
ಮಂಗಳೂರು :ಕಾಸಿಲ್ಲದೇ ಕನ್ಯಾಕುಮಾರಿ ಯಾತ್ರೆ ; ಜನಮನ ಸೆಳೆದ ಮಂಗಳೂರಿನ ಯುವಕನ ಹಿಚ್ ಹೈಕಿಂಗ್, 21 ದಿನಗಳ ಪಯಣ ಮುಗಿಸಿದ ರಾಜೇಶ್ ಫೆರಾವೋ..!!

ಮಂಗಳೂರು, ಜುಲೈ.28: ಕಾಸರಗೋಡು ಮೂಲದ, ಕೆಲಸದ ನಿಮಿತ್ತ ಮಂಗಳೂರಿನಲ್ಲಿ ನೆಲೆಸಿರುವ ರಾಜೇಶ್ ಫೆರಾವೊ ಎಂಬ ಉತ್ಸಾಹಿ ಯುವಕನೊಬ್ಬ 'ಕಾಸಿಲ್ಲದೇ ಕನ್ಯಾಕುಮಾರಿ' ಯಾತ್ರೆ ನಡೆಸುತ್ತಿದ್ದಾರೆ. ದಾರಿಯಲ್ಲಿ ಸಿಕ್ಕ ಸಿಕ್ಕವರ ಬಳಿ ಲಿಫ್ಟ್ ಕೇಳಿ, ನಡೆದಾಡುತ್ತಲೇ, ಸ್ಥಳೀಯ ಸಂಸ್ಕೃತಿ ನೋಡಿ ಆನಂದಿಸುತ್ತ ಹೊಸ ರೀತಿಯ ಪ್ರಯಾಣದಲ್ಲಿದ್ದಾರೆ. ಇದರ ಕುರಿತ ತಮ್ಮ ಅನುಭವಗಳನ್ನು ಬಳ್ಳೂರು ಯೂಟ್ಯೂಬ್‌ನಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಸಿನಿಮಾ ಕ್ಷೇತ್ರದಲ್ಲಿ ತೊಡಗಿಸಿದ್ದ ಅವರು, ಹಿಚ್ ಹೈಕಿಂಗ್ (ಲಿಫ್ಟ್ ಕೇಳಿಕೊಂಡು ಹೋಗುವುದು) ಮೂಲಕ ಇಡೀ ಕೇರಳ ಉದ್ದಕ್ಕೂ ಸುತ್ತಾಡಿ ದೇಶದ ದಕ್ಷಿಣದ ತುತ್ತ ತುದಿ ಕನ್ಯಾಕುಮಾರಿ ತಲುಪುವ ಗುರಿ ಹೊಂದಿದ್ದಾರೆ. ಜು.7ರಿಂದ ಮಂಗಳೂರಿನ ಪಂಪ್‌ವೆಲ್‌ನಿಂದ ಈ ಯಾತ್ರೆ ಆರಂಭಿಸಿದ್ದಾರೆ.
29 ವರ್ಷದ ರಾಜೇಶ್ ಫೆರಾವೋ ಕಾಸರಗೋಡು ಸಮೀಪದ ಬಳ್ಳೂರು ಮೂಲದವರು. ಕಾರ್ಯ ನಿಮಿತ್ತ ಮಂಗಳೂರಿನಲ್ಲಿ ನೆಲೆಸಿದ್ದಾರೆ. ಹಲವಾರು ಕಿರು ಚಿತ್ರಗಳಲ್ಲಿ ನಟಿಸಿದ್ದು ಕನ್ನಡ ಸಿನಿಮಾಗಳಲ್ಲಿ ಫೋಟೊಗ್ರಾಫರ್ ಆಗಿ ಕೆಲಸ ಮಾಡಿದ್ದಾರೆ. ಕೋಸ್ಟಲ್‌ವುಡ್‌ನಲ್ಲಿ ಮಿಸ್ಟರ್ ಮದಿಮಾಯೆ ಎನ್ನುವ ತುಳು ಸಿನಿಮಾಕ್ಕೆ ಬಂಡವಾಳ ಹೂಡಿದ್ದರು. ಇದೀಗ ಲೋಕ ಸುತ್ತುವ ಹೆಜ್ಜೆ ಇಟ್ಟಿದ್ದು, ಅದರಲ್ಲು ಹೊಸತನ ಮೆರೆದಿದ್ದಾರೆ.
ಪ್ರತಿ ದಿನ ವಿಡಿಯೊ ಚಿತ್ರೀಕರಿಸಿ ತನ್ನ ಅನುಭವಗಳನ್ನು ಬಳ್ಳೂರು ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ. ಇವರ ಈ ಪ್ರಯತ್ನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ದಾರಿಯಲ್ಲಿ ಉದ್ದಕ್ಜಯುಯ ಲಿಫ್ಟ್ ಕೇಳಿಕೊಂಡು, ಕೆಲವು ಕಡೆ ನಡೆದಾಡುತ್ತ ಕೇರಳದ ನಾನಾ ಭಾಗಗಳನ್ನು ಸುತ್ತುತ್ತಿದ್ದಾರೆ. ತಿಂಗಳ ಅಂತರದಲ್ಲಿ ಕನ್ಯಾಕುಮಾರಿಗೆ ತಲುಪುವುದು ರಾಜೇಶ್ ಉದ್ದೇಶವಾಗಿದ್ದು, ಹೆದ್ದಾರಿಯಲ್ಲಿ ಲಾರಿ ಟ್ರಕ್‌ಗಳಲ್ಲಿ ಲಿಫ್ಟ್ ಪಡೆದರೆ, ಗ್ರಾಮೀಣ ಭಾಗಗಳಲ್ಲಿ ಬೈಕ್, ಸ್ಥಳೀಯ ವಾಹನಗಳಲ್ಲಿ ಲಿಫ್ಟ್ ಪಡೆದುಕೊಳ್ಳುತ್ತಿದ್ದಾರೆ. ಊಟ ವಸತಿಗೆ ಧರ್ಮಶಾಲೆ, ಮಂದಿರಗಳನ್ನು ಹಾಗೂ ಕೆಲವು ಕಡೆ ಆತಿಥ್ಯ ಕೊಟ್ಟ ಮನೆಗಳನ್ನೂ ಆಶ್ರಯಿಸಿದ್ದಾರೆ.
ಬೈಕ್, ಇನ್ನಿತರ ವಾಹನದಲ್ಲಿ ಪ್ರಯಾಣಿಸಿದರೆ ದಣಿವು, ಖರ್ಚೂ ಹೆಚ್ಚಿರುತ್ತದೆ. ಆದರೆ ನಡೆಯುತ್ತ ಲಿಫ್ಟ್ ಕೇಳಿಕೊಂಡು ಸಾಗುವುದು ಸವಾಲಾದರೂ ಆಯಾ ಭಾಗದ ಜನರ ಸಂಸ್ಕೃತಿ ವೈವಿಧ್ಯ ಪರಿಚಯ ಆಗುತ್ತದೆ. ಮಲಯಾಳಂ ಇನ್ನಿತರ ಭಾಷೆಗಳು ತಿಳಿದಿರುವ ಕಾರಣ ಸಂವಹನ ತೊಂದರೆ ಇಲ್ಲ. ದೂರಕ್ಕೆ ಸಾಗುವ ಟ್ಯಾಂಕರ್ ಇನ್ನಿತರ ಲಾರಿಗಳಲ್ಲಿ ಲಿಫ್ಟ್ ನೀಡುತ್ತಾರೆ. ಆಯಾ ಭಾಗದಲ್ಲಿ ವಿಶೇಷ ಏನಿದೆ ಅನ್ನೋದೂ ತಿಳಿಯುತ್ತದೆ ಎಂದು ರಾಜೇಶ್ ಹೇಳುತ್ತಾರೆ.
ಸದ್ಯ 21 ದಿನಗಳ ಪಯಣದಲ್ಲಿ ಕೇರಳದ ಎಲ್ಲ ಜಿಲ್ಲೆಗಳನ್ನು ದಾಟಿದ್ದು ತಿರುವನಂತಪುರ ತಲುಪಿದ್ದಾರೆ. ಒಂದೆರಡು ದಿನದಲ್ಲಿ ಕನ್ಯಾಕುಮಾರಿ ತಲುಪುವ ಸಾಧ್ಯತೆಯಿದೆ.