ಮಂಗಳೂರು: ಎಲ್ಲೆಡೆ ದೀಪಾವಳಿ ಸಂಭ್ರಮದ ಸಿದ್ಧತೆ ವಿಶೇಷ ಮಕ್ಕಳ ಕಂಗಳಲ್ಲಿ ಬಣ್ಣದ ಹಣತೆಗಳ ಬೆಳಕು ಬೆಳಕಿನ ಹಬ್ಬಕ್ಕೆ ಬಣ್ಣ ತುಂಬಲು ಸಿದ್ಧರಾದ ವಿಶೇಷ ಸಾಮರ್ಥ್ಯ ಮಕ್ಕಳು
Friday, October 25, 2024
ಮಂಗಳೂರು: ಎಲ್ಲೆಡೆ ದೀಪಾವಳಿಗೆ ಸಡಗರದ ಸಿದ್ಧತೆ ನಡೆಯುತ್ತಿರುವಂತೆಯೇ ಮಂಗಳೂರಿನ ಚೇತನಾ ಬಾಲವಿಕಾಸ ಕೇಂದ್ರದ ವಿಶೇಷ ಸಾಮರ್ಥ್ಯದ ಮಕ್ಕಳು ಕೂಡಾ ಬೆಳಕಿನ ಹಬ್ಬಕ್ಕೆ ಬಣ್ಣ ತುಂಬಲು ಸಿದ್ಧರಾಗುತ್ತಿದ್ದಾರೆ.
ಮಂಗಳೂರಿನ ವಿಟಿ ರಸ್ತೆಯ ಸೇವಾ ಭಾರತಿ ಸಂಸ್ಥೆಯ ಅಂಗಸಂಸ್ಥೆ ಚೇತನಾ ಬಾಲವಿಕಾಸ ಕೇಂದ್ರದ ವಿಶೇಷ ಚೇತನ ವಿದ್ಯಾರ್ಥಿಗಳು ಹಣತೆಗಳಿಗೆ ಬಣ್ಣದ ಚಿತ್ತಾರ ನೀಡುವ ಮೂಲಕ ಬೆಳಕಿನ ಹಬ್ಬಕ್ಕೆ ಹೊಸ ಅರ್ಥ ಕಲ್ಪಿಸಿದ್ದಾರೆ. ಮಂಗಳೂರು ಆಸುಪಾಸಿನ 100ಕ್ಕೂ ಅಧಿಕ ವಿಶೇಷ ಚೇತನರಿಗೆ ಚೇತನಾ ಬಾಲವಿಕಾಸ ಕೇಂದ್ರ ಆಸರೆಯಾಗಿದೆ. ಇಲ್ಲಿನ 25 ವರ್ಷ ಮೇಲ್ಪಟ್ಟ ಸುಮಾರು 30ರಷ್ಟು ವಿಶೇಷ ಚೇತನ ಮಕ್ಕಳು ಅತ್ಯಂತ ತಾಳ್ಮೆಯಿಂದ ಶಿಸ್ತಿನಿಂದ ಹಣತೆಗಳಿಗೆ ನಾಜೂಕಾಗಿ ಬಣ್ಣ ಬಳಿಯುತ್ತಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಈ ಹೊಸ ಸಡಗರದಲ್ಲಿರುವ ಮಕ್ಕಳ ಉತ್ಪನ್ನಗಳಿಗೆ ಮಂಗಳೂರು ಮಾತ್ರವಲ್ಲ ದೇಶ, ವಿದೇಶಗಳಿಂದಲೂ ಬೇಡಿಕೆ ಬಂದಿದೆಯಂತೆ
ಚೇತನಾ ಬಾಲ ವಿಕಾಸ ಸಂಸ್ಥೆಯ ಮಕ್ಕಳು ಕಳೆದ 10 ವರ್ಷಗಳಿಂದ ದೀಪಾವಳಿ ಹಬ್ಬವನ್ನು ಬಣ್ಣದ ಹಣತೆಯೊಂದಿಗೆ
ಸಂಭ್ರಮಿಸುತ್ತಿದ್ದಾರೆ. ಅವರಿಗೆ ಪೋಷಕರು, ಸಿಬ್ಬಂದಿ, ಸ್ವಯಂಸೇವಕರು ಬೆಂಬಲ ನೀಡುತ್ತಿದ್ದಾರೆ. ಕಳೆದ ವರ್ಷ 13 ಸಾವಿರ ಹಣತೆಗಳನ್ನು ಬಣ್ಣ ಹಚ್ಚಿ ಸಿದ್ಧಪಡಿಸಿದ್ದರು. ಈ ಬಾರಿ ಬೇಡಿಕೆ ಹೆಚ್ಚಿದೆ ಎನ್ನುತ್ತಾರೆ ಸಂಸ್ಥೆಯ ಸಿಬಂದಿ ಮೀನಾಕ್ಷಿ. ಮುಂಬೈ, ಚೆನ್ನೈ, ಪುಣೆ, ಬೆಂಗಳೂರು, ಮೈಸೂರಿಗೆ ಸಾವಿರಾರು ಹಣತೆಗಳನ್ನು ಕಳುಹಿಸಲಾಗಿದೆ ಎನ್ನುತ್ತಾರೆ ಸಂಸ್ಥೆಯ ಮುಖ್ಯಸ್ಥರು.