ಚನ್ನಪಟ್ಟಣ ಉಪ ಚುನಾವಣೆ: ನಿಖಿಲ್ ಕುಮಾರಸ್ವಾಮಿ 113 ಕೋಟಿ ರೂ. ಆಸ್ತಿ ಒಡೆಯ! ವಜ್ರ, ಚಿನ್ನ ಬೆಳ್ಳಿ ಕಾರ್‌ಗಳೆಷ್ಟಿವೆ ಗೊತ್ತಾ? ಸ್ಥಿರಾಸ್ತಿ ಚರಾಸ್ತಿ ವಿವರ:
Friday, October 25, 2024
ಚನ್ನಪಟ್ಟಣ ಉಪ ಚುನಾವಣೆ: ನಿಖಿಲ್ ಕುಮಾರಸ್ವಾಮಿ 113 ಕೋಟಿ ರೂ. ಆಸ್ತಿ ಒಡೆಯ! ವಜ್ರ, ಚಿನ್ನ ಬೆಳ್ಳಿ ಕಾರ್‌ಗಳೆಷ್ಟಿವೆ ಗೊತ್ತಾ?
ಚನ್ನಪಟ್ಟಣ ಉಪ ಚುನಾವಣೆಗೆ ನಿಖಿಲ್ ಕುಮಾರಸ್ವಾಮಿ ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ತಮ್ಮ ಆಸ್ತಿ ವಿವರ ಬಹಿರಂಗ ಮಾಡಿದ್ದಾರೆ. ನಿಖಿಲ್ ಕುಮಾರಸ್ವಾಮಿ 113 ಕೋಟಿ ರೂ. ಆಸ್ತಿ ಹೊಂದಿದ್ದುಉ, 70 ಕೋಟಿ ರೂಪಾಯಿಗೂ ಅಧಿಕ ಸಾಲವಿದೆ. ಜತೆಗೆ ಕೆಜಿಗಟ್ಟಲೆ ಚಿನ್ನ, ಬೆಳ್ಳಿ ಇದೆ. ಈ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ.
ರಾಮನಗರ: ಚನ್ನಪಟ್ಟಣ ಉಪ ಚುನಾವಣೆ ಮೈತ್ರಿ ಅಭ್ಯರ್ಥಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ತಮ್ಮ ಆಸ್ತಿ ವಿವರ ಘೋಷಣೆ ಮಾಡಿಕೊಂಡಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಬಳಿ ಒಟ್ಟು 113 ಕೋಟಿ ರೂಪಾಯಿ ಆಸ್ತಿ ಇದೆ. ಈ ಪೈಕಿ 78.15 ಕೋಟಿ ರೂ. ಮೌಲ್ಯದ ಚರಾಸ್ತಿ, 29.34ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇದೆ. ಪತ್ನಿ ರೇವತಿ ನಿಖಿಲ್ ಕುಮಾರಸ್ವಾಮಿ ಹೆಸರಲ್ಲಿ 5.49 ಕೋಟಿ ರೂ. ಮೌಲ್ಯದ ಚರಾಸ್ತಿ, 43 ಲಕ್ಷ ರೂ. ಮೌಲ್ಯದ ಸ್ಥಿರಾಸ್ತಿ ಇದೆ. ಮಗ ಆವ್ಯಾನ್ ದೇವ್ ಹೆಸರಲ್ಲಿ 11ಲಕ್ಷ ಹಣ ಇದೆ
ಚಿನ್ನ ಬೆಳ್ಳಿ ಎಷ್ಟಿದೆ?
ನಿಖಿಲ್ ಹೆಸರಲ್ಲಿ 1.488 ಕೆಜಿ ಚಿನ್ನ, 16 ಕೆಜಿ ಬೆಳ್ಳಿ ಇದೆ. ರೇವತಿ ಹೆಸರಲ್ಲಿ 1.411 ಕೆಜಿ ಚಿನ್ನ, 33.05 ಕೆಜಿ ಬೆಳ್ಳಿ, 13 ಕ್ಯಾರೆಟ್ ಡೈಮಂಡ್ ಇದೆ. ನಿಖಿಲ್ ಹೆಸರಲ್ಲಿ 1 ಇನ್ನೋವ ಐ ಕ್ರಾಸ್, 1 ರೇಂಜ್ ರೋವರ್ ಹಾಗೂ ಎರಡು ಕ್ಯಾರಾವ್ಯಾನ್, 1 ಇನ್ನೋವಾ ಕ್ರಿಸ್ಟ ಕಾರು ಇದೆ.
ನಿಖಿಲ್ ಕುಮಾರಸ್ವಾಮಿ ಸಾಲ ಎಷ್ಟಿದೆ?
ನಿಖಿಲ್ ಕುಮಾರಸ್ವಾಮಿ ಬಿಬಿಎ ಪದವೀಧರನಾಗಿದ್ದು,ನಿಖಿಲ್ ಹೆಸರಲ್ಲಿ ಒಟ್ಟು 70. 44 ಕೋಟಿ ಸಾಲ ಇದೆ. ರೇವತಿ ಹೆಸರಲ್ಲಿ 4 ಕೋಟಿ 96ಲಕ್ಷ ಸಾಲ ಇದೆ.
ಎಚ್‌ಡಿ ಕುಮಾರಸ್ವಾಮಿ ಏನಂದ್ರು?
ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಮಾತನಾಡಿ, ನಾಮಪತ್ರ ಸಲ್ಲಿಕೆ ವೇಳೆ ಜನಸ್ತೋಮವೇ ಕಾಂಗ್ರೆಸ್‌ಗೆ ಉತ್ತರ. ಸಿಎಂ, ಡಿಸಿಎಂ ಸಾಕಷ್ಟು ಮಾತನಾಡಿದ್ದಾರೆ.
2018ರಲ್ಲಿ ನೀವೆ ಚುನಾವಣೆ ನಡೆಸಿ ಗೆಲ್ಲಿಸಿದ್ರಿ. ಒಂದು ದಿನ ನಾನು ಮತಕೇಳಲು ಬರಲಿಲ್ಲ. ಏಕಾಂಗಿಯಾಗಿ ರೈತರ ಪಕ್ಷ ಉಳಿಸಲು ಶ್ರಮಹಾಕಿದ್ದೇನೆ. ರಾಜ್ಯದಲ್ಲಿ ರೈತಪರ ಧ್ವನಿ ಎತ್ತಲು ಶಕ್ತಿ ಕೊಟ್ಟಿದ್ದೀರಿ. ರಾಮನಗರ ಜನ ನಾಲ್ಕು ಬಾರಿ ಆಯ್ಕೆ ಆಗಿದೆ.
ನಾನು ಸಿಎಂ ಆಗಿ 14 ತಿಂಗಳು ರಾಜ್ಯದಲ್ಲಿ ಆಡಳಿತ ಮಾಡಿದೆ. ಕಾಂಗ್ರೆಸ್ ನವರು ಅಧಿಕಾರ ಮಾಡಲು ಬಿಡಲಿಲ್ಲ. ಆದರೂ ರೈತರ ಸಾಲಮನ್ನಾ ಮಾಡಿದ್ದೆನೆ. ಸಾಕಷ್ಟು ಕ್ಷೇತ್ರಕ್ಕೆ ಅನುದಾನ ನೀಡಿ ಅಭಿವೃದ್ಧಿ ಮಾಡಿದ್ದೇನೆ ಎಂದರು
ನಿಖಿಲ್ ಗೆಲ್ಲುವುದು ನಿಶ್ಚಿತ
ಬಹಿರಂಗ ಸಭೆಯಲ್ಲಿ ಡಾ.ಮಂಜುನಾಥ್ ಮಾತನಾಡಿ, " ಈ ಬಾರಿ ಮೈತ್ರಿ ಅಭ್ಯರ್ಥಿ ಗೆಲ್ಲುವುದು ನಿಶ್ಚಿತ. ಕಳೆದ ಲೋಕಸಭಾ ಚುನಾವಣೆಗಿಂತ ಅಧಿಕ ಮತಗಳು ನಿಖಿಲ್‌ಗೆ ಬರಬೇಕು. ಇದು ಕೇವಲ ಉಪಚುನಾವಣೆ ಅಲ್ಲ ಭವಿಷ್ಯದ ಚುನಾವಣೆ. ಮೋದಿ ಅವರ ಅಭಿವೃದ್ಧಿ ಕೆಲಸ ಎನ್‌ಡಿಎ ಅಭ್ಯರ್ಥಿ ಗೆಲುವಿಗೆ ಸಹಕಾರಿ ಆಗುತ್ತೆ. ಮೋದಿಯವರು ಕಿಸಾನ್ ಸನ್ಮಾನ್ ಯೋಜನೆಯಡಿ ರೈತರಿಗೆ ಅನುಕೂಲ ಆಗುತ್ತೆ. ಮಾಜಿ ಪ್ರಧಾನಿ ದೇವೇಗೌಡರ ಕೊಡುಗೆ ಕ್ಷೇತ್ರಕ್ಕೆ ಅಪಾರ. ಇಗ್ಗಲೂರು ಡ್ಯಾಂ ನಿರ್ಮಾಣ ಮಾಡಿ ರೈತರಿಗೆ ಅನುಕೂಲ ಮಾಡಿಕೊಟ್ರು. ನಿಖಿಲ್ ಕುಮಾರಸ್ವಾಮಿ ಗೆ ಚುನಾವಣೆಗೆ ನಿಲ್ಲಬೇಕು ಎಂಬ ಬಯಕೆ ಇರಲಿಲ್ಲ. ರಾಜಕೀಯ ಬೆಳವಣಿಗೆಯಿಂದ ಅವರು ಸ್ಪರ್ಧೆಗೆ ಬರಬೇಕು. ಹಾಗಾಗಿ ಅವರು ಕಾರ್ಯಕರ್ತರ ಅಭ್ಯರ್ಥಿ " ಎಂದರು.