ್ತಿದ್ದ ವೇಳೆ ಸಂತೋಷ್ ಅವರ ಒಳ ಉಡುಪಿನಲ್ಲಿ ಅನುಮಾನಾಸ್ಪದ ವಸ್ತುವನ್ನು ಬಚ್ಚಿಟ್ಟಿರುವುದು ಕಂಡುಬಂದಿದೆ. ತಕ್ಷಣ ಮೇಲಧಿಕಾರಿಗಳಿಗೆ ಮಾಹಿತಿ ನೀಡಿ ಅವರ ಸಮ್ಮುಖದಲ್ಲಿ ಕೂಲಂಕುಷವಾಗಿ ಪರಿಶೀಲನೆಗೆ ಒಳಪಡಿಸಿದಾಗ ಅವರ ಒಳ ಉಡುಪಿನಲ್ಲಿ ಖಾಕಿ ಬಣ್ಣದ ಗಮ್ ಟೇಪ್ ನಿಂದ ಸುತ್ತಿದ ಪೊಟ್ಟಣ ದೊರೆತಿದೆ.

ಜೈಲು ಅಧೀಕ್ಷಕ ಶರಣ ಬಸಪ್ಪ ಮತ್ತು ಕೆಎಸ್ಐಎಸ್ಎಫ್ ಸಹಾಯಕ ಕಮಾಂಡೆಂಟ್ ಸಮ್ಮುಖ ತೆರೆದು ನೋಡಿದಾಗ ಅದರಲ್ಲಿ ಅಂದಾಜು 41 ಗ್ರಾಂನಷ್ಟು ಗಾಂಜಾದಂತೆ ಕಾಣುವ ವಸ್ತು, ಅಂದಾಜು 11 ಗ್ರಾಂನಷ್ಟು ತಂಬಾಕು, 1 ಮೊಬೈಲ್ ಚಾರ್ಜರ್ ಕೇಬಲ್, ಒಂದು ಒಟಿಜಿ, ಒಂದು ಸಣ್ಣ ನಳಿಕೆ ರೂಪದ ಲೋಹದ ವಸ್ತು, ರೋಲಿಂಗ್ ಪೇಪರ್ ಗಳು ಪತ್ತೆಯಾಗಿವೆ.

ಈ ಬಗ್ಗೆ ಸಿಬಂದಿಯನ್ನು ವಿಚಾರಣೆಗೆ ಒಳಪಡಿಸಿದಾಗ ಬಿಜೈನಲ್ಲಿರುವ ಸೂಪರ್ ಮಾರ್ಕೆಟ್ ಬಳಿ ವ್ಯಕ್ತಿಯೊಬ್ಬ ತನಗೆ ಅದನ್ನು ನೀಡಿದ್ದು ಜೈಲಿನಲ್ಲಿ ವಿಚಾರಣಾಧೀನ ಕೈದಿ ಪ್ರಮೋದ ಎಂಬಾತನಿಗೆ ನೀಡುವಂತೆ ತಿಳಿಸಿದ್ದು, ಅದರಂತೆ ನೀಡಲು ತಂದಿರುವುದಾಗಿ ಆರೋಪಿ ತಿಳಿಸಿದ್ದಾನೆ. ಗಾಂಜಾ ಸಾಗಾಟ ಹಿನ್ನೆಲೆಯಲ್ಲಿ ಆತನನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ. ಜೈಲು ಅಧೀಕ್ಷಕ ಶರಣ ಬಸಪ್ಪ ನೀಡಿದ ದೂರಿನಂತೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2

Advertise under the article