ಬಿಹಾರ :ಯೂಟ್ಯೂಬ್ ವಿಡಿಯೋ ನೋಡಿಕೊಂಡು ಗರ್ಭಿಣಿಗೆ ಆಪರೇಷನ್ ಮಾಡಿದ ವೈದ್ಯರು; ತಾಯಿ ಸಾವು!

ಬಿಹಾರ :ಹೆರಿಗೆ ನೋವಿನಿಂದ ನರಳುತ್ತಿದ್ದ ಮಹಿಳೆಗೆ ಬಿಹಾರದ ವೈದ್ಯರೊಬ್ಬರು ಯೂಟ್ಯೂಬ್ ವಿಡಿಯೋ ನೋಡಿಕೊಂಡು ಗರ್ಭಿಣಿ ಆಪರೇಷನ್ ಮಾಡಿದ್ದಾರೆ. ಈ ಆಪರೇಷನ್ ಬಳಿಕ ಮಗುವನ್ನು ಹೊರತೆಗೆಯಲಾಗಿದ್ದು, ಹೆರಿಗೆಯಾಗುತ್ತಿದ್ದಂತೆ ತಾಯಿ ಸಾವನ್ನಪ್ಪಿದ್ದಾರೆ.
ಮೃತ ಮಹಿಳೆಯನ್ನು ಸ್ವಾತಿ ದೇವಿ ಎಂದು ಗುರುತಿಸಲಾಗಿದೆ. ಭಾಗಲ್ಪುರ ಜಿಲ್ಲೆಯ ಕಹಲ್ಗಾಂವ್ ಬ್ಲಾಕ್‌ನ ಎಚ್ಚಾರಿ ಪಂಚಾಯತ್‌ನ ಶ್ರೀಮತ್ ಸ್ಥಾನ ಬಳಿ ನಕಲಿ ವೈದ್ಯರ ನಿರ್ಲಕ್ಷ್ಯದಿಂದ ಗರ್ಭಿಣಿ ಪ್ರಾಣ ಕಳೆದುಕೊಂಡಿದ್ದಾರೆ. .
ಗರ್ಭಿಣಿಯಾದ ನಂತರ ಆ ಮಹಿಳೆ ರಸಲ್‌ಪುರದಲ್ಲಿರುವ ತನ್ನ ಹೆತ್ತವರ ಮನೆಯಲ್ಲಿ ವಾಸಿಸುತ್ತಿದ್ದರು. ಅಲ್ಲಿ ಅವರು ಶ್ರೀಮಠ ಸ್ಥಾನದ ಬಳಿಯ ನಕಲಿ ವೈದ್ಯರ ಬಳಿ ಚಿಕಿತ್ಸೆ ಪಡೆಯುತ್ತಿದ್ದರು.
ಗುರುವಾರ ರಾತ್ರಿ ಸ್ವಾತಿ ದೇವಿಗೆ ಹಠಾತ್ತನೆ ಹೆರಿಗೆ ನೋವು ಕಾಣಿಸಿಕೊಂಡಿತು. ಆಕೆಯ ಕುಟುಂಬವು ತಕ್ಷಣ ಆಕೆಯನ್ನು ಅದೇ ಕ್ಲಿನಿಕ್ಗೆ ಕರೆದೊಯ್ದರು. ಆಕೆಯನ್ನು ಪರೀಕ್ಷಿಸಿದ ನಂತರ ವೈದ್ಯರು ತಮ್ಮ ಸಹಾಯಕರೊಂದಿಗೆ ಆಪರೇಷನ್ ಮಾಡಲು ಸಜ್ಜಾದರು. ಆ ಮಹಿಳೆಯ ಕುಟುಂಬದ ಒಪ್ಪಿಗೆಯನ್ನು ಪಡೆದ ನಂತರ ವೈದ್ಯರು ಹೆರಿಗೆಯ ಕಾರ್ಯವಿಧಾನವನ್ನು ಅರ್ಥ ಮಾಡಿಕೊಳ್ಳಲು ಯೂಟ್ಯೂಬ್ ವೀಡಿಯೊವನ್ನು ವೀಕ್ಷಿಸಿದರು. ಬಳಿಕ ಆ ಮೊಬೈಲನ್ನು ಆಪರೇಷನ್ ಮಾಡುವ ಜಾಗದಲ್ಲಿಟ್ಟುಕೊಂಡೇ ಅಗತ್ಯ ವೈದ್ಯಕೀಯ ಸಹಾಯವಿಲ್ಲದೆಯೇ ಆಪರೇಷನ್ ಪ್ರಾರಂಭಿಸಿದರು.
ಈ ವೇಳೆ ಆ ಮಹಿಳೆಗೆ ತೀವ್ರ ರಕ್ತಸ್ರಾವವಾಗಿ ಆಪರೇಷನ್ ನಡೆಯುತ್ತಿದ್ದ ಜಾಗದಲ್ಲೇ ಸಾವನ್ನಪ್ಪಿದರು. ಆದರೂ ಮಗುವನ್ನು ಆಕೆಯ ಹೊಟ್ಟೆಯಿಂದ ಸುರಕ್ಷಿತವಾಗಿ ಹೊರತೆಗೆಯಲಾಯಿತು.
ಈ ವಿಷಯ ತಿಳಿಯುತ್ತಿದ್ದಂತೆ ಮಹಿಳೆಯ ಕುಟುಂಬಸ್ಥರು ಹಾಗೂ ಊರಿನವರು ಆಸ್ಪತ್ರೆಗೆ ಮುತ್ತಿಗೆ ಹಾಕಿ ವೈದ್ಯರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಮಹಿಳೆಯ ಶವವನ್ನು ಸ್ವಾಧೀನಪಡಿಸಿಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.