ಮಂಗಳೂರು :ಧರ್ಮಸ್ಥಳ ಕೇಸ್ ; ಸಾಕ್ಷಿದಾರ ವ್ಯಕ್ತಿಯೊಂದಿಗೆ ಸ್ಥಳ ಮಹಜರು ಆರಂಭ, ನೇತ್ರಾವತಿ ಸ್ನಾನಘಟ್ಟದಲ್ಲಿ ಮೊದಲ ಪ್ರಕ್ರಿಯೆ, ಬಿಗಿ ಭದ್ರತೆಯೊಂದಿಗೆ ಸ್ಥಳಕ್ಕೆ ಹಾಜರು, ಗರಿಗೆದರಿದ ಕುತೂಹಲ..!!
ಮಂಗಳೂರು, ಜುಲೈ 28 : ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ಅಧಿಕಾರಿಗಳು ಕಡೆಗೂ ಧರ್ಮಸ್ಥಳ ಪ್ರವೇಶ ಮಾಡಿದ್ದಾರೆ. ಸಾಕ್ಷಿದಾರ ವ್ಯಕ್ತಿಯನ್ನು ಧರ್ಮಸ್ಥಳ ಬಳಿಯ ನೇತ್ರಾವತಿ ಸ್ನಾನಘಟ್ಟದ ಬಳಿಗೆ ಕರೆತರಲಾಗಿದ್ದು ಸ್ಥಳ ಮಹಜರು ಪ್ರಕ್ರಿಯೆ ಆರಂಭಿಸಿದ್ದಾರೆ.
ಜುಲೈ 3ರಂದು ಸಾಕ್ಷಿದಾರ ವ್ಯಕ್ತಿ ನೀಡಿದ್ದ ದೂರಿನ ಜೊತೆಗೆ ಒಂದು ತಲೆಬುರುಡೆಯನ್ನೂ ಪೊಲೀಸರಿಗೆ ನೀಡಿದ್ದ. 1998ರಿಂದ ತೊಡಗಿ 2014ರ ವರೆಗೆ ನೂರಾರು ಹೆಣಗಳನ್ನು ಹೂತಿದ್ದೇನೆ, ಅದರಲ್ಲೊಂದನ್ನು ಇತ್ತೀಚೆಗೆ ಅಗೆದು ತೆಗೆದಿದ್ದು ಸಾಕ್ಷಿಯಾಗಿ ತಲೆಬುರುಡೆ ಸಿಕ್ಕಿದೆ. ಪೊಲೀಸ್ ರಕ್ಷಣೆ ನೀಡಿದರೆ ಮಾಡಿದ್ದ ಪಾಪಕ್ಕೆ ಪ್ರಾಯಶ್ಚಿತ್ತಕ್ಕಾಗಿ ಎಲ್ಲವನ್ನೂ ಅಗೆದು ತೋರಿಸುತ್ತೇನೆ ಎಂಬುದಾಗಿ ಪೊಲೀಸರಿಗೆ ನೀಡಿದ್ದ ದೂರು ಭಾರೀ ಸಂಚಲನ ಎಬ್ಬಿಸಿತ್ತು. ಘಟನೆ ರಾಷ್ಟ್ರೀಯ ಮಾಧ್ಯಮಗಳಲ್ಲಿ ಹೆಚ್ಚು ಸುದ್ದಿಯಾಗಿದ್ದರಿಂದ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ ರಚಿಸಿತ್ತು.
ತನಿಖಾ ತಂಡದ ಹಿರಿಯ ಅಧಿಕಾರಿಗಳು ಮಂಗಳೂರಿನಲ್ಲಿ ಎರಡು ದಿನ ಸಾಕ್ಷಿದಾರ ವ್ಯಕ್ತಿಯನ್ನು ವಿಚಾರಣೆ ನಡೆಸಿದ್ದು ಇದೀಗ ಆತನನ್ನು ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದ ಬಳಿಗೆ ಭಾರೀ ಭದ್ರತೆಯಲ್ಲಿ ಕರೆತಂದಿದ್ದಾರೆ. ಜೊತೆಗೆ ಅರಣ್ಯ ಇಲಾಖೆ ಅಧಿಕಾರಿಗಳು, ಕಂದಾಯ ಇಲಾಖೆಯ ಅಧಿಕಾರಿಗಳನ್ನೂ ಸ್ಥಳಕ್ಕೆ ಕರೆಸಲಾಗಿದೆ. ಸ್ಥಳೀಯ ಪೊಲೀಸರು, ಡಿಎಆರ್ ಪೊಲೀಸರು ಮತ್ತು ಗರುಡ ಪಡೆಯನ್ನೂ ಭದ್ರತೆಗೆ ಕರೆಸಲಾಗಿದೆ. ಇದಲ್ಲದೆ, ದೂರುದಾರ ವ್ಯಕ್ತಿಗೆ ಅಪಾಯ ಆಗದಂತೆ ಇಬ್ಬರು ಗನ್ ಮ್ಯಾನ್ ಗಳನ್ನೂ ಕೊಡಲಾಗಿದೆ.
ಮಾಹಿತಿ ಪ್ರಕಾರ, ತನಿಖಾ ತಂಡದ ಅಧಿಕಾರಿಗಳು ಮೊದಲಿಗೆ ಆತ ತಂದಿದ್ದ ಒಂದು ತಲೆಬುರುಡೆಯ ಬಗ್ಗೆ ತನಿಖೆ ಕೇಂದ್ರೀಕರಿಸಿದ್ದಾರೆ. ಆತ ಹೊರ ತೆಗೆದಿದ್ದಾನೆ ಎನ್ನಲಾದ ಸಮಾಧಿಯ ಸ್ಥಳವನ್ನು ಪತ್ತೆಹಚ್ಚಿ ಅಲ್ಲಿ ಪೊಲೀಸ್ ಭದ್ರತೆ ಒದಗಿಸುವುದಲ್ಲದೆ, ಮತ್ತಷ್ಟು ಅಗೆದು ಬುರುಡೆಯನ್ನು ಹೊರತೆಗೆದ ಜಾಗ ಇದೇನಾ ಎಂಬುದನ್ನು ದೃಢಪಡಿಸಲಿದ್ದಾರೆ. ಸದ್ಯಕ್ಕೆ ಮಾಧ್ಯಮಗಳನ್ನು ದೂರವಿಟ್ಟು ಸಾಕ್ಷಿದಾರ ವ್ಯಕ್ತಿ ತೋರಿಸುತ್ತಿರುವ ಜಾಗಕ್ಕೆ ಅಧಿಕಾರಿಗಳು ತೆರಳಿದ್ದಾರೆ.ನೂರಾರು ಶವಗಳ ಅಗೆತ ಆಗುತ್ತಾ?
ಪ್ರಕರಣದ ಬಗ್ಗೆ ತನಿಖೆಗೆ ನಿಯೋಜನೆಗೊಂಡ ವಿಶೇಷ ತಂಡದ ಅಧಿಕಾರಿಗಳು ಸಾಕ್ಷಿದಾರನ ಮಾಹಿತಿ ಅನುಸರಿಸಿ ಒಂದೊಂದೇ ಪ್ರಕರಣಗಳನ್ನು ಹೊರತೆಗೆಯುವ ಸಾಧ್ಯತೆಯಿದೆ. ಮೊದಲಿಗೆ, ಆತನೇ ಒಂದು ತಲೆಬರುಡೆ ಹಿಡ್ಕೊಂಡು ಬಂದಿದ್ದರಿಂದ ಅದೇ ಜಾಗವನ್ನು ತನಿಖೆಗೆ ಕೇಂದ್ರೀಕರಿಸಲಾಗಿದೆ. ಎಲ್ಲವನ್ನೂ ಒಂದೇ ಬಾರಿಗೆ ಅಗೆಯುವುದು ಅಥವಾ ಒಂದೇ ಬಾರಿಗೆ ಎಲ್ಲವನ್ನೂ ತನಿಖೆ ಕೈಗೊಳ್ಳುವುದು ಸಾಧ್ಯವಿಲ್ಲ. ಸ್ಥಳದಲ್ಲಿ ಎಫ್ಎಸ್ಎಲ್ ಅಧಿಕಾರಿಗಳು ಕೂಡ ತೆರಳಿರುವುದರಿಂದ ಅಲ್ಲಿ ಸಿಕ್ಕ ಎಲುಬುಗಳು ಯಾವ ಕಾಲದ್ದು, ಎಷ್ಟು ವರ್ಷ ಹಿಂದಿನದ್ದು ಎನ್ನುವುದನ್ನು ನಿರ್ಧರಿಸುತ್ತಾರೆ. ಆಬಳಿಕ ಸಾಕ್ಷಿದಾರನ ದೂರಿನ ಬಗ್ಗೆ ನಿರ್ಣಯ ಮಾಡುತ್ತಾರೆ.
ದೂರಿನಲ್ಲಿ 'ನೂರಾರು ಹೆಣಗಳು' ಎಂದು ಉಲ್ಲೇಖಿಸಿರುವುದರಿಂದ ಆತ ಹೇಳಿದ ಸಮಾಧಿ ಮತ್ತು ಆ ಜಾಗ ಯಾರಿಗೆ ಸೇರಿದ್ದು ಎಂಬುದನ್ನು ಕಂದಾಯ ಇಲಾಖೆ ಅಧಿಕಾರಿಗಳು ನಿರ್ಧರಿಸುತ್ತಾರೆ. ಸದ್ಯಕ್ಕೆ ಈಗ ಕರೆತಂದಿರುವ ಜಾಗ ನೇತ್ರಾವತಿ ನದಿ ತಟವಾಗಿದ್ದು ಕಾಡು ಬೆಳೆದು ನಿಂತ ಜಾಗವಾಗಿದೆ. ಇದೇ ಜಾಗದ ಪಕ್ಕದಲ್ಲಿ ಆತ ವಾಸವಿದ್ದ ಮನೆಯೂ ಇತ್ತು ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಹೆಣ ಹೂತ ಪ್ರಕರಣದಲ್ಲಿ ಸಾಕ್ಷಿದಾರನ ಹೇಳಿಕೆ ದಾಖಲು ಬೆನ್ನಲ್ಲೇ ನಿರ್ಣಾಯಕ ಎನ್ನುವಂತೆ ಅಧಿಕಾರಿಗಳು ಸ್ಥಳ ಮಹಜರಿಗೆ ಮುಂದಾಗಿದ್ದು ಕುತೂಹಲ ಗರಿಗೆದರುವಂತೆ ಮಾಡಿದೆ.