ಹಾವೇರಿ :ಅಕ್ರಮ ಸಂಬಂಧಕ್ಕೆ ಅಡ್ಡಿ; ಲವರ್ ಜತೆ ಸೇರಿ ಪತಿಯನ್ನೇ ಕೊಂದ ಪತ್ನಿ!
ಶಫಿವುಲ್ಲಾ ಅಬ್ದುಲ್ ಮಹೀಬ್ ಎಂಬಾತನನ್ನು ಪತ್ನಿ ಮತ್ತು ಪ್ರಿಯಕರ ಒಟ್ಟಿಗೆ ಕೂಡಿ ಕೊಲೆ ಮಾಡಿದ್ದಾರೆ.
ಶಫಿವುಲ್ಲಾ ಅಬ್ದುಲ್ ಮಹೀಬ್ ಎಂಬ ವ್ಯಕ್ತಿಯನ್ನು ಆತನ ಪತ್ನಿ ಶಹೀನಾಬಾನು ಮತ್ತು ಆಕೆಯ ಪ್ರಿಯಕರ ಮುಬಾರಕ್ ಖಲಂದರಸಾಬ್ ಕೊಲೆಗೈದಿದ್ದಾರೆ ಎಂದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ. ಮೊದಲಿಗೆ ಕಾಲು ಜಾರಿ ಬಿದ್ದಿದ್ದಾರೆ ಎನ್ನಲಾಗಿದ್ದು, ತನಿಖೆಯಲ್ಲಿ ಕೊಲೆ ರಹಸ್ಯ ಬಯಲಾಗಿದೆ.
ಹಾವೇರಿ ಜಿಲ್ಲೆಯ ಹರಿಹರ ಮೂಲದ ಶಫಿವುಲ್ಲಾ ಅಬ್ದುಲ್ ಮಹೀಬ್‌ರನ್ನು ಆತನ ಪತ್ನಿ ಶಹೀನಾಬಾನು ಮತ್ತು ಮುಬಾರಕ್ ಖಲಂದರಸಾಬ್ ಜೊತೆಯಾಗಿ ಕೊಲೆ ಮಾಡಿದ್ದಾರೆ. ಶಹೀನಾಬಾನು ಮತ್ತು ಮುಬಾರಕ್ ಖಲಂದರಸಾಬ್‌ರ ನಡುವೆ ದೀರ್ಘಕಾಲದಿಂದ ಅನೈತಿಕ ಸಂಬಂಧವಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ. ಶಹೀನಾಬಾನು, ಮುಬಾರಕ್‌ನೊಂದಿಗೆ ಮದುವೆಯಾಗಲು ಒತ್ತಾಯಿಸುತ್ತಿದ್ದಳು. ಆದರೆ, ಶಫಿವುಲ್ಲಾ ಈ ಸಂಬಂಧಕ್ಕೆ ಅಡ್ಡಿಯಾಗಿದ್ದಾನೆ ಎಂದು ಮುಬಾರಕ್ ಶಹೀನಾಬಾನುಗೆ ತಿಳಿಸಿದ್ದು, ನಂತರ ಇಬ್ಬರು ಸೇರಿ ಕೊಲೆಗೆ ಸಂಚು ರೂಪಿಸಿದ್ದಾರೆ
ಆರೋಪಿಗಳಾದ ಮುಬಾರಕ್, ಆಕೆಯ ಪತಿ ಶಫಿವುಲ್ಲಾನೊಂದಿಗೆ ಗೆಳೆತನ ಬೆಳೆಸಿಕೊಂಡಿದ್ದ. ಈ ಗೆಳೆತನವನ್ನೇ ಬಂಡವಾಳವಾಗಿಟ್ಟುಕೊಂಡು, ಜುಲೈ 27, 2025 ರಂದು ಮುಬಾರಕ್, ಶಫಿವುಲ್ಲಾನನ್ನು ಮದಗ ಮಾಸೂರು ಕೆರೆಗೆ ಕರೆದೊಯ್ಯಲು ಯೋಜನೆ ರೂಪಿಸಿದ. “ಕೆರೆಯನ್ನು ನೋಡಲು ಹೋಗೋಣ” ಎಂದು ಪುಸಲಾಯಿಸಿ, ಶಫಿವುಲ್ಲಾನನ್ನು ಕೆರೆಯ ಬಳಿಗೆ ಕರೆದೊಯ್ದಿದ್ದಾನೆ. ಅಲ್ಲಿ ಎಣ್ಣೆ ಪಾರ್ಟಿಯೊಂದನ್ನು ಏರ್ಪಡಿಸಿದ್ದ ಮುಬಾರಕ್, ಶಹೀನಾಬಾನು ಜೊತೆಗೂಡಿ ಶಫಿವುಲ್ಲಾನನ್ನು ಕೆರೆಗೆ ತಳ್ಳಿ ಕೊಲೆ ಮಾಡಿದ್ದಾರೆ. ನಂತರ, ಈ ಘಟನೆಯನ್ನು ಆತ್ಮಹತ್ಯೆಯೆಂದು ಬಿಂಬಿಸಲು ಇಬ್ಬರೂ ಯತ್ನಿಸಿದ್ದಾರೆ.
ಶಫಿವುಲ್ಲಾನ ಮೃತದೇಹ ಕೆರೆಯಲ್ಲಿ ಪತ್ತೆಯಾದಾಗ, ದೇಹದ ಮೇಲಿನ ಗಾಯಗಳು ಪೊಲೀಸರಿಗೆ ಅನುಮಾನ ಮೂಡಿಸಿದವು. ಇದರಿಂದಾಗಿ, ಹಿರೇಕೆರೂರು ಪೊಲೀಸ್ ಠಾಣೆಯ ಅಧಿಕಾರಿಗಳು ಶಹೀನಾಬಾನು ಮತ್ತು ಮುಬಾರಕ್ ಖಲಂದರಸಾಬ್‌ರನ್ನು ವಿಚಾರಣೆಗೆ ಒಳಪಡಿಸಿದ್ದು, ವಿಚಾರಣೆಯ ಸಂದರ್ಭದಲ್ಲಿ, ಆರೋಪಿಗಳಿಬ್ಬರೂ ಕೊಲೆಯ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ತಮ್ಮ ಅನೈತಿಕ ಸಂಬಂಧವನ್ನು ಮುಂದುವರಿಸಲು ಮತ್ತು ಮದುವೆಯಾಗಲು ಶಫಿವುಲ್ಲಾನನ್ನು ಕೊಲೆಗೈದಿರುವುದಾಗಿ ಒಪ್ಪಿಕೊಂಡಿದ್ದಾರೆ. ಈ ಕೃತ್ಯವನ್ನು ಆತ್ಮಹತ್ಯೆಯಂತೆ ಕಾಣುವಂತೆ ರೂಪಿಸಲಾಗಿತ್ತು ಎಂದು ತನಿಖೆಯಿಂದ ದೃಢಪಟ್ಟಿದೆ.
ಈ ಘಟನೆಯ ಸಂಬಂಧ, ಹಿರೇಕೆರೂರು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳಾದ ಶಹೀನಾಬಾನು ಮತ್ತು ಮುಬಾರಕ್ ಖಲಂದರಸಾಬ್‌ರನ್ನು ಬಂಧಿಸಲಾಗಿದೆ.