
ಮಂಗಳೂರು: 2012ರ ಮಿತ್ತಬಾಗಿಲು ಗುಂಡಿನ ಚಕಮಕಿ ಪ್ರಕರಣ ; ಕೇರಳ ಜೈಲಿನಲ್ಲಿದ್ದ ನಕ್ಸಲ್ ರೂಪೇಶ್ ಬಾಡಿ ವಾರೆಂಟಲ್ಲಿ ಕರೆತಂದ ಪೊಲೀಸರು, ಸ್ಥಳ ಮಹಜರು ಬಳಿಕ ಕಸ್ಟಡಿಗೆ..

ಬೆಳ್ತಂಗಡಿ, ಜುಲೈ 23 : ನಕ್ಸಲ್ ಮತ್ತು ಪೊಲೀಸರ ನಡುವೆ ಗುಂಡಿನ ದಾಳಿ ಪ್ರಕರಣದ ತನಿಖೆಗಾಗಿ ನಕ್ಸಲ್ ವಾದಿ, ಕೇರಳದ ತ್ರಿಶೂರ್ ಜಿಲ್ಲೆಯ ನಿವಾಸಿ ರೂಪೇಶ್ ಪಿ.ಆರ್.(57) ಎಂಬಾತನನ್ನು ಬೆಳ್ತಂಗಡಿ ಪೊಲೀಸರು ಬಾಡಿ ವಾರೆಂಟ್ ಪಡೆದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಮೂರು ದಿನ ಪೊಲೀಸ್ ಕಸ್ಟಡಿಗೆ ಪಡೆದಿದ್ದಾರೆ.
ಬಂಟ್ವಾಳ ಡಿವೈಎಸ್ಪಿ ವಿಜಯಪ್ರಸಾದ್ ನೇತೃತ್ವದಲ್ಲಿ ಬೆಳ್ತಂಗಡಿ ಪೊಲೀಸರು ಬಿಗಿ ಭದ್ರತೆಯಲ್ಲಿ ಆರೋಪಿ ಕರೆತಂದಿದ್ದು ಮಿತ್ತಬಾಗಿಲು ಗ್ರಾಮದ ಬೊಳ್ಳೆ ಪ್ರದೇಶದಲ್ಲಿ ಮಹಜರು ಪಕ್ರಿಯೆ ನಡೆಸಿ, ಬೆಳ್ತಂಗಡಿ ಕೋರ್ಟ್ ಗೆ ಹಾಜರುಪಡಿಸಿದ್ದಾರೆ. ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮ ಬೊಳ್ಳೆ ಪ್ರದೇಶದಲ್ಲಿ 2012ರ ಡಿ.10ರಂದು ನಕ್ಸಲ್- ಪೊಲೀಸ್ ನಡುವೆ ಗುಂಡಿನ ದಾಳಿ ನಡೆದಿತ್ತು. ನಕ್ಸಲರಾದ ವಿಕ್ರಂ ಗೌಡ, ಬಿ.ಜಿ.ಕೃಷ್ಣಮೂರ್ತಿ, ಸಾವಿತ್ರಿ, ಕುಪ್ಪುಸ್ವಾಮಿ, ಸುಂದರಿ, ರೂಪೇಶ್ ಪಿ.ಆರ್. ತಂಡದವರು ಬೊಳ್ಳೆ ಪ್ರದೇಶದಲ್ಲಿದ್ದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.
ಗುಂಡಿನ ಚಕಮಕಿಯಲ್ಲಿ ಪೊಲೀಸ್ ಸಿಬ್ಬಂದಿ ಸದಾಶಿವ ಚೌಧರಿ ಗಾಯಗೊಂಡಿದ್ದರು. ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಕ್ಸಲ್ ರೂಪೇಶ್‌ನನ್ನು 2015ರಲ್ಲಿ ಕೇರಳ ಪೊಲೀಸರು ಬಂಧಿಸಿದ್ದರು. 10 ವರ್ಷಗಳಿಂದ ಕೇರಳ ರಾಜ್ಯದ ತ್ರಿಶೂರ್ ಜಿಲ್ಲೆಯ ವಿಯ್ಯರು ಜೈಲಿನಲ್ಲಿದ್ದು, ಒಂದು ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಪ್ರಕಟವಾಗಿದೆ. ಈತನ ವಿರುದ್ಧ ಕೇರಳ, ಕರ್ನಾಟಕ, ತಮಿಳುನಾಡು ರಾಜ್ಯಗಳಲ್ಲಿ 17 ಪ್ರಕರಣಗಳಿದ್ದು, ತನಿಖೆಗೆ ಬಾಕಿ ಇದೆ. ಮಿತ್ತಬಾಗಿಲು ಗ್ರಾಮದ ಗುಂಡಿನ ಚಕಮಕಿ ಪ್ರಕರಣದಲ್ಲಿ ತನಿಖೆ ನಡೆಸಲು ತನಿಖಾಧಿಕಾರಿ ಬಂಟ್ವಾಳ ಡಿವೈಎಸ್ಪಿ ವಿಜಯ ಪ್ರಸಾದ್ ವಶಕ್ಕೆ ಪಡೆದಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧಿಸಿ ಈ ಹಿಂದೆ ನಕ್ಸಲರಾದ ಸಾವಿತ್ರಿ ಮತ್ತು ಬಿ.ಜಿ.ಕೃಷ್ಣಮೂರ್ತಿ ಅವರನ್ನು ಬೆಳ್ತಂಗಡಿ ಪೊಲೀಸರು ಕೇರಳ ಜೈಲಿನಿಂದ ಬಾಡಿ ವಾರಂಟ್ ಪಡೆದು ಕರೆತಂದು ತನಿಖೆ ನಡೆಸಿದ್ದರು. ಕೋರ್ಟಿಗೆ ಹಾಜರುಪಡಿಸಿದ ಸಂದರ್ಭದಲ್ಲಿ ರೂಪೇಶ್ ಮಾತನಾಡಿದ್ದು, ತನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಸುಳ್ಳು ಕೇಸು ದಾಖಲಿಸುವುದು ಸಂವಿಧಾನವಲ್ಲ. ತನ್ನ ಹೋರಾಟ ಮುಂದುವರಿಸುವುದಾಗಿ ತಿಳಿಸಿದ್ದಾರೆ.