
ಮೈಸೂರು: ಡ್ರಗ್ಸ್ ಫ್ಯಾಕ್ಟರಿ ; 380 ಕೋಟಿ ಮೌಲ್ಯದ ಎಂಡಿಎಂಎ ವಶಕ್ಕೆ, ಗ್ಯಾರೇಜಿಗೆಂದು ಕೊಠಡಿ ಪಡೆದು 2 ಲಕ್ಷಕ್ಕೆ ಒಳಬಾಡಿಗೆ, ಪ್ರತಿ ತಿಂಗಳು ಜಾಗ ಬದಲಿಸುತ್ತಿದ್ದ ಮುಂಬೈ ಖದೀಮರು..!!

ಮೈಸೂರು, ಜುಲೈ 30 : ಮೈಸೂರು ಹೊರ ವಲಯದಲ್ಲಿ ಭಾರೀ ಪ್ರಮಾಣದ ಡ್ರಗ್ಸ್ ಫ್ಯಾಕ್ಟರಿಯನ್ನು ಮಹಾರಾಷ್ಟ್ರ ಪೊಲೀಸರು ಶನಿವಾರ ರಾತ್ರಿ ದಾಳಿ ನಡೆಸಿ ಪತ್ತೆ ಮಾಡಿದ್ದರು. ಅಲ್ಲಿ ವಶಕ್ಕೆ ಪಡೆದ ಎಂಡಿಎಂಎ ಮಾದಕ ವಸ್ತುವಿನ ಮೌಲ್ಯ 381.96 ಕೋಟಿ ರೂ. ಎಂಬುದನ್ನು ಅಂದಾಜಿಸಿದ್ದು ರಾಜ್ಯದ ಜನರನ್ನು ಬೆಚ್ಚಿ ಬೀಳಿಸಿದೆ.
ನಗರದ ಬನ್ನಿಮಂಟಪದ ರಿಂಗ್ ರಸ್ತೆ ಬಳಿಯ ಗ್ಯಾರೇಜ್ ಮೇಲೆ ಮೈಸೂರಿನ ಪೊಲೀಸರ ಸಹಕಾರದೊಂದಿಗೆ ದಾಳಿ ನಡೆಸಿದ ಮಹಾರಾಷ್ಟ್ರ ಪೊಲೀಸರು, 187.97 ಕೆ.ಜಿ ತೂಕದ ಮಾದಕ ವಸ್ತುಗಳನ್ನು ವಶಪಡಿಸಿದ್ದರು. ಪ್ರಕರಣದಲ್ಲಿ ಮುಂಬೈನ ಅಂಧೇರಿಯ ಫಿರೋಜ್ ಮೌಲಾ ಶೇಕ್, ಗುಜರಾತ್ ನ ಸೂರತ್ ನಿವಾಸಿ ಶೇಕ್ ಆದಿಲ್, ಬೈರೋಚ್‌ನ ಸೈಯದ್ ಮಹಪೂಜ್ ಅಲಿ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಸೈಯದ್ ರಸಾಯನ ವಿಜ್ಞಾನ ವಿಷಯದಲ್ಲಿ ಡಿಪ್ಲೊಮಾ ಮಾಡಿದ್ದ ಎಂದು ಮುಂಬೈ ವಲಯ ಡಿಸಿಪಿ ದತ್ತ ನಾಲ್ವಡೆ ಮಾಹಿತಿ ನೀಡಿದ್ದಾರೆ.
ಮೈಸೂರಿನಲ್ಲಿ ತಯಾರಾಗುತ್ತಿದ್ದ ಮಾದಕ ವಸ್ತುವನ್ನು ಮಹಾರಾಷ್ಟ್ರ, ಗುಜರಾತ್‌ಗೆ ಪೂರೈಕೆ ಮಾಡಲಾಗುತ್ತಿತ್ತು ಎಂಬುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಇದರೊಂದಿಗೆ ಮಾದಕ ವಸ್ತು ತಯಾರಿಕೆಗೆ ಬಳಕೆ ಮಾಡುತ್ತಿದ್ದ ವಸ್ತುಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಮಾದಕ ವಸ್ತು ಪತ್ತೆಯಾಗಿರುವುದು ರಾಜ್ಯದಲ್ಲಿ ಇದೇ ಮೊದಲು. ಮಹಾರಾಷ್ಟ್ರ ಪೊಲೀಸರು ಡ್ರಗ್ ಪೆಡ್ಲರ್ ಸಲೀಂ ಇಂತಿಯಾಜ್ ಶೇಖ್ ನನ್ನು ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಿದಾಗ ಮೈಸೂರಿನಲ್ಲಿ ಫ್ಯಾಕ್ಟರಿ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು.
ಡ್ರಗ್ಸ್ ಫ್ಯಾಕ್ಟರಿ ಪತ್ತೆ ಬೆನ್ನಲ್ಲೇ ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಎಚ್ಚತ್ತಿದ್ದು ಡ್ರಗ್ಸ್ ಜಾಲವನ್ನು ಭೇದಿಸಲು ಏಳು ವಿಶೇಷ ತಂಡಗಳನ್ನು ರಚನೆ ಮಾಡಿದ್ದಾರೆ. ಸೋಮವಾರ ರಾತ್ರಿ ಕಾರ್ಯಾಚರಣೆ ನಡೆಸಿದ ಈ ತಂಡವು ಆರು ಡ್ರಗ್ಸ್ ಪೆಡ್ಲರ್ ಗಳನ್ನು ಬಂಧಿಸಿತ್ತು. ಮಂಡಿ ಮತ್ತು ಉದಯಗಿರಿ ಪೊಲೀಸ್ ಠಾಣೆ ವ್ಯಾಪ್ತಿಯ ಪುಲಕೇಶಿ ರಸ್ತೆ, ಮೀನಾ ಬಜಾರ್, ಮಹದೇವಪುರ ರಸ್ತೆ ಸೇರಿದಂತೆ ಬಡಾವಣೆ ವ್ಯಾಪ್ತಿಯ ಉದ್ಯಾನಗಳಲ್ಲಿ ರಾತ್ರಿ ವೇಳೆ ಗಸ್ತು ನಡೆಸಿ 27 ಮಾದಕ ವ್ಯಸನಿಗಳನ್ನು ಪತ್ತೆ ಹಚ್ಚಲಾಗಿದೆ. 5.7 ಕೆಜಿ ಗಾಂಜಾವನ್ನು ವಶಪಡಿಸಲಾಗಿದೆ.
20 ಸಾವಿರಕ್ಕೆ ಪಡೆದು 2 ಲಕ್ಷಕ್ಕೆ ಮರು ಬಾಡಿಗೆ !
20 ದಿನಗಳ ಹಿಂದೆ ಮಹೇಶ್ ಎಂಬುವವರಿಗೆ ಸೇರಿದ್ದ ಈ ಜಾಗವನ್ನು 20 ಸಾವಿರ ರೂ.ಗೆ ಬಾಡಿಗೆಗೆ ಪಡೆದಿದ್ದ ಅಜ್ಜಲ್ ಎಂಬಾತ ಅಲ್ಲಿ ಗ್ಯಾರೇಜ್ ನಿರ್ಮಿಸಿದ್ದ. ಬಳಿಕ ಜಾಗವನ್ನು ಎಂಡಿಎಂಎ ಡ್ರಗ್ಸ್ ತಯಾರು ಮಾಡುತ್ತಿದ್ದ ಆರೋಪಿಗಳಿಗೆ ಪ್ರತಿ ತಿಂಗಳು 2 ಲಕ್ಷ ರೂ.ಗೆ ಒಳ ಬಾಡಿಗೆಗೆ ನೀಡಿದ್ದ. ಅಜ್ಮಲ್ ನನ್ನು ಪೊಲೀಸರು ಬಂಧಿಸಿದ್ದಾರೆ.
ತಿಂಗಳಿಗೊಮ್ಮೆ ಸ್ಥಳ ಬದಲಾವಣೆ
ಡ್ರಗ್ಸ್ ಜಾಲದಡಿ ಬಂಧಿತರಾದವರು ಎರಡು ತಿಂಗಳಿಗೊಮ್ಮೆ ಡ್ರಗ್ಸ್ ಫ್ಯಾಕ್ಟರಿ ಉದ್ದೇಶಕ್ಕೆ ಸ್ಥಳ ಬದಲಾವಣೆ ಮಾಡುತ್ತಿದ್ದರು. ಈ ಹಿಂದೆ ಕೇರಳದ ಪಾಲಕ್ಕಾಡ್, ಮಹಾರಾಷ್ಟ್ರದ ನಾಸಿಕ್ ನಲ್ಲಿ ಮಾದಕ ವಸ್ತು ತಯಾರಿಸುತ್ತಿದ್ದರು. ಪೊಲೀಸರು ದಾಳಿ ನಡೆಸಿದಾಗ ಅಲ್ಲಿಂದ ತಪ್ಪಿಸಿಕೊಂಡು ಮೂರು ವಾರಗಳ ಹಿಂದೆ ಬನ್ನಿಮಂಟಪದ ರಿಂಗ್ ರಸ್ತೆಯ ಗ್ಯಾರೇಜ್‌ಗೆ ಬಂದು ಎಂಡಿಎಂಎ ತಯಾರಿಕೆಯಲ್ಲಿ ತೊಡಗಿದ್ದರು. ದ್ರವ ರೂಪದಲ್ಲಿದ್ದ ಮಾದಕ ವಸ್ತುವನ್ನು ಪೌಡರ್ ಮಾಡಿ ಪೂರೈಸುತ್ತಿದ್ದರು. ಡ್ರಗ್ಸ್ಮಾ ರಾಟಕ್ಕಾಗಿ ಬೇರೆಯದೇ ತಂಡವಿದ್ದು, ಈ ಜಾಲದ ಪತ್ತೆಗೆ ತನಿಖೆ ಮುಂದುವರಿದಿದೆ. ಶೆಡ್ ಪಕ್ಕದಲ್ಲೇ ಇರುವ ಟೀ ಅಂಗಡಿಗೆ ತಂಡದಲ್ಲಿದ್ದ ಯುವಕನೊಬ್ಬ ಬಂದು ಆಗಾಗ ಟೀ ತೆಗೆದುಕೊಂಡು ಹೋಗುತ್ತಿದ್ದ. ಮತ್ಯಾರೂ ಶೆಡ್ ನಿಂದ ಹೊರಕ್ಕೆ ಬರುತ್ತಿರಲಿಲ್ಲ. ಶೆಡ್ ನೊಳಗೆ ಗಾಳಿ, ಬೆಳಕು ಬಾರದಂತೆ ಮುಚ್ಚಲಾಗಿತ್ತು. ಸ್ಥಳೀಯರಿಗೆ ಗ್ಯಾರೇಜ್ ನಲ್ಲಿ ಎಷ್ಟು ಮಂದಿ ಇದ್ದಾರೆ ಎಂಬುದರ ಬಗ್ಗೆ ಮಾಹಿತಿಯೂ ಇರಲಿಲ್ಲ.