
ಧರ್ಮಸ್ಥಳ :ಶವ ಹೂತಿಟ್ಟ ಪ್ರಕರಣ ; ಸಮಾಧಿ ಅಗೆತ ಮುಂದುವರಿಕೆ, 2ನೇ ಜಾಗದಲ್ಲೂ ಸಿಕ್ಕದ ಸಾಕ್ಷ್ಯ, ಧರ್ಮಸ್ಥಳ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ ಸಿಬಂದಿ ಲಿಸ್ಟ್ ಕೇಳಿದ ಎಸ್ಐಟಿ, ಪೊಲೀಸರನ್ನೇ ವಿಚಾರಣೆಗೆ ಕರೆಯುವ ಸಾಧ್ಯತೆ..!!

ಬೆಳ್ತಂಗಡಿ, ಜುಲೈ 30 : ಧರ್ಮಸ್ಥಳದಲ್ಲಿ ಹೆಣ ಹೂತ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ಎಸ್ಐಟಿ ಅಧಿಕಾರಿಗಳು ಎರಡನೇ ದಿನವೂ ನೇತ್ರಾವತಿ ಸ್ನಾನಘಟ್ಟದ ಬಳಿ ಸಮಾಧಿ ಅಗೆತ ಆರಂಭಿಸಿದ್ದಾರೆ. ದೂರುದಾರ ಹೇಳಿದ್ದಂತೆ, ಮೊದಲು ಗುರುತು ಹಾಕಿದ್ದ ಜಾಗದಲ್ಲಿ ಕಾರ್ಮಿಕರು ಮತ್ತು ಹಿಟಾಚಿ ಬಳಸಿ ಎಂಟು ಅಡಿ ಆಳಕ್ಕೆ ಅಗೆಯಲಾಗಿತ್ತು. ಅಲ್ಲಿ ಯಾವುದೇ ಸಾಕ್ಷ್ಯ ಸಿಕ್ಕಿರಲಿಲ್ಲ. ಎರಡನೇ ದಿನವೂ ಮತ್ತೊಂದು ಗುರುತು ಹಾಕಿದ ಜಾಗದಲ್ಲಿ ಕಾರ್ಮಿಕರನ್ನು ಬಳಸಿ ಅಗೆಯಲಾಗಿದ್ದು, ಹೆಣ ಹೂತಿರುವ ಬಗ್ಗೆ ಕುರುಹು ಸಿಕ್ಕಿಲ್ಲ.
ಸ್ಥಳ ಮಹಜರು ಸಂದರ್ಭದಲ್ಲಿ ಧರ್ಮಸ್ಥಳ ಬಳಿಯ ನೇತ್ರಾವತಿ ಸ್ನಾನಘಟ್ಟದ ಸನಿಹದಲ್ಲೇ ಇರುವ ದಟ್ಟ ಕಾಡಿನಲ್ಲಿ 13 ಕಡೆ ಶವಗಳನ್ನು ಹೂತಿದ್ದಾಗಿ ದೂರುದಾರ ಹೇಳಿದ್ದು, ಇದರಂತೆ ಪೊಲೀಸರು ಆ ಜಾಗವನ್ನು ಮಾರ್ಕ್ ಮಾಡಿದ್ದರು. ಅಲ್ಲದೆ, ಆ ಜಾಗಕ್ಕೆ ಎಎನ್ಎಫ್ ಪಡೆಯ ಶಸ್ತ್ರಸಜ್ಜಿತ ಪೊಲೀಸರನ್ನು ಕಾವಲಿಗೆ ನಿಯೋಜಿಸಲಾಗಿತ್ತು. ಇದರ ಬೆನ್ನಲ್ಲೇ ಜುಲೈ 28ರ ಮಂಗಳವಾರದಿಂದ ಸಮಾಧಿ ಅಗೆಯುವ ಕೆಲಸ ಆರಂಭಿಸಲಾಗಿದೆ. ಮೊದಲ ದಿನ ಎಂಟು ಅಡಿ ಆಳ, 15 ಅಡಿ ಉದ್ದಕ್ಕೆ ಅಗೆಯಲಾಗಿದ್ದು ಅಸ್ಥಿಪಂಜರವಾಗಲೀ, ಇನ್ನಿತರ ಎಲುಬು ಆಗಲೀ ಸ್ಥಳದಲ್ಲಿ ಸಿಕ್ಕಿರಲಿಲ್ಲ.ಆನಂತರ ಪೊಲೀಸ್ ಶ್ವಾನವನ್ನೂ ಸ್ಥಳಕ್ಕೆ ಕರೆಸಲಾಗಿತ್ತು.
ಬುಧವಾರ ಧರ್ಮಸ್ಥಳ ಪಂಚಾಯತ್ ವತಿಯಿಂದ 20ರಷ್ಟು ಪೌರ ಕಾರ್ಮಿಕರನ್ನು ಸ್ಥಳಕ್ಕೆ ಕರೆಸಲಾಗಿದ್ದು, ಹಿಟಾಚಿ ಹೋಗದ ಕಾಡಿನ ಪ್ರದೇಶದಲ್ಲಿ ಅಗೆಯಲು ಆರಂಭಿಸಿದ್ದಾರೆ. ಎರಡನೇ ಮಾರ್ಕ್ ಹಾಕಿರುವ ಜಾಗದಲ್ಲೂ ಶವ ಹೂತಿರುವ ಬಗ್ಗೆ ಯಾವುದೇ ಸಾಕ್ಷ್ಯ ಲಭಿಸಿಲ್ಲ. ಸ್ಥಳದಲ್ಲಿ ಐದು ಅಡಿ ಆಳ ಮತ್ತು ಅಗಲದಲ್ಲಿ ಸಮಾಧಿಯನ್ನು ಅಗೆಯಲಾಗಿದೆ. ದೂರುದಾರ ವ್ಯಕ್ತಿಯ ಸಮ್ಮತಿಯಂತೆ ಆ ಸ್ಥಳದಲ್ಲಿ ಅಗೆಯುವುದನ್ನು ಸದ್ಯಕ್ಕೆ ನಿಲ್ಲಿಸಲಾಗಿದೆ.
ಧರ್ಮಸ್ಥಳ ಪೊಲೀಸರ ಲಿಸ್ಟ್ ಕೇಳಿದ ಎಸ್ಐಟಿ
ಇದೇ ವೇಳೆ, ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ 1995ರಿಂದ 2014ರ ವರೆಗೆ ಕರ್ತವ್ಯ ನಿರ್ವಹಿಸಿದ್ದ ಪೊಲೀಸ್ ಸಿಬಂದಿಯ ಲಿಸ್ಟ್ ನೀಡುವಂತೆ ಎಸ್ಐಟಿ ಅಧಿಕಾರಿಗಳು ದಕ್ಷಿಣ ಕನ್ನಡ ಎಸ್ಪಿ ಕಚೇರಿಗೆ ಕೇಳಿಕೊಂಡಿದ್ದಾರೆ. ಶವ ಹೂತಿಟ್ಟ ವಿಚಾರದ ಬಗ್ಗೆ ದೂರುದಾರ ವ್ಯಕ್ತಿಯನ್ನು ವಿಚಾರಣೆ ನಡೆಸಿದ್ದ ಸಂದರ್ಭದಲ್ಲಿ ಧರ್ಮಸ್ಥಳ ಪೊಲೀಸರ ಬಗ್ಗೆ ಆರೋಪ ಮಾಡಿದ್ದಾನೆ ಎನ್ನಲಾಗುತ್ತಿದ್ದು, ಕೆಲವು ಅಧಿಕಾರಿಗಳ ಬಗ್ಗೆ ಗುರುತರ ಆರೋಪ ಕೇಳಿಬಂದಿದ್ದರಿಂದ ಅವರನ್ನು ಎಸ್ಐಟಿ ಅಧಿಕಾರಿಗಳು ತನಿಖೆಗೆ ಒಳಪಡಿಸುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಧರ್ಮಸ್ಥಳ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಪೊಲೀಸರ ಎದೆಯಲ್ಲಿ ಢವ ಢವ ಶುರು ಆಗುವಂತಾಗಿದೆ.
ಎಸ್ಐಟಿ ತಂಡದ ಎಸ್ಪಿ ಜಿತೇಂದ್ರ ದಯಾಮ, ಪುತ್ತೂರು ವಿಭಾಗಾಧಿಕಾರಿ ಸ್ಟೆಲ್ಲಾ ಮೇರಿಸ್ ನೇತೃತ್ವದಲ್ಲಿ ದೂರುದಾರ ವ್ಯಕ್ತಿಯ ಸಮ್ಮುಖದಲ್ಲಿಯೇ ದಟ್ಟ ಕಾಡಿನ ನಡುವೆ ಸ್ಥಳ ಮಹಜರು ನಡೆಯುತ್ತಿದ್ದು, ಸಾರ್ವಜನಿಕರು ಮತ್ತು ಮಾಧ್ಯಮದವರು ಕುತೂಹಲದಿಂದ ಸ್ಥಳದಲ್ಲಿ ನೆರೆದಿದ್ದಾರೆ.